ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವ ಮದಲಿಂಗನಕಣಿವೆ ಗುಡ್ಡ…!!!

ಚಿಕ್ಕನಾಯಕನಹಳ್ಳಿ

         ಪ್ರಕೃತಿಯ ಮಡಿಲಿನ ರಮಣೀಯ ಸ್ಥಳವೊಂದು ಚಾರಣಿಗರಿಗೆ ಹೇಳಿ ಮಾಡಿಸಿದಂತಿದೆ. ಜನಪ್ರತಿನಿಧಿಗಳು ಈ ಕ್ಷೇತ್ರದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೂ ಇದು ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವಾಗುತ್ತದೆ. ಆದರೆ ಜನಪ್ರತಿನಿಧಿಗಳ ತಾತ್ಸಾರ ಮನೋಭಾವನೆ, ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಈ ಸ್ಥಳ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಹೆಂಡ ಕುಡಿಯುವ, ಇಸ್ಪೀಟು ಆಡುವ ಕೊಂಪೆಯಾಗಿ, ಮಾಟ-ಮಂತ್ರ ಮಾಡುವ ಜಾಗವಾಗಿ ಮಾರ್ಪಾಡಾಗುತ್ತಿದೆ.

        ಹೌದು, ನಾವು ಹೇಳ ಹೊರಟಿರುವುದು ಪಟ್ಟಣದಿಂದ 6.ಕಿ.ಮೀ. ಸಂಚರಿಸಿದರೆ ಹೊಸಹಳ್ಳಿ ಸಮೀಪದಲ್ಲೆ ಇರುವ ಮದಲಿಂಗನಗುಡ್ಡ ಹಾಗೂ ಈ ಗುಡ್ಡದ ಎದುರು ಇರುವ ಭೂತಪ್ಪನಗುಡಿಯಲ್ಲಿ ನಡೆಯುತ್ತಿರುವ ಘಟನೆಯ ಬಗ್ಗೆ.

        ಮದಲಿಂಗನಕಣಿವೆ ಎಂದರೆ ಪ್ರವಾಸಿಗರ ಸ್ವರ್ಗ. ಸುತ್ತುಕಣಿವೆ ಇರುವುದರಿಂದ ಈ ಭಾಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ಪ್ರಯಾಣಿಸಿದರೆ ಮಡಿಕೇರಿಯಲ್ಲಿ ಪ್ರವಾಸಿಗರಿಗೆ ದೊರಕುವ ನಿಸರ್ಗದ ಸೌಂದರ್ಯದ ಪ್ರತಿರೂಪದಂತೆ ಕಾಣಲಿದೆ. ಇನ್ನು ಚಳಿಗಾಲದ ಸಂದರ್ಭದಲ್ಲಿ ಕಣಿವೆ ಭಾಗದ ಸುತ್ತಮುತ್ತಾ ಬೀಳುವ ಮಂಜಿನಹನಿಯ ಸೌಂದರ್ಯವು ಸಹ ರಮಣೀಯವಾಗಿ ಕಾಣಿಸುತ್ತದೆ. ಜೊತೆಗೆ ಮದಲಿಂಗನ ಕಣಿವೆಗೆ ಹೋಗುವ ಮುನ್ನ ಹೊಸಹಳ್ಳಿ ಸಮೀಪದ ಕೆಲವೆ ಕಿಲೋಮೀಟರ್ ಸಂಚರಿಸಿದರೆ ದಾರಿಯಲ್ಲಿ ಇರುವ ಭೂತಪ್ಪನಗುಡಿಯೂ ಸಹ ಒಂದು.

         ಶ್ರದ್ಧಾ ಕೇಂದ್ರ ಜಾಗ, ಇಲ್ಲಿ ಭೂತಪ್ಪನನ್ನು ಪ್ರತಿಷ್ಠಾಪಿಸಿ ಸುತ್ತುಕಣಿವೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಯಾವುದೇ ಅಪಘಾತಗಳು ಸಂಭವಿಸದಿರಲಿ ಎಂದು ಇಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಚಿಕ್ಕನಾಯಕನಹಳ್ಳಿಯಿಂದ ಅಥವಾ ಸುತ್ತುಕಣಿವೆ ಭಾಗದಲ್ಲಿ ಬರುವ ಇಟ್ಟಿಗೆ ಕಾರ್ಖಾನೆಗಳು ಇಲ್ಲಿ ಸಂಚರಿಸುವಾಗ ತಮ್ಮ ಭಾಗವೊಂದು ಇರಲಿ ಎಂದು ಒಂದೊಂದು ಇಟ್ಟಿಗೆಯನ್ನು ಇಲ್ಲಿ ಹಾಕಿ ಹೋಗುತ್ತಾರೆ, ಕೆಲವರು ಭೂತಪ್ಪನಿಗೆ ಪ್ರಸಾದವನ್ನು ಸಮರ್ಪಿಸಿ ತಮಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡು ಸಂಚರಿಸುತ್ತಿರುವುದು ತಲೆಮಾರುಗಳಿಂದ ನಡೆದುಕೊಂಡು ಬಂದಿದೆ.

       ಆದರೆ ಇತ್ತೀಚೆಗೆ ಈ ಸ್ಥಳದಲ್ಲಿ ಪಾರ್ಟಿ, ಮೋಜು-ಮಸ್ತಿ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಹೆಂಡ ಕುಡಿಯಲು ಹಾಗೂ ಜೂಜಾಡುವ ಅಡ್ಡೆಯಾಗಿ ಪರಿಣಮಿಸಿದೆ. ಜೊತೆಗೆ ಈ ಸ್ಥಳದಲ್ಲೇ ಗೊಂಬೆಯೊಂದನ್ನು ಮಾಡಿ ಮಾಟ-ಮಂತ್ರ ಮಾಡುವ ಸ್ಥಳವಾಗಿದೆ. ಪಾರ್ಟಿ ಹೆಸರಿನಲ್ಲಿ ಹಗಲು-ರಾತ್ರಿ ಎನ್ನದೆ ಈ ಸ್ಥಳದಲ್ಲಿ ಮೋಜು-ಮಸ್ತಿ ನಡೆಯುತ್ತಿವೆ, ಕುರಿ-ಕೋಳಿ ಕಡಿದು ಭೂತಪ್ಪನಿಗೆ ಎಡೆ ಇಡುವ ಹೆಸರಿನಲ್ಲಿ ಜೂಜುಕೋರರು, ಹೆಂಡಗುಡುಕರು ಸ್ವೇಚ್ಚಾಚರದಿಂದ ನಡೆದುಕೊಳ್ಳುತ್ತಾರೆ. ಈ ವಿಷಯಕ್ಕೆ ಸ್ಥಳೀಯ ಗ್ರಾಮಸ್ಥರಿಗೂ ಮೋಜು-ಮಸ್ತಿಗೆ ಬರುವ ಜನರೊಂದಿಗೆ ಆಗಾಗ್ಗೆ ಗಲಾಟೆ ನಡೆದು ಪೊಲೀಸ್ ಠಾಣೆಯ ಮೆಟ್ಟಿಲನ್ನು ಹತ್ತಿವೆ.

        ಕಾಡಿನಲ್ಲಿ ಮಧ್ಯ ಸೇವಿಸಿ ಎಲ್ಲೆಂದರಲ್ಲಿ ಬಾಟಲಿ ಎಸೆದಿದ್ದಾರೆ, ಅನೈತಿಕ ಚಟುವಟಿಕೆಗಳಿಗೆ ಬಳಸಿ ಎಸೆದ ತ್ಯಾಜ್ಯಗಳು ಕಾಡಿನಲ್ಲಿ ಅನೈರ್ಮಲ್ಯ ಸೃಷ್ಟಿಸಿ, ಕಾಡಿನ ಸ್ವಚ್ಛಂದವನ್ನು ಹಾಳುಮಾಡಿದೆ, ಪಾರ್ಟಿ ಮಾಡುವಾಗ ಇಲ್ಲೇ ಅಡುಗೆಯನ್ನು ಸಹ ಮಾಡುತ್ತಾರೆ. ಅದಕ್ಕಾಗಿ ಒಲೆ, ಕಾರ ರುಬ್ಬಲು ಒಳಕಲ್ಲು ಸಹ ಇಲ್ಲಿ ಸಿದ್ದವಾಗಿದೆ. ಈ ವೇಳೆ ಹಚ್ಚುವ ಬೆಂಕಿಯ ಕಿಡಿ ಇಲ್ಲಿನ ಕಾಡಿನ ಗಿಡ-ಮರಗಳಿಗೆ ತಾಗಿ ಸುಮಾರು 2 ಎಕರೆಯಷ್ಟು ಪರಿಸರ ಬೆಂಕಿಗೆ ಆಹುತಿಯಾಗಿದೆ.

          ಎಚ್ಚೆತ್ತುಕೊಳ್ಳಬೇಕಾದ ಅರಣ್ಯ ಇಲಾಖೆ: ಸಾಹಿತ್ಯಾಸಕ್ತರ ಸೃಜನಶೀಲತೆಗೆ ಸ್ಪೂರ್ತಿದಾಯಕವಾಗಿರುವ ಮತ್ತು ಈ ಕಣಿವೆಯನ್ನು ಸಾಹಿತ್ಯಕ್ಕೆ ವಸ್ತುವಾಗಿಸಿಕೊಂಡಿರುವ ಸಾಹಿತಿಗಳಾದ ಆಚಾರ್ಯ ತೀ.ನಂ.ಶ್ರೀ, ಜ್ಞಾನಪೀಠ ಪ್ರಶಸ್ತಿ ಪುರಸ್ಕತರಾದ ಮಾಸ್ತಿ ವೆಂಕಟೇಶ್ವರ ಐಯ್ಯಂಗಾರ್, ಆರ್.ಬಸವರಾಜ್, ಎಸ್.ಚಂದ್ರಶೇಖರ್‍ರಂತಹವರು ಈ ಕಣಿವೆಯ ಪ್ರಕೃತಿ ಸೌಂದರ್ಯವನ್ನು ಇಲ್ಲಿನ ಐತಿಹಾಸಿಕ ಘಟನೆಗಳೊಂದಿಗೆ ನಡೆದಿರುವ ವಿದ್ಯಾಮಾನಗಳನ್ನು ಮನೋಜ್ಞವಾಗಿ ಈ ನಾಡಿನ ಜನರಿಗೆ ಕಟ್ಟಿಕೊಟ್ಟಿದ್ದಾರೆ.

        ಇಂತಹ ಮದಲಿಂಗನಕಣಿವೆಯನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಬಹುದು. ಆದರೆ ಅಧಿಕಾರಿಗಳ ನಿರ್ಲಕ್ಷತೆಯಿಂದ ಇಲ್ಲಿ ಯಾವ ಅಭಿವೃದ್ಧಿಯೂ ಸಹ ಆಗಿಲ್ಲ. ಅಕ್ರಮ ಚಟುವಟಿಕೆ ನಡೆಯುತ್ತಿರುವುದನ್ನು ತಡೆದು, ಮದಲಿಂಗನಕಣಿವೆ ಪ್ರವಾಸಿಗರನ್ನು ಆಕರ್ಷಿಸುವಂತೆ ಉತ್ತಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬಹುದು. ಇಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ತಡೆಯಬೇಕು, ಬಂದಂತಹ ಪ್ರವಾಸಿಗರಿಗೆ ಕುಡಿಯಲು ನೀರು, ನೆರಳು ಸಿಗುವಂತೆ ಮಾಡಬೇಕು. ಮಾಜಿ ಶಾಸಕ ಸಿ.ಬಿ.ಸುರೇಶ್‍ಬಾಬು ಶಾಸಕರಾಗಿದ್ದ ಸಂದರ್ಭದಲ್ಲಿ ಶಾಸಕರ ಅನುದಾನದಲ್ಲಿ ಭೂತಪ್ಪನ ಗುಡಿ ಬಳಿ ತಂಗುದಾಣವೊಂದನ್ನು ನಿರ್ಮಿಸಲಾಗಿತ್ತು. ಆ ತಂಗುದಾಣ ಈಗ ಪಾಳುಬಿದ್ದಿದ್ದು ಕಟ್ಟಿರುವ ತಂಗುದಾಣವನ್ನು ಉಪಯೋಗಕ್ಕೆ ಬರುವಂತೆ ನೋಡಿಕೊಳ್ಳುವುದು ಹಾಗೂ ಇಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಬೇಕು.

         ಮದಲಿಂಗನಕಣಿವೆ ಇತಿಹಾಸ: ಮದಲಿಂಗನಗುಡ್ಡ ತನ್ನದೇ ಆದ ವೈಶಿಷ್ಠ್ಯಕ್ಕೆ ಹೆಸರಾಗಿದೆ. ಕುಸ್ತಿಪಟು ಮದನಿಂಗ ಚಿಕ್ಕನಾಯಕನಹಳ್ಳಿಯ ಅಳಿಯ. ಮದುವೆಯಾದ ಮೊದಲ ವರ್ಷ ಏಕಾದಶಿ ಜಾತ್ರೆಯಲ್ಲಿ ನಡೆಯುವ ಕುಸ್ತಿ ಪಂದ್ಯದಲ್ಲಿ ಭಾಗವಹಿಸುತ್ತಾನೆ. ವಾರಪೂರ್ತಿ ನಡೆಯುವ ಹಳೆಯೂರು ಆಂಜನೇಯ ಜಾತ್ರೆಯಲ್ಲಿ ಮಡದಿ ಹಾಗೂ ನಾದಿನಿ ಜೊತೆ ಜಾತ್ರೆಯಲ್ಲಿ ಸಂಭ್ರಮಿಸುತ್ತಾನೆ.
ತಮಾಷೆಗೆಂದು ಜಗಜಟ್ಟಿ ಮದನಿಂಗ ನಾದಿನಿಯನ್ನೂ ಮದುವೆ ಮಾಡಿಕೊಡುವಂತೆ ಅತ್ತೆಯನ್ನು ಕೇಳಿಕೊಳ್ಳುತ್ತಾನೆ.

         ಊರ ಎದುರು ಮೈಚಾಚಿಕೊಂಡಿರುವ ಗುಡ್ಡವನ್ನು ಹಿಮ್ಮುಖವಾಗಿ ಹತ್ತಿ ಇಳಿದರೆ ಎರಡನೇ ಮಗಳನ್ನು ಕೊಡುವುದಾಗಿ ಅತ್ತೆ ಹೇಳುತ್ತಾಳೆ. ಸವಾಲು ಸ್ವೀಕರಿಸಿದ ಮದನಿಂಗ ಹಾಗೆ ಮಾಡುತ್ತಾನೆ. ಹಿಮ್ಮುಖವಾಗಿ ನಡೆದು ಗುರಿಯನ್ನು ತಲುಪುತ್ತಾನೆ. ಅಷ್ಟರಲ್ಲಿ ಆತನಿಗೆ ಅತೀವ ನೀರಡಿಕೆಯಾಗುತ್ತದೆ. ಆಗ ಅವರ ಬಳಿ ಇದ್ದದ್ದು ಕೇವಲ ಒಂದು ತಬ್ಬಿಗೆ ನೀರು ಅದನ್ನು ನಾದಿನಿಯ ಕೈಯಿಂದ ತೆಗೆದುಕೊಳ್ಳುವ ಭರಾಟೆ ಹಾಗೂ ರಸಿಕತೆಯ ಆತುರದಲ್ಲಿ ತಂಬಿಗೆ ಕೈಚಲ್ಲುತ್ತದೆ, ತಬ್ಬಿಗೆಯಲ್ಲಿದ್ದ ನೀರು ಮಣ್ಣುಪಾಲಾಗುತ್ತದೆ. ಸುತ್ತಲು ಎಲ್ಲೂ ನೀರು ಸಿಗದಾಗುತ್ತದೆ.

        ಅತೀವ ನೀರಡಿಕೆಯಿಂದ ಮದನಿಂಗ ಮಡಿಯುತ್ತಾನೆ ಎಂಬುದು ಮಾಸ್ತಿಯವರು ಕಟ್ಟಿಕೊಟ್ಟಿರುವ ಕಥನ ಕಾವ್ಯ. ಮದನಿಂಗ ಸತ್ತ ಸುದ್ದಿಯನ್ನು ಕೇಳಿ ಅತ್ತೆ ಎದೆ ಹೊಡೆದು ಸಾಯುತ್ತಾಳೆ. ಗಂಡ ಹಾಗೂ ತಾಯಿಯ ಸಾವು ಕಂಡು ಮಡದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂಬ ಕತೆಯಿದೆ. ಈ ಕತೆಗೆ ಪೂರಕ ಎಂಬಂತೆ ಸುತ್ತುಕಣಿವೆಯಲ್ಲಿ ಮದನಮಡು, ಅಜ್ಜಿಗುಡ್ಡೆ ಹಾಗೂ ಜಾಣೆಹಾರು ಎಂಬ ಊರುಗಳು ಇವೆ.

        ಮದಲಿಂಗನಗುಡ್ಡದ ಭಾಗದಲ್ಲಿ ಅಪರೂಪದ ಸಸ್ಯರಾಶಿಗಳಾದ ಕಾಡು ಬಿಕ್ಕೆ, ಕಮರ, ಕೇದಿಗೆ, ಜಾಲಿಹೂ ಪ್ರಕೃತಿಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ. ಇಲ್ಲಿರುವ ಅಪರೂಪದ ವನ್ಯಜೀವಿ ಸಂಪತ್ತು ಕಾಡಿನ ಮೆರುಗನ್ನು ಹೆಚ್ಚಿಸಿದೆ. ಈ ಭಾಗದಲ್ಲಿ ನವಿಲು, ಕರಡಿ ಹಾಗೂ ಚಿರತೆಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ಕಾಡಿನ ಅಂಚಿನ ಜಮೀನುಗಳ ರೈತರು ಹೇಳುತ್ತಾರೆ.

          ಒಟ್ಟಿನಲ್ಲಿ ಅರಣ್ಯ ಸಂಪತ್ತನ್ನು ಉಳಿಸಬೇಕಾದ ಅರಣ್ಯ ಇಲಾಖೆಯ ನಿರ್ಲಕ್ಷದಿಂದಾಗಿ ಸುಂದರ ಅರಣ್ಯ ಪ್ರದೇಶ ಅನೈತಿಕ ಚಟುವಟಿಕೆಗಳ ಬೀಡಾಗುತ್ತಿದೆ. ಈ ಬಗ್ಗೆ ಇಲ್ಲಿನ ಅರಣ್ಯ ಇಲಾಖೆ, ಪೊಲೀಸ್ ಅಧಿಕಾರಿಗಳು, ಗ್ರಾಮ ಪಂಚಾಯತ್, ಜನಪ್ರತಿನಿಧಿಗಳು ಇನ್ನಾದರೂ ಕ್ರಮವಹಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link