ಹರಪನಹಳ್ಳಿ :
ಹಂಪಿ ವಿಶ್ವ ವಿದ್ಯಾನಿಲಯದಲ್ಲಿ ರಾಜಕೀಯ ಮುತ್ಸದ್ಧಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಮಾಜಿ ಮುಖ್ಯಮಂತ್ರಿ, ಸಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭರವಸೆ ನೀಡಿದರು.
ಪಟ್ಟಣದ ಎಡಿಬಿ ಕಾಲೇಜಿನ ಆವರಣದಲ್ಲಿ ಮಂಗಳವಾರ ದಿ.ಎಂ.ಪಿ.ರವೀಂದ್ರ ಅವರ ನುಡಿ-ನಮನ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿರ್ಮಾಣಕ್ಕೆ ಹಾಗೂ ಹಂಪಿ ಉತ್ಸವ ಆರಂಭಕ್ಕೆ ಎಂ.ಪಿ.ಪ್ರಕಾಶ್ ಅವರ ಕುಟುಂಬದ ಕೊಡುಗೆ ಅಪಾರವಾಗಿದೆ. ಹಂಪಿ ವಿವಿಯಲ್ಲಿ ಎಂ.ಪಿ.ಪ್ರಕಾಶ್ ಅವರ ಅಧ್ಯಯನ ಪೀಠ ತೆರೆಯುವಂತೆ, ಅವರ ಕುಟುಂಬ ವರ್ಗ, ಹಿತೈಷಿಗಳು ಹಾಗೂ ಅಭಿಮಾನಿಗಳು ಬೇಡಿಕೆ ಸಲ್ಲಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಅಭಿವೃದ್ಧಿ ವಿಚಾರದಲ್ಲಿ ತಂದೆಯಂತೆ ಂ.ಪಿ.ರವೀಂದ್ರ ಸಹ ಬಹಳಷ್ಟು ಕನಸು ಹೊಂದಿದ್ದರು. ಹರಪನಹಳ್ಳಿ ತಾಲೂಕಿಗೆ ಸಂವಿಧಾನದ 371ಜೆ ಸೌಲಭ್ಯ ದೊರಕಬೇಕು ಎಂಬ ಮಹದಾಸೆ ಹೊಂದಿದ್ದರು. ಅನಾರೋಗ್ಯದಿಂದ ಮೈಸೂರಲ್ಲಿ ರವೀಂದ್ರ ಅವರನ್ನು ಕಂಡಾಗ ತಮ್ಮ ಆರೋಗ್ಯವನ್ನೂ ಮರೆತು ತಾಲ್ಲೂಕಿನ ಸೌಲಭ್ಯದ ಬಗ್ಗೆ ಬೇಡಿಕೆ ಇಟ್ಟಿದ್ದರು. ಅದರಂತೆ ತಾಲ್ಲೂಕಿಗೆ 371ಜೆ ಸೌಲಭ್ಯ ದೊರಕಿಸುವಲ್ಲಿ ಯಶಸ್ವಿಯಾದರು ಎಂದು ಸ್ಮರಿಸಿದರು.
ರವೀಂದ್ರ ಸಲ್ಲಿಸಿದ ಯಾವುದೇ ಬೇಡಿಕೆಗಳನ್ನು ನಾನು ಕಡೆಗಣಿಸಿಲ್ಲ. ಆದರೆ, ಕೆಎಂಎಫ್ ಅಧ್ಯಕ್ಷ ಸ್ಥಾನ ಅವರಿಗೆ ಸಿಗಲಿಲ್ಲ. ಇದರಿಂದ ಅವರೂ ಬೇಸರಗೊಂಡಿದ್ದರು. ಹರಪನಹಳ್ಳಿ ಅಭಿವೃದ್ಧಿ ಸಂಬಂಧಿಸಿದಂತೆ 2 ಸಾವಿರ ಅನುದಾನ ಕೋಟಿ ಅನುದಾನ ನೀಡಿದ್ದೇನೆ. ಅವರು ಎರಡನೇ ಸಾರಿ ಗೆದ್ದಿದ್ದರೆ ಸಚಿವರಾಗುತ್ತಿದ್ದರು ಎಂದರು.
ಹರಪನಹಳ್ಳಿ ಕ್ಷೇತ್ರದ ಜನತೆ ರವೀಂದ್ರರಂತಹ ಜನನಾಯಕನನ್ನು ಸೋಲಿಸಿದಕ್ಕೆ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಕರೆ ನೀಡಿದ ಅವರು, ಎಂ.ಪಿ.ಪ್ರಕಾಶ್ ಕುಟುಂಬದವರು ರಾಜಕೀಯ ಕಣಕ್ಕೆ ಬಂದಲ್ಲಿ ಅವರ ಜೊತೆ ನಾವೆಲ್ಲರೂ ಕೈ ಜೋಡಿಸುತ್ತೇವೆ ಎಂದರು.
ಹರಪನಹಳ್ಳಿ ತಾಲ್ಲೂಕು ಬಳ್ಳಾರಿ ಜಿಲ್ಲೆಗೆ ಸೇರಿದರೂ ಉಪವಿಭಾಗದ ಕೇಂದ್ರ ಸ್ಥಾನ ಹರಪನಹಳ್ಳಿಯಲ್ಲಿಯೇ ಮುಂದುವರಿಯಲಿದೆ. ಈ ವ್ಯಾಪ್ತಿಯಲ್ಲಿ ಕೊಟ್ಟೂರು ಮತ್ತು ಹೂವಿನ ಹಡಗಲಿ ತಾಲೂಕುಗಳು ಸೇರಿಕೊಂಡು ಕಾರ್ಯನಿರ್ವಹಿಸಲಿವೆ ಎಂದು ಹೇಳಿ, ರವೀಂದ್ರ ಅವರ ನುಡಿನಮನ ದಿನದಂದೇ ಸರ್ಕಾರದ ಆದೇಶ ಪ್ರತಿ ಹಿಡಿದು ಜನತೆಗೆ ಪ್ರದರ್ಶಿಸಿ, ಈಗ ರವೀಂದ್ರರ ಮತ್ತೊಂದು ಕನಸು ಈಡೇರಿದಂತಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಸ್ನೇಹಿತ ರವೀಂದ್ರ ಅಗಲಿಕೆ ನೋವು ತಂದಿದೆ. ರಾಜಕೀಯ ಜೀವನದಲ್ಲಿ ಬಹಳಷ್ಟು ಸಾಧನೆ ಮಾಡಬೇಕಿತ್ತು. ರವೀಂದ್ರ ಅವರಿಗೆ ಎಲ್ಲ ಕ್ಷೇತ್ರದಲ್ಲೂ ಸಾಮಾಜಿಕವಾಗಿ ಸಹಕಾರವಿತ್ತು. ಒಳ್ಳೆಯ ವಿಚಾರಗಳು ಅವರಲ್ಲಿ ಅಡಕವಾಗಿದ್ದವು. ಎಸಿ ಕಚೇರಿ ಉಳಿವಿಗೆ ರವೀಂದ್ರ ಪರಿಶ್ರಮಕ್ಕೆ ದೊರೆತ ಫಲವಾಗಿದೆ ಎಂದು ಹೇಳಿದರು.
ರವೀಂದ್ರ ಅವರ ಸಹೋದರಿ ಎಂ.ಪಿ.ವೀಣಾ ಮಾತನಾಡಿ, ಪಕ್ಷ ಬಯಸಿದ್ದಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡಲು ನಮ್ಮ ಕುಟುಂಬ ಸಿದ್ಧವಾಗಿದೆ. ಹಂಪಿ ವಿವಿಯಲ್ಲಿ ತಂದೆ ಎಂ.ಪಿ.ಪ್ರಕಾಶ ಅಧ್ಯಯನ ಪೀಠ ಸ್ಥಾಪನೆ ಹಾಗೂ ಯುವಕರ ಕಣ್ಮಣಿಯಾಗಿದ್ದ ಎಂ.ಪಿ.ರವೀಂದ್ರ ಅವರ ಹೆಸರನ್ನು ಕ್ರೀಡಾಂಗಣವೊಂದಕ್ಕೆ ಇಡಬೇಕು ಎಂದು ಮನವಿ ಮಾಡಿದರು.
ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕರಾದ ಆನಂದ ಸಿಂಗ್, ಅಮರೇಗೌಡ ಬಯ್ಯಾಪುರ, ಭೀಮ ನಾಯ್ಕ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಶಾಸಕರಾದ ಎಚ್.ಪಿ.ಮಂಜುನಾಥ್, ವಿಜಯಾನಂದ ಕಾಶಪ್ಪನವರ, ಎಸ್.ಜಿ.ನಂಜಯ್ಯನಮಠ, ವೀಣಾ ಕಾಶಪ್ಪನವರ್ ಸೇರಿದಂತೆ ಹಲವರು ನುಡಿ ನಮನ ಸಲ್ಲಿಸಿದರು.
ರವೀಂದ್ರ ಅವರ ತಾಯಿ ರುದ್ರಾಂಬಾ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ತೆಗ್ಗಿನಮಠದ ವರಸದ್ಯೋಜಾತ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್ ಹಿರಿಯ ಮುಖಂಡರಾದ ಎಸ್.ಎಸ್.ಪಾಟೀಲ್, ಎನ್.ಎಂ.ನಬಿಸಾಬ್, ಟಿ.ಎಂ.ಚಂದ್ರಶೇಖರಯ್ಯ, ಎಚ್.ಪಿ.ರಾಜೇಶ್, ಶಾಂತನಗೌಡ, ಟಿ.ಎಚ್.ಎಂ.ವಿರುಪಾಕ್ಷಯ್ಯ, ಡಿ.ಬಸವರಾಜ್ ಹಾಗೂ ರವೀಂದ್ರ ಕುಟುಂಬದ ವರ್ಗದವರು, ತಾಲ್ಲೂಕು ಕಾಂಗ್ರೆಸ್ ಮುಖಂಡರು, ಅಭಿಮಾನಿ ಬಳಗದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
