ಬೆಳಗಾವಿ
ಹೇಮಾವತಿಯಿಂದ ನೀರು ಬಿಡದಿರುವ ಕಾರಣ ತುಮಕೂರಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. ಹಾಸನದವರ ರಾಜಕಾರಣವೇ ಈ ಸಮಸ್ಯೆಗೆ ಕಾರಣವೆಂದು ಪ್ರತಿಪಕ್ಷ ಶಾಸಕರು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಬಿಜೆಪಿ ಶಾಸಕ ಮಾಧುಸ್ವಾಮಿ ಹೇಮಾವತಿಯಿಂದ 4 ಟಿಎಂಸಿ ನೀರನ್ನು ತುಮಕೂರು ಭಾಗದಲ್ಲಿ ಕುಡಿಯುವ ನೀರು ಪೂರೈಸಲು ಬಿಡಲಾಗುತ್ತಿತ್ತು. ಆದರೆ ಕಳೆದ 15 ದಿನಗಳಿಂದ ಏಕಾಏಕಿ ಹೇಮಾವತಿ ನದಿ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ತುಮಕೂರಿನಲ್ಲಿ ಕುಡಿಯುವ ನೀರಿನ ತಾಪತ್ರಯ ಮಿತಿಮೀರಿದೆ.
ನೀರಾವರಿ ಸಮಿತಿಯ ಅಭಿಪ್ರಾಯ ಪಡೆಯದೇ ಹೀಗೆ ನೀರು ನಿಲ್ಲಿಸುವುದು ಸರಿಯಲ್ಲ. ಈ ಎಲ್ಲದಕ್ಕೂ ಕಾರಣ ಹಾಸನದವರು ಎಂದು ದೇವೇಗೌಡರ ಕುಟುಂಬದ ವಿರುದ್ಧ ಹರಿಹಾಯ್ದರು.
ಈ ವೇಳೆ ಮಧ್ಯ ಪ್ರವೇಶಿಸಿದ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಕುಡಿಯುವ ನೀರಿನ ವಿಷಯದಲ್ಲಿ ರಾಜಕಾರಣ ಮಾಡಬಾರದು. ತಮ್ಮ ಮೂಗಿನ ನೇರಕ್ಕೆ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಡಿ.ಕೆ. ಶಿವಕುಮಾರ ಇದಕ್ಕೆ ಅಸಲಿ ಕಾರಣವೇನೆಂಬುದನ್ನು ತಿಳಿದುಕೊಂಡು ಕೂಡಲೇ ಪರಿಹಾರೋಪಾಯ ಕಂಡು ಹಿಡಿಯುತ್ತೇನೆ. ಅಲ್ಲದೇ ತಾವೇ ನೀರಾವರಿ ಸಮಿತಿಯ ಸಭೆ ನಡೆಸಿ ಪರಿಹಾರಿ ಕಲ್ಪಿಸುತ್ತೇವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ