ಅನಂತಪುರದಲ್ಲಿ ‘ಮಧುಗಿರಿ ಮೋದಿ’ ಬಂಧನ

ತುಮಕೂರು

     ಸಾಮಾಜಿಕ ಜಾಲತಾಣವಾದ ಫೇಸ್‍ಬುಕ್‍ನಲ್ಲಿ ಅನ್ಯ ಕೋಮಿನ ವಿರುದ್ಧ ಅವಹೇಳನಕಾರಿಯಾದ ಹೇಳಿಕೆ ನೀಡಿ, ಪ್ರವಾದಿ ಬಗ್ಗೆ ಅವಾಚ್ಯವಾಗಿ ನಿಂದಿಸಿದ ವಿಡಿಯೋ ಪ್ರಕಟಿಸಿ ತಲೆಮರೆಸಿಕೊಂಡಿದ್ದ ಅತುಲ್ ಕುಮಾರ್ ಸಬರ್‍ವಾಲ್ ಅಲಿಯಾಸ್ “ಮಧುಗಿರಿ ಮೋದಿ” ಎಂಬಾತನನ್ನು ತುಮಕೂರು ಜಿಲ್ಲೆಯ ಪೊಲೀಸರು ಫೆ.25 ರಂದು ಆಂಧ್ರಪ್ರದೇಶದ ಅನಂತಪುರದಲ್ಲಿ ಪತ್ತೆ ಮಾಡಿ, ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೋನ ವಂಶಿಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     ಜಿಲ್ಲೆಯ ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಹೊನ್ನಾಪುರ ಗ್ರಾಮದ ನಿವಾಸಿ ಅತುಲ್ ಕುಮಾರ್ ಸಬರ್‍ವಾಲ್ ಅಲಿಯಾಸ್ “ಮಧುಗಿರಿ ಮೋದಿ” ಎಂಬಾತ ಫೆಬ್ರವರಿ 10 ರಂದು ತನ್ನ ಫೇಸ್‍ಬುಕ್ ಖಾತೆಯಲ್ಲಿ ಅನ್ಯ ಕೋಮಿನ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ಪ್ರವಾದಿಯನ್ನು ಅವಾಚ್ಯವಾಗಿ ನಿಂದಿಸಿ ವಿಡಿಯೋ ಒಂದನ್ನು ಅಪ್‍ಲೋಡ್ ಮಾಡಿದ್ದುದು ಭಾರಿ ವಿವಾದ ಸೃಷ್ಟಿಸಿತ್ತು. ಈತನ ವಿರುದ್ಧ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 153 ಎ, 295 ಎ, ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ದ ಕಲಂ 67 ರ ಪ್ರಕಾರ ಮೊಕದ್ದಮೆ ದಾಖಲಾಗಿತ್ತು.

     ಆರೋಪಿಯ ಬಂಧನಕ್ಕಾಗಿ ಎರಡು ವಿಶೇಷ ತಂಡ ರಚಿಸಲಾಗಿತ್ತು. ಈ ತಂಡಗಳು ಆರೋಪಿಯ ಪತ್ತೆಗಾಗಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ವಿವಿಧೆಡೆ ಸಂಚರಿಸಿದವು. ಅಂತಿಮವಾಗಿ ಆಂಧ್ರದ ಅನಂತಪುರದ ಆಜಾದ್ ನಗರದಲ್ಲಿ ಫೆ.25 ರಂದು ಪತ್ತೆ ಮಾಡಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆತನಿಂದ ಎರಡು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

      ಎಸ್ಪಿ ಡಾ.ವಂಶಿಕೃಷ್ಣ ಮತ್ತು ಅಡಿಷನಲ್ ಎಸ್ಪಿ ಉದೇಶ್ ಅವರ ಮಾರ್ಗದರ್ಶನದಲ್ಲಿ ಮಧುಗಿರಿ ಡಿವೈಎಸ್ಪಿ ಪ್ರವೀಣ್ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಡಿವೈಎಸ್ಪಿ ಸೂರ್ಯನಾರಾಯಣರಾವ್ ನೇತೃತ್ವದಲ್ಲಿ, ಮಧುಗಿರಿ ಸರ್ಕಲ್ ಇನ್ಸ್‍ಪೆಕ್ಟರ್ ಎಫ್.ಕೆ.ನದಾಫ್, ಕೊರಟಗೆರೆ ಸಬ್ ಇನ್ಸ್‍ಪೆಕ್ಟರ್ ಮಂಜುನಾಥ್, ಕೊರಟಗೆರೆ ಎಎಸ್ಸೈ ಯೋಗೀಶ್, ಸಿಬ್ಬಂದಿಗಳಾದ ಪ್ರಸನ್ನಕುಮಾರ್, ದೊಡ್ಡಲಿಂಗಯ್ಯ ಅವರ ಒಂದು ತಂಡ ಹಾಗೂ ಡಿ.ಸಿ.ಆರ್.ಬಿ. ವಿಭಾಗದ ಪೊಲೀಸ್ ಇನ್ಸ್‍ಪೆಕ್ಟರ್ ವಿಜಯಕುಮಾರ್, ಕೊಡಿಗೇನಹಳ್ಳಿ ಸಬ್‍ಇನ್ಸ್‍ಪೆಕ್ಟರ್ ಪಾಲಾಕ್ಷಪ್ರಭು, ಮಿಡಿಗೇಶಿ ಎ.ಎಸ್.ಐ. ಮೆಹಬೂಬ್‍ಖಾನ್, ಸಿಬ್ಬಂದಿಗಳಾದ ಶಶಿಧರ್, ಕುಮಾರ್, ಜಿಲ್ಲಾ ಪೊಲೀಸ್ ಕಚೇರಿಯ ರಮೇಶ್, ನರಸಿಂಹರಾಜು ಅವರ ಮತ್ತೊಂದು ತಂಡ ಈ ಆರೋಪಿಯ ಪತ್ತೆಗೆ ಶ್ರಮಿಸಿದ್ದವು. ಪೊಲೀಸರ ಈ ತಂಡದ ಪರಿಶ್ರಮವನ್ನು ಎಸ್ಪಿ ಪ್ರಶಂಸಿಸಿದ್ದಾರೆ.

ಹಲವೆಡೆ ಪ್ರಕರಣ ದಾಖಲು

      ಆರೋಪಿ ಅತುಲ್‍ಕುಮಾರ್ ಸಬರ್‍ವಾಲ್ ವಿರುದ್ಧ ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ಜಯನಗರ ಪೊಲೀಸ್ ಠಾಣೆ, ಮಧುಗಿರಿ ಪೊಲೀಸ್ ಠಾಣೆ, ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ನಗರ ಪೊಲೀಸ್ ಠಾಣೆ, ಕೊಪ್ಪಳದ ಗಂಗಾವತಿಯ ಗ್ರಾಮಾಂತರ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆಯ ಜಯನಗರ ಪೊಲೀಸ್ ಠಾಣೆ, ಕೊಡಗು ಜಿಲ್ಲೆಯ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಇದೇ ರೀತಿಯ ಪ್ರಕರಣಗಳು ದಾಖಲಾಗಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link