ಮಡಿವಾಳ ಮಾಚಿದೇವ ಜಯಂತ್ಯೋತ್ಸವ ಕಾರ್ಯಕ್ರಮ

ಚಳ್ಳಕೆರೆ

      ಕಳೆದ 12ನೇ ಶತಮಾನವನ್ನು ವಚನಕಾರರ ವರ್ಷವೆಂದು ಕರೆಯಬಹುದಾಗಿದೆ. ಸಮಸ್ತ ಮಾನವ ಸಮಾಜಕ್ಕೆ ಧಾರ್ಮಿಕ ಜಾಗೃತಿಯನ್ನು ಮೂಡಿಸುವ ಜಾತಿಸಂಘರ್ಷಗಳಿಂದ ದೂರವಾಗುವಂತಹ ವಚನ ಸಾಹಿತ್ಯ ರಚನೆಯಾದ ವರ್ಷ. ಜಗಜ್ಯೋತಿ ಬಸವೇಶ್ವರರಂತೆ ವಚನ ಸಾಹಿತ್ಯ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದ ಮಹಾನ್ ಶ್ರೇಷ್ಠರಲ್ಲಿ ಮಡಿವಾಳ ಮಾಚಿದೇವ ಸಹ ಒಬ್ಬರು ಎಂದು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ತಿಳಿಸಿದರು.

        ಅವರು, ಶುಕ್ರವಾರ ಇಲ್ಲಿನ ದಲ್ಲಾಲರ ಸಮುದಾಯ ಭವನದಲ್ಲಿ ತಾಲ್ಲೂಕು ಮಡಿವಾಳ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಅಂದು ಸಮಾಜದ ಎಲ್ಲಾ ವರ್ಗಗಳಲ್ಲೂ ಸಮಾನತೆಯನ್ನು ತರುವ ದೃಷ್ಠಿಯಲ್ಲಿ ವಚನ ಸಾಹಿತ್ಯ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿತ್ತು.

         ಅಕ್ಕಮಹಾದೇವಿ, ಅಡಪದ ಅಪ್ಪಣ, ಅಲ್ಲಮ್ಮಪ್ರಭು ಮುಂತಾದ ಶ್ರೇಷ್ಠರು ವಚನ ಸಾಹಿತ್ಯಕ್ಕೆ ವಿಶೇಷ ರೂಪವನ್ನು ನೀಡಿದರು. ಇಂತಹವರ ಪರಿಶ್ರಮದ ಫಲವಾಗಿ ಜನರಲ್ಲಿ ಧಾರ್ಮಿಕ ಜಾಗೃತಿ ಉಂಟಾಗುವಲ್ಲಿ ಕಾರಣವಾಯಿತು. ಇಂದಿಗೂ ಸಹ ಈ ಮಹಾನ್ ಶ್ರೇಷ್ಠರ ಎಲ್ಲಾ ವಚನಗಳು ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿವೆ ಎಂದರು. ಸಮಾಜದಲ್ಲಿ ಆಳಾವಾಗಿ ಬೇರೂರಿದ್ದ ವರುಣ ಭೇದವನ್ನು ನಿವಾರಿಸುವಲ್ಲಿ ಮಾಚಿದೇವರು ಅನುಸರಿಸಿದ ಮಾರ್ಗ ಅತ್ಯಂತ ಶ್ರೇಷ್ಠತೆಯಿಂದ ಕೂಡಿತ್ತು.

          ಮಡಿವಾಳ ಸಮಾಜದ ಸರ್ವತೋಮುಖ ಅಭಿವೃದ್ಧಿಯನ್ನು ಬಯಸಿದ ಇವರು, ಸಮುದಾಯದ ಐಕ್ಯತೆ ಮತ್ತು ಸಂಘಟನೆಗಾಗಿ ಒತ್ತು ನೀಡಿದವರು. ಸಮಾಜದ ಎಲ್ಲಾ ಜಾತಿಗಳಲ್ಲೂ ಸಹ ಸಮಾನತೆಯ ಸಾರವನ್ನು ಸಾರುವಲ್ಲಿ ಮಡಿವಾಳ ಮಾಚಿದೇವರ ಆಗ್ರಗಣ್ಯರು. ಇಡೀ ಮಡಿವಾಳ ಸಮಾಜ ಕೇವಲ ಬಟ್ಟೆಗಳ ಕೊಳಕನ್ನು ನಿವಾಸುವುದಲ್ಲದೆ, ಜಾತಿ ಅಂದಕಾರದ ದ್ವೇಷಭಾವನೆ ಹೊಂದಿವರ ಮನಸ್ಸಿನಲ್ಲಿದ್ದ ಕೊಳಕನ್ನು ದೂರ ಮಾಡುವಲ್ಲಿ ಯಶಸ್ಸಿಯಾದವರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಬೇಕಾಗಿದ್ದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅನಿವಾರ್ಯ ಕಾರಣದಿಂದ ಕಾರ್ಯಕ್ರಮಕ್ಕೆ ಆಗಮಿಸದೇ ಇದಿದ್ದಕ್ಕೆ ವಿಷಾದ ವ್ಯಕ್ತ ಪಡಿಸಿದ ಸಮಾರಂಭದ ಯಶಸ್ಸಿಗೆ ಶುಭ ಹಾರೈಸಿದ್ದಾರೆಂದರು.

         ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ, ಪ್ರತಿಯೊಬ್ಬರ ವಚನಗಳಲ್ಲಿ ಪರಿವರ್ತನೆಯ ತತ್ವವನ್ನು ನಾವು ಕಾಣಬಹುದು. ಪ್ರತಿಯೊಂದು ವಚನವೂ ಸಹ ಸಮಾಜದ ಪರಿಪೂರ್ಣ ಬೆಳವಣಿಗೆಗೆ ಸಹಕಾರಿಯಾಗಿದೆ. ಇಂದಿಗೂ ಸಹ ಈ ಮಹಾನ್ ವಚನಗಳ ತತ್ವಾದರ್ಶಗಳನ್ನು ಅರ್ಥೈಸಿಕೊಂಡು ಮುನ್ನಡೆಯಬೇಕೆಂದರು.

         ಉಪನ್ಯಾಸ ನೀಡಿದ ಮುಖ್ಯ ಶಿಕ್ಷಕ ಈಶ್ವರಪ್ಪ, ಅರಸುತನ ಕೀಳಲ್ಲ, ಅಗಸತನ ಕೀಳಲ್ಲವೆಂಬ ಮಹಾನ್ ತತ್ವವನ್ನು ಜನರಿಗೆ ಸಾರುವ ಮೂಲಕ ಸಮುದಾಯಗಳಲ್ಲಿದ್ದ ಅಸಮತೋಲವನ್ನು ಹೋಗಲಾಡಿಸುವಲ್ಲಿ ಮಡಿವಾಳ ಮಾಚಿದೇವರ ವಚನಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿವೆ. ತಮ್ಮ ವೃತ್ತಿಯೊಂದಿಗೆ ವಚನ ಸಾಹಿತ್ಯ ರಚನೆಯಲ್ಲಿ ತೊಡಗಿದ ಮಾಚಿದೇವರಿಗೆ ಜಗಜ್ಯೋತಿ ಬಸವೇಶ್ವರರೇ ಮಾರ್ಗದರ್ಶನ. ಸರಳ ವಚನಗಳ ಮೂಲಕ ಜನರಲ್ಲಿ ಜಾಗೃತಿಯನ್ನುಂಟು ಮಾಡುವಲ್ಲಿ ಯಶಸ್ಸುಕಂಡ ಕೀರ್ತಿ ಮಡಿವಾಳ ಮಾಚಿದೇವರದ್ದು ಎಂದರು.

         ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿವಾಳ ಸಂಘದ ತಾಲ್ಲೂಕು ಅಧ್ಯಕ್ಷ, ಎನ್.ಮಂಜುನಾಥ ಮಾತನಾಡಿ, ಸಮಾಜದ ಆರಾಧ್ಯದೈವವಾದ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಕಾರ್ಯಕ್ರಮ ಯಶಸ್ಸಿಗೆ ತಾಲ್ಲೂಕಿನಾದ್ಯಂತ ಪ್ರವಾಸ ಕೈಗೊಂಡು ಜನರನ್ನು ಜಾಗೃತಿಗೊಳಿಸಲಾಗಿದೆ. ಮಡಿವಾಳ ಮಾಚಿದೇವರ ಆದರ್ಶಗಳೇ ಈ ಸಮುದಾಯವನ್ನು ಮುನ್ನಡೆಸಲು ಸಾಧ್ಯವಾಗುತ್ತದೆ. ತಾಲ್ಲೂಕಿನ ಸಮಸ್ತ ಮಡಿವಾಳ ಸಮುದಾಯದ ಅಭಿವೃದ್ಧಿಗೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಬೆನ್ನೆಲುಬಾಗಿದ್ಧಾರೆಂದರು.

         ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶ್, ಬಿಸಿಎಂ ಅಧಿಕಾರಿ ಡಿ.ಟಿ.ಜಗನ್ನಾಥ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಣ್ಣ ಸೂರಯ್ಯ, ಬಿ.ತಿಪ್ಪೇಸ್ವಾಮಿ, ನಗರಸಭಾ ಸದಸ್ಯರಾದ ಟಿ.ಮಲ್ಲಿಕಾರ್ಜುನ, ಸಿ.ಕವಿತಾ, ಸುಮಾಭರಮಣ್ಣ, ಸಿ.ಬಿ.ಜಯಲಕ್ಷ್ಮಿ, ಸುಮಕ್ಕ, ಎಂ.ಸಾವಿತ್ರಿ, ಆರ್.ಮಂಜುಳಾ, ಗೌರವಾಧ್ಯಕ್ಷ ಎಂ.ನಾಗರಾಜ, ಉಪಾಧ್ಯಕ್ಷ ಪುಟ್ಟಲಿಂಗಪ್ಪ, ಕಾರ್ಯದರ್ಶಿ ಬಿ.ಸಿ.ಕುಶಾಲಪ್ಪ, ಖಜಾಂಚಿ ಆರ್ಟ್‍ಸನ್ಸ್ ಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯೆ ಎಸ್.ಶೈಲಜಾ, ಅಂಜಿನಪ್ಪ, ಬೆಸ್ಕಾಂ ನಿವೃತ್ತ ಅಧಿಕಾರಿ ಪಿ.ರುದ್ರಮೂರ್ತಿ, ಮಲ್ಲಯ್ಯ, ಬಸವರಾಜಪ್ಪ, ವೇದಮೂರ್ತಿ, ಮಾಲತೇಶ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ತಾಲ್ಲೂಕು ಕಚೇರಿಯಿಂದ ನೆಹರೂ ವೃತ್ತದ ಮೂಲಕ ದಲ್ಲಾಲ ಸಮುದಾಯ ಭವನಕ್ಕೆ ಬೃಹತ್ ಮೆರವಣಿಗೆಯನ್ನು ನಡೆಸಲಾಯಿತು. ಕಲಾತಂಡಗಳು ಭಾಗವಹಿಸಿದ್ದವು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link