ಮಾನವೀಯತೆ ವೃದ್ಧಿಸಲು ಶಿಕ್ಷಣ ನೆರವಾಗಲಿ

ತುಮಕೂರು

    ಸ್ವಾತಂತ್ರ್ಯ ಪೂರ್ವದಲ್ಲಿ ಶೇಕಡ 12ರಷ್ಟಿದ್ದ ಭಾರತದ ಅಕ್ಷರಸ್ಥರ ಪ್ರಮಾಣ ಸ್ವಾತಂತ್ರ್ಯಾ ನಂತರ ಶೇಕಡ 80ರಷ್ಟಾಗಿರುವುದು ಕಡಿಮೆ ಸಾಧನೆಯಲ್ಲ. ಉತ್ತಮ ಮಾನವ ಸಂಪನ್ಮೂಲ ಒದಗಿಸುವಲ್ಲಿ ಭಾರತ ಪ್ರಪಂಚದಲ್ಲಿ ಪ್ರಥಮ ಸ್ಥಾನದಲ್ಲಿದೆ. ಗುಣಾತ್ಮಕವಾದ ಮಾನವ ಸಂಪನ್ಮೂಲಕ್ಕೆ ಶಿಕ್ಷಣವೇ ಶಕ್ತಿಯಾಗಿದೆ. ಇಂದು ಮಾನವೀಯ ಶಿಕ್ಷಣದ ಅಗತ್ಯವಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದರು

    ಬುಧವಾರ ನಡೆದ ತುಮಕೂರು ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಬಲಿಷ್ಠವಾಗಿ ಬೆಳೆದಿದೆ. ದೇಶದಲ್ಲಿ ಆಗಬೇಕಾಗದ ಬದಲಾವಣೆಗಳು ಮುಂದಿನ ಪೀಳಿಗೆ ತೃಪ್ತಿ, ಶಾಂತಿ, ಸಮಾಧಾನದಿಂದ ಬದುಕುವಂತಾಗಬೇಕು ಎಂದು ಆಶಿಸಿದರು.

  ದೊಡ್ಡ ಜನಸಂಖ್ಯೆ, ವೈವಿಧ್ಯಮಯ ಸಂಸ್ಕೃತಿ ಹೊಂದಿರುವ ಭಾರತದಲ್ಲಿ ಎಲ್ಲರೂ ಸಮಾನರಾಗಿ ಬಾಳಬೇಕೆಂಬ ಆಶಯದ ಶ್ರೇಷ್ಠ ಸಂವಿಧಾನ ನಮ್ಮಲ್ಲಿದೆ. ಆ ಆಶಯಗಳಿಗೆ ಧಕ್ಕೆಯಾಗದ ರೀತಿಯಲ್ಲಿ ದೇಶದಲ್ಲಿ ಬದಲಾವಣೆಯಾಗಬೇಕು. ಆದರೆ, ಪ್ರಸ್ತುತದ ಘಟನಾವಳಿಗಳು ಆತಂಕಕಾರಿಯಾಗಿವೆ ಎಂದು ಹೇಳಿದರು.

   ಸ್ವಾತಂತ್ರ್ಯ ಪೂರ್ವದಲ್ಲಿ ಎಲ್ಲರಿಗೂ ಶಿಕ್ಷಣ ಕಲಿಯುವ ಅವಕಾಶವಿರಲಿಲ್ಲ. ಮೊದಲ ಪ್ರಧಾನಿ ನೆಹರೂ ಅವರು, ದೇಶದ ಜನರನ್ನು ಪ್ರಜ್ಞಾವಂತರನ್ನಾಗಿ ಮಾಡಲು ಶಿಕ್ಷಣ, ಕೃಷಿ, ಕೈಗಾರಿಗೆಗಳಿಗೆ ಪಂಚವಾರ್ಷಿಕ ಯೋಜನೆಯಲ್ಲಿ ಆದ್ಯತೆ ನೀಡಿದರು. ಆಗಿನಿಂದ ಹೆಚ್ಚು ಹೆಚ್ಚು ಶಾಲಾ ಕಾಲೇಜುಗಳು ಆರಂಭವಾದವು. ಹಳ್ಳಿಗಾಡಿನ ಜನರು ಶಿಕ್ಷಣ ಕಲಿಯಲು ಅವಕಾಶವಾಯಿತು. ಅಂತಹ ಪ್ರಯತ್ನದಿಂದಾಗಿ ದೇಶದಲ್ಲಿ ಸಾಕ್ಷರಾತಾ ಪ್ರಮಾಣ ಹೆಚ್ಚಾಯಿತು. ಇದು ದೇಶದ ಮಹತ್ವದ ಬೆಳವಣಿಗೆ ಎಂದು ಡಾ. ಪರಮೇಶ್ವರ್ ತಿಳಿಸಿದರು.

   ಇಂದು ಸರ್ಕಾರದ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಸೇವೆ ನೀಡುತ್ತಿವೆ. ಕಾಲೇಜು, ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳವರೆಗೂ ವಿಶ್ವವಿದ್ಯಾಲಯ ವಿಸ್ತಾರಗೊಳ್ಳುವ ಮಟ್ಟಕ್ಕೆ ಶಿಕ್ಷಣ ವ್ಯವಸ್ಥೆ ಬೆಳೆದಿದೆ. ತಾವು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ತುಮಕೂರು ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದು ಮಾಡಿದ ಪ್ರಯತ್ನ ಯಶಸ್ವಿಯಾಯಿತು. ಜಿಲ್ಲೆಗೊಂದು ವಿವಿ ಸಾಧ್ಯವೇ ಎನ್ನುವ ಪರಿಸ್ಥಿತಿಯಲ್ಲಿ, ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆದದ್ದು ಖುಷಿಯ ವಿಚಾರ ಎಂದು ಹೇಳಿದರು.

   ತುಮಕೂರು ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ತಾವು ಪಿಯೂಸಿ, ಒಂದು ವರ್ಷ ಬಿಎಸ್ಸಿ ಓದಿದ ಸಂದರ್ಭ ನೆನಪಿಸಿಕೊಂಡ ಡಾ. ಪರಮೇಶ್ವರ್, ಆಗಿನ ಕಾಲೇಜು ಪ್ರಾಧ್ಯಾಪಕರು, ಶೈಕ್ಷಣಿಕ ವಾತಾವರಣ ಸ್ಮರಿಸಿಕೊಂಡರು. ಆಗ ಕಾಲೇಜುಗಳಲ್ಲಿ ವಿದ್ಯಾರ್ಥಿ ಚಟುವಟಿಕೆಗಳು ಪ್ರಖರವಾಗಿದ್ದವು, ಈಗ ವಿದ್ಯಾರ್ಥಿಗಳಲ್ಲಿ ಅಂತಹ ಚಟುವಟಿಕೆಗಳು ಬಹುತೇಕ ಸತ್ತುಹೋಗಿವೆ ಎಂದರು.ಹಳೆ ವಿದ್ಯಾರ್ಥಿ ಸಂಘಕ್ಕೆ ನೀಡಿರುವ ಜಾಗ ಸಾಕಾಗುವುದಿಲ್ಲ, ದೊಡ್ಡ ಜಾಗ ನೀಡುವಂತೆ ವಿವಿ ಕುಲಪತಿ ಪ್ರೊ. ಸಿದ್ದೇಗೌಡರಿಗೆ ಮನವಿ ಮಾಡಿದರು.

    ಇದೇ ಕಾಲೇಜಿನ ವಿದ್ಯಾರ್ಥಿಯಾಗಿ ನಂತರ ಈ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಅಥಿತಿಯಾಗಿ ಭಾಗವಹಿಸಿ, ಮನುಷ್ಯನ ಒಳಗೆ ನಾಯಿ, ನರಿ, ಹುಲಿ, ಸಿಂಹ, ಚಿರತೆಗಳು ವಾಸ ಮಾಡುತ್ತವೆ. ಶಿಕ್ಷಣ ಮನುಷ್ಯನಲ್ಲಿನ ಮೃಗೀಯ ಭಾವನೆಯನ್ನು ನಾಶ ಮಾಡಬೇಕು. ಸಾಹಿತಿಯಾಗಲಿ, ರಾಜಕಾರಣಿಯಾಗಲಿ, ಡಾಕ್ಟರ್, ಇಂಜಿನಿಯರ್, ಪ್ರಾಧ್ಯಾಪಕನಾಗಲಿ ಮನುಷ್ಯ ಆಗದಿದ್ದರೆ ಶಿಕ್ಷಣ ಪಡೆದಿದ್ದಕ್ಕೆ ಅರ್ಥವಿಲ್ಲ ಎಂದರು.

    ಮೈಸೂರು ಭಾಗದ ಜನ ನಾಲ್ವಡಿ ಕೃಷ್ಣರಾಜ ಒಡೆಯರರನ್ನು ಮರೆಯಬಾರದು. ಅವರು ತಮ್ಮ ಹೆಂಡತಿ ಮೈಮೇಲಿನ ಒಡವೆಗಳನ್ನು ಮಾರಾಟ ಮಾಡಿ ಕೆಆರ್‍ಎಸ್ ನಿರ್ಮಾಣ ಮಾಡಿದರು. ಎಲ್ಲಾ ವರ್ಗದವರೂ ಅಕ್ಷರ ಕಲಿಯಬೇಕು ಎಂಬ ಉದ್ದೇಶದಿಂದ ಒಡೆಯರು ಆಗಿನ ಕಾಲದಲ್ಲೇ 11 ಸಾವಿರ ರಾತ್ರಿ ಶಾಲೆಗಳನ್ನು ತೆರೆದಿದ್ದರು. ಅದೊಂದು ದಾಖಲೆ ಎಂದು ಹೇಳಿದರು.

     ಸಾವಿತ್ರಿ ಬಾಯಿ ಪುಲೆ ಇಲ್ಲದಿದ್ದರೆ ಹೆಣ್ಣು ಮಕ್ಕಳ ಶಿಕ್ಷಣ ಆರಣಭವಾಗುತ್ತಲೇ ಇರಲಿಲ್ಲ. ಅವರು ಹೆಣ್ಣು ಮಕ್ಕಳ ಶಾಲೆ ತೆರೆದು, ಶಿಕ್ಷಣ ಕಲಿಸಿದ ಮೊದಲ ಶಿಕ್ಷಕಿ. ಆನವರಿ 3ರಂದು ಸಾವಿತ್ರಿ ಬಾಯಿ ಪುಲೆಯವರ ಜನ್ಮದಿನ. ವಿವೇಕ ಇರುವ ಶಾಲಾ ಕಾಲೆಜುಗಳವರು ಸಾವಿತ್ರಿ ಬಾಯಿ ಪುಲೆಯವರ ಜನ್ಮದಿನ ಆಚರಿಸಬೇಕು. ಇವರ ಜನ್ಮದಿನವನ್ನು ರಾಷ್ಟ್ರೀಯ ದಿನವನ್ನಾಗಿ ಆಚರಿಸಬೇಕು ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.

    ಮಾನವ ಸಂಪನ್ಮೂಲ ಹೆಚ್ಚಾಗಿರುವ ಈ ದೇಶ, ಹತ್ಯೆಯಿಲ್ಲದ, ಅತ್ಯಾಚಾರವಿಲ್ಲದ, ಆತ್ಮಹತ್ಯೆಯಿಲ್ಲದ ದೇಶವಾಗಿ ನಿರ್ಮಾಣವಾಗಬೇಕು ಎಂದು ಆಶಿಸಿದರು.ಕಾಲೇಜು ದಿನಗಳನ್ನು ಮೆಲುಕುಹಾಕಿದ ಬರಗೂರುರವರು, ಸರ್ಕಾರಿ ಬಸ್ ಡ್ರೈವರ್ ಆಗಬೇಕು ಎಂದು ಬಾಲ್ಯದಲ್ಲಿ ಆಸೆ ಪಟ್ಟಿದ್ದ ನಾನು ನಂತರ ಡಾಕ್ಟರಾಗಿ ಹಳ್ಳಿ ಜನರ ಸೇವೆ ಮಾಡಬೇಕು ಎಂದು ಈ ಕಾಲೇಜಿನಲ್ಲಿ ವಿಜ್ಞಾನ ಕೋರ್ಸಿಗೆ ಸೇರಿದೆ. ಆ ವೇಳೆಗೆ ಸಾಹಿತ್ಯ ಬರವಣಿಗೆಯಲ್ಲಿ ಆಸಕ್ತಿ ಇದ್ದಿದರಿಂದ ಕನ್ನಡ ಭಾಷೆ ಅಧ್ಯಯನ ಮಾಡಬೇಕು ಎಂದು ಕಲಾ ವಿಭಾಗಕ್ಕೆ ಸೇರಿದೆ. ಸೈನ್ಸ್ ವಿದ್ಯಾರ್ಥಿಗಳು ಬುದ್ದಿವಂತರು, ಆಟ್ರ್ಸ್ ವಿದ್ಯಾರ್ಥಿಗಳು ದಡ್ಡರು ಎಂಬ ಭಾವನೆ ಆಗ ಇತ್ತು. ನಾನು ದಡ್ಡನಲ್ಲ ಎಂದು ತಿಳಿಸಲು ವಿಜ್ಞಾನ, ಗಣಿತದಲ್ಲಿ 86 ಪರ್ಸೆಂಟ್ ಪಡೆದಿದ್ದ ಎಸ್ಸೆಸ್ಸೆಲ್ಸಿ ಮಾಕ್ರ್ಸ್ ಕಾರ್ಡ್ ತೋರಿಸುತ್ತಾ ಮಾಕ್ರ್ಸ್‍ವಾದಿಯಾಗಿದ್ದೆ ಎಂದು ನೆನಪು ಹಂಚಿಕೊಂಡರು.

     ಈ ಕಾಲೇಜಿಗೆ ಪ್ರಾಧ್ಯಾಪಕನಾಗಿ ಬಂದಾಗ ನನಗೂ, ವಿದ್ಯಾರ್ಥಿಗಳಿಗೂ ವ್ಯತ್ಯಾಸವೇ ಇಲ್ಲವೇನೋ ಎಂಬ ಭಾವನೆ ಬಂದಿತ್ತು. ಮೊದಲ ತಿಂಗಳ ಸಂಬಳದಲ್ಲಿ, ಎಂ ಜಿ ರಸ್ತೆಯಲ್ಲಿ ಟೈಲರಿಂಗ್ ಅಂಗಡಿ ಇಟ್ಟಿದ್ದ ಕಮ್ಯೂನಿಸ್ಟ್ ಮುಖಂಡ ಕೆ. ಆರ್. ನಾಯಕ್ ಅವರಲ್ಲಿ ಒಂದು ಕೋಟು ಹೊಲಿಸಿ ಕಾಲೇಜಿಗೆ ಹಾಕಿಕೊಂಡು ಹೋಗಿ ವಿದ್ಯಾರ್ಥಿಗಳ ಗುಂಪಿನಲ್ಲಿ ಅಧ್ಯಾಪಕನಾಗಿ ಕಾಣಿಸಿಕೊಂಡೆ ಎಂದರು.ರಾಜ್ಯ ರೆಡ್ ಕ್ರಾಸ್ ಸಂಸ್ಥೆ ಸಭಾಪತಿ, ಪ್ರಜಾಪ್ರಗತಿ ಸಂಪಾದಕ ಎಸ್. ನಾಗಣ್ಣನವರು ಮಾತನಾಡಿ, ಕಾಲೇಜಿನ ಶೈಕ್ಷಣಿಕ ಬೆಳವಣಿಗೆಗೆ ಹಳೆ ವಿದ್ಯಾರ್ಥಿಗಳು ಕಾಳಜಿ ತೋರಬೇಕು. ಸಂಘದ ಆಶಯಗಳು ಈಡೇರಲು ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.

     ತುಮಕೂರಿನಲ್ಲಿ ಸಮಾರಂಭಗಳನ್ನು ಆಯೋಜಿಸಲು ವ್ಯವಸ್ಥಿತ ಸಭಾಂಗಣಗಳಿಲ್ಲ, ಹಳೇ ವಿದ್ಯಾರ್ಥಿಗಳ ಸಂಘದಿಂದ ವಿಶ್ವವಿದ್ಯಾಲಯ ಆವರಣದಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಾಣ ಮಾಡಿ, ಸಂಘದ ಕಾರ್ಯಚಟುವಟಿಕೆಗಳಿಗೆ ಹಾಗೂ ಕಾಲೇಜಿನ ಚಟುವಟಿಕೆಗಳಿಗೆ ಕೊಡುಗೆಯಾಗಿ ನೀಡಬೇಕು. ಈ ಉದ್ದೇಶಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.

   ತುಮಕೂರು ವಿವಿ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡರು ಮಾತನಾಡಿ, ಅನೇಕ ಶಿಕ್ಷಣ ಸಂಸ್ಥೆಗಳು ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಉನ್ನತಿ ಕಾಣುತ್ತಿವೆ, ಈ ಕಾಲೇಜಿನ ಹಳೆ ವಿದ್ಯಾರ್ಥಿಗಳೂ ಕೂಡಾ ಕಾಲೇಜಿನ ಬೆಳವಣಿಗೆ ಸಲುವಾಗಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ವಿಜ್ಞಾನ ಕಾಲೇಜು ಪ್ರಾಂಶುಪಾಲರಾದ ಬಿ. ಆರ್. ಶಾಲಿನಿ, ಸರ್ವೋದಯ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಕೆ. ವಿ. ಸುಬ್ಬರಾವ್, ಸಂಘದ ಕಾರ್ಯದರ್ಶಿ ಡಾ. ಬಿ. ಸುರೇಶ್ ಹಾಗೂ ಅನೇಕ ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link