ನಿರುತ್ಸಾಹದ ಉದ್ಯೋಗ ಮೇಳ….!!!

ಕೊರಟಗೆರೆ

       ರಾಜ್ಯ ಸರ್ಕಾರ ಉದ್ಯೋಗ ಸೃಷ್ಟಿಸುವ ಮಹತ್ವಾಕಾಂಕ್ಷೆಯೊಂದಿಗೆ ಪ್ರಾರಂಭಿಸಿದ ಉದ್ಯೋಗ ಮೇಳ ಕಾರ್ಯಕ್ರಮವು ಮಂಗಳವಾರ ಕೊರಟಗೆರೆ ಪಟ್ಟಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ತಹಸೀಲ್ದಾರ್‍ರ ನಿರುತ್ಸಾಹಕ್ಕೆ ಕೇವಲ ಎಂಟು ಜನಕ್ಕೆ ಮಾತ್ರ ಸೀಮಿತವಾಗಿ ಇಡೀ ಕಾರ್ಯಕ್ರಮ ಹಳ್ಳ ಹಿಡಿದ ಪ್ರಸಂಗ ಜರುಗಿದೆ.

         ಕೊರಟಗೆರೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತುಮಕೂರಿನಲ್ಲಿ ಫೆ.14 ರಂದು ನಡೆಯಲಿರುವ ಉದ್ಯೋಗ ಮೇಳದ ಪೂರ್ವಭಾವಿಯಾಗಿ ತಾಲ್ಲೂಕಿನ ನಿರುದ್ಯೋಗಿಗಳಿಂದ ವಿವಿಧ ಇಲಾಖೆ ಮುಖೇನ ಅರ್ಜಿ ಸ್ವೀಕಾರ ಕಾರ್ಯಕ್ರಮವು ಬೆರಳೆಣಿಕೆಯಷ್ಟು ಜನಕ್ಕೆ ಸೀಮಿತವಾಗಿ, ತಾಲ್ಲೂಕು ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಚಾರ ಕೊರತೆಯಿಂದಾಗಿ ಇಡೀ ಕಾರ್ಯಕ್ರಮ ನಗೆಪಾಟಲಿಗೆ ಗುರಿಯಾಗಿ ಅರ್ಜಿದಾರರಿಲ್ಲದೇ ಆಯೋಜನಾಧಿಕಾರಿಗಳು ಇರಿಸು ಮುರಿಸು ಅನುಭವಿಸುವ ಘಟನೆ ಜರುಗಿತು.

       ಸರಕಾರದ ಕೌಶಲ್ಯ ಅಭಿವೃದ್ದಿ ಉದ್ಯಮ ಶೀಲತೆ ಜೀವನೋಪಾಯ ಇಲಾಖೆಯೊಂದಿಗೆ ತುಮಕೂರು, ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಕೌಶಲ್ಯ ಮಿಷನ್ ಫೆ.14 ರಂದು ತುಮಕೂರಿನಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಮೇಳ ಮುಖಾಂತರ ಕೆಲಸ ಕೊಡುವ ಮಹತ್ತರ ಕಾರ್ಯವನ್ನು ಹಮ್ಮಿಕೊಂಡಿದೆ. ಇದರ ನೋಂದಣಿಯನ್ನು ತಾಲ್ಲೂಕು ಆಡಳಿತ ವಿವಿಧ ಇಲಾಖೆಗಳ ಮುಖಾಂತರ ಪೂರ್ವಭಾವಿಯಾಗಿ ಮಾಡಬೇಕಿದೆ.

          ಮುಖ್ಯವಾಗಿ ನಿರುದ್ಯೋಗಿ ಯುವಕ ಯುವತಿಯರಿಗೆ ನೋಂದಣಿ ಮತ್ತು ಅರಿವಿನ ಕೆಲಸ ಮಾಡಬೇಕಿತ್ತು. ಫೆ.5 ರಂದು ಗ್ರಾಮಾಂತರ ಪ್ರದೇಶದ ನೋಂದಣಿ ಮತ್ತು ತರಬೇತಿ ಕಾರ್ಯಕ್ರಮವನ್ನು ಕೊರಟಗೆರೆ ತಹಸೀಲ್ದಾರ್‍ರವರು ಯಾವುದೆ ರೀತಿಯ ಪೂರ್ವ ಸಿದ್ದತೆ ಇಲ್ಲದೆ, ಯುವಜನತೆಗೆ ಪ್ರಚಾರವಿಲ್ಲದೆ ತಕ್ಷಣಕ್ಕೆ ಪಟ್ಟಣದ ಪ್ರಥವ್ಮದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದರು.

         ಈ ಸಂಬಂಧ ಪ್ರಚಾರದ ಕೊರತೆಯಿಂದ ಯಾರಿಗೂ ವಿಷಯ ತಿಳಿಸದೇ ಕಾಲೇಜಿನ ಚಿಕ್ಕಕೊಠಡಿಯಲ್ಲಿ ಕೆಲ ವಿದ್ಯಾರ್ಥಿಗಳನ್ನು ಕೂಡಿಹಾಕಿಕೊಂಡು ಉದ್ಘಾಟನಾ ಕ್ರಾರ್ಯ ಮುಗಿಸಿದ್ದಾರೆ. ಈ ಕಾರ್ಯಕ್ರಮದ ಉದ್ಘಾಟನೆಗೆ ಗ್ರಾಮಾಂತರ ಭಾಗದ ನಿರುದ್ಯೋಗಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ, ಮಾಧ್ಯಮಗಳಿಗೆ ಮುಂಚಿತವಾಗಿ ತಿಳಿಸಬೇಕಿತ್ತು. ಆದರೆ ತಹಸೀಲ್ದಾರ್ ನಾಗರಾಜು ಯಾವ ಕೆಲಸವನ್ನೂ ಮಾಡಿಸದೇ ಜಿಲ್ಲಾಧಿಕಾರಿಗಳಿಂದ ದೂರವಾಣಿ ಕರೆ ಬಂತು ಎಂದು ತರಾತುರಿಯಲ್ಲಿ ಇನ್ನೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಹತ್ತಾರು ಮಂದಿ ವಿದ್ಯಾರ್ಥಿಗಳನ್ನು ಕೂಡಿಹಾಕಿಕೊಂಡು ಕಾರ್ಯಕ್ರಮವನ್ನ ಮುಗಿಸಿದ್ದು, ತಹಸೀಲ್ದಾರ್‍ರವರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

         ಇದೇ ರೀತಿಯ ನಿರ್ಲಕ್ಷ್ಯವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್ ಮಾಡಿದ್ದು, ಉಪಮುಖ್ಯಮಂತ್ರಿ, ತುಮಕೂರು ಜಿಲ್ಲಾ ಉಸ್ತುವಾರಿ ಮಂತ್ರಿ ಡಾ.ಜಿ ಪರಮೇಶ್ವರ್ ಕ್ಷೇತ್ರದಲ್ಲೇ ಈ ರೀತಿಯ ನಿರ್ಲಕ್ಷ್ಯ ತೋರಿರುವುದು ಉಪಮುಖ್ಯಮಂತ್ರಿಗಳಿಗೆ ಅಧಿಕಾರಿಗಳು ತೋರಿದ ಅಗೌರವವಾಗಿದೆ ಎಂದು ಸಾರ್ವಜನಿಕರು, ಗ್ರಾಮಾಂತರ ನಿರುದ್ಯೋಗಿ ಯುವಜನತೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link