ದಾವಣಗೆರೆ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ನಾಲ್ಕೈದು ಜನ ಶಾಸಕರ ರಾಜೀನಾಮೆ ಕೊಡಿಸಿ, ಸಂವಿಧಾನದ ಆರ್ಟಿಕಲ್ 356 ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಮೈತ್ರಿ ಸರ್ಕಾರವನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಟ್ಟು, ಮಧ್ಯಂತರ ಚುನಾವಣೆಗೆ ಹೋಗಲು ಬಿಜೆಪಿ ಹುನ್ನಾರ ನಡೆಸಿದೆ ಎಂದು ಸತ್ಯಶೋಧನಾ ಸಮಿತಿಯ ಸಂಚಾಲಕ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಆರೋಪಿಸಿದ್ದಾರೆ.
ನಗರದ ಬಾಪೂಜಿ ಅತಿಥಿ ಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ ಹುಮ್ಮಸ್ಸಿನಲ್ಲಿರುವ ಬಿಜೆಪಿಗರು, ಚುನಾವಣೆ ನಡೆದರೆ 150 ಸ್ಥಾನ ಗಳಿಸಿಬಿಡುತ್ತೇವೆಂಬ ಭ್ರಮೆಯಲ್ಲಿದ್ದಾರೆ. ಹೀಗಾಗಿ ನಾಲ್ಕೈದು ಶಾಸಕರ ರಾಜೀನಾಮೆ ಕೊಡಿಸಿ, ಆರ್ಟಿಕಲ್ 356 ಕಾಯ್ದೆಯನ್ನು ಜಾರಿ ಮಾಡಿ, ಮೈತ್ರಿ ಸರ್ಕಾರವನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿಟ್ಟು, ನಂತರ ಮಧ್ಯಂತರ ಚುನಾವಣೆಗೆ ಹೋಗುವ ಹುನ್ನಾರ ನಡೆಸಿದ್ದು, ಬಿಜೆಪಿಯ ಈ ತಂತ್ರ ಯಾವುದೇ ಕಾರಣಕ್ಕೂ ಫಲಿಸುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿರುವ ಮೈತ್ರಿ ಸರ್ಕಾರವನ್ನು ಡಿಸ್ಟ್ರಬ್ ಮಾಡಬೇಕು ಹಾಗೂ ಮೈತ್ರಿ ಸರ್ಕಾರ ಯಾವುದೇ ಕೆಲಸ ಮಾಡುತ್ತಿಲ್ಲ ಎಂಬುದಾಗಿ ಬಿಂಬಿಸಿ ನಮ್ಮನ್ನು ತಪ್ಪಿತಸ್ಥರನ್ನಾಗಿ ಜನರಿಗೆ ತೋರಿಸಿ ಮಧ್ಯಂತರ ಚುನಾವಣೆ ಎದುರಿಸಲು ಬಿಜೆಪಿ ತಂತ್ರ ರೂಪಿಸಿದೆ. ಆದರೆ, ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿರುವ ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಕನಸು ಕಾಣುತ್ತಿರುವುದು ಹಗಲು ಗನಸಾಗಿದೆ ಎಂದು ವ್ಯಂಗ್ಯವಾಡಿದರು.
ಹತ್ತು ವರ್ಷಗಳ ಕಾಲ ಯುಪಿಎ ಸರ್ಕಾರದ ನೇತೃತ್ವ ವಹಿಸಿದ್ದ ಮನಮೋಹನ್ ಸಿಂಗ್ ಅವರು ಅತ್ಯುತ್ತಮ ಆಡಳಿತ ನೀಡಿದ್ದರೂ, ಅಂದು ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಆಧಾರ್, ಜಿಎಸ್‍ಟಿ ಕಾಯ್ದೆ ವಿರುದ್ಧ ಮಾತನಾಡುತ್ತಿದ್ದರು. ಆದರೆ, ಪ್ರಧಾನಿಯಾದ ಮೇಲೆ ನರೇಂದ್ರ ಮೋದಿ ಯು ಟರ್ನ್ ತೆಗೆದುಕೊಂಡು ಯುಪಿಎ ಸರ್ಕಾರದಲ್ಲಿ ಸಿದ್ಧವಾಗಿದ್ದ ಆಧಾರ್ ಅನ್ನು ಎಲ್ಲದಕ್ಕೂ ಕಡ್ಡಾಯಗೊಳಿಸಿದರು. ಅಲ್ಲದೇ, ಜಿಎಸ್‍ಟಿ ಕಾಯ್ದೆಯನ್ನೂ ಜಾರಿಗೆ ತಂದರು. ಇದು ಮೋದಿಯ ಇಬ್ಬಗೆಯ ನೀತಿಯಾಗಿದೆ ಎಂದು ಟೀಕಿಸಿದರು.
ಮೋದಿ ಸರ್ಕಾರದ ತಪ್ಪು ನಿರ್ಧಾರಗಳಿಂದಾಗಿ ದೇಶ ಆರ್ಥಿಕ ದುಸ್ಥಿತಿಗೆ ಈಡಾಗಿದೆ. ಈ ಸರ್ಕಾರದ ಹುಚ್ಚು ನಿರ್ಧಾರಗಳಿಂದ ಬೇಸತ್ತ ಆರ್‍ಬಿಐ ಗೌರ್ನರ್ ಉರ್ಜಿತ್ ಪಟೇಲ್ ಸೇರಿದಂತೆ 8-10 ಆರ್‍ಬಿಐ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಗಳ ಹಿಂದೆ ಗುಪ್ತ ಅಜೆಂಡಾ ಇದೆ. ಇದೇ ಪರಿಸ್ಥಿತಿ ಮುಂದುವರೆದರೆ, ರಾಷ್ಟ್ರ ಆರ್ಥಿಕವಾಗಿ ದಿವಾಳಿಯಾಗು ವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸತ್ಯಶೋಧನಾ ಸಮಿತಿಯ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್, ಮೈತ್ರಿ ಸರ್ಕಾರ ನಡೆಸುವುದು ಸವಾಲಿನ ಕೆಲಸವಾಗಿದೆ. ಆದರೆ, ಬಿಜೆಪಿ ಅಧಿಕಾರದ ಲಾಲಸೆಯಿಂದ 2008ರಿಂದ 13ರ ಅವಧಿಯಲ್ಲಿ ನಡೆಸಿದ ಆಪರೇಷನ್ ಕಮಲದಂತೆ, ಅದೇ ತಂತ್ರಗಾರಿಕೆಯ ಮೂಲಕ ಈಗ ಮೈತ್ರಿ ಸರ್ಕಾರವನ್ನು ಅಸ್ತಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಸಮಿತಿಯ ಮತ್ತೋರ್ವ ಸದಸ್ಯ ಧೃವ ನಾರಾಯಣ ಮಾತನಾಡಿ, ಯುಪಿಎ ಸರ್ಕಾರ ಎರಡು ಅವಧಿಯಲ್ಲಿ ಕೊಟ್ಟಿರುವ ಕಾರ್ಯಕ್ರಮ ಗಳನ್ನು ಮೋದಿ ಸರ್ಕಾರ ಕೊಡಲಾಗಿಲ್ಲ. ನಮ್ಮ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ನೀಡಿದೆ. ಪ್ರಧಾನಿ ಮೋದಿ ಸ್ಟಾರ್ಟಪ್ ಇಂಡಿಯಾ, ಮೇಕ್‍ಇನ್ ಇಂಡಿಯಾ ಎಂಬುದಾಗಿ ಹೇಳುತ್ತಲೇ ಕಾಲ ಕಳೆದು, ಕೊನೆಯಲ್ಲಿ ಪುಲ್ವಾಮಾ ದಾಳಿಯನ್ನು ಬಳಸಿಕೊಂಡು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಸತ್ಯ ಶೋಧನಾ ಸಮಿತಿ ಸದಸ್ಯರುಗಳಾದ ವೀರಣ್ಣ ಮತ್ತಿಕಟ್ಟೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ರೇಷ್ಮ ನಿಗಮದ ಮಾಜಿ ಅಧ್ಯಕ್ಷ ಡಿ.ಬಸವರಾಜ್, ಡೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್ ಸೇರಿದಂತೆ ಹಲವರು ಹಾಜರಿದ್ದರು.