ದಾವಣಗೆರೆ:
ಚಿತ್ರದುರ್ಗದ ಶ್ರೀಮಾಚಿದೇವ ಮಹಾಸಂಸ್ಥಾನ ಮಠದಲ್ಲಿ ಜ.6ರಂದು ಮಡಿವಾಳ ಜನಾಂಗದ ಜಾಗೃತಿ ಸಮಾವೇಶ, ಶ್ರೀಮಠದ ದಶಮಾನೋತ್ಸವ ಹಾಗೂ ಶ್ರೀಗಳ ಜಂಗಮದೀಕ್ಷಾ 29ನೇ ವಸಂತೋತ್ಸವ ಹಾಗೂ ಮಾಚಿದೇವ ಶ್ರೀಗಳ 38ನೇ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ.
ಇಲ್ಲಿನ ವಿನೋಬಾನಗರದ ಶ್ರೀಮಾಚಿದೇವ ಸಮುದಾಯ ಭವನದಲ್ಲಿ ಕಾರ್ಯಕ್ರಮದ ಪೂರ್ವಭಾವಿ ಸಮಾಲೋಚನಾ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಮಾಚಿದೇವ ಮಹಾಸಂಸ್ಥಾನ ಮಠ ಪೀಠಾಧ್ಯಕ್ಷ ಶ್ರೀಬಸವ ಮಾಚಿದೇವ ಸ್ವಾಮೀಜಿ, ಕಾರ್ಯಕ್ರಮವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಚಿತ್ರನಟರಾದ ಸಾಯಿಕುಮಾರ್, ಕಿಚ್ವ ಸುದೀಪ್ ಮತ್ತಿತರರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದರು.
ಸಿಗದ ಸೌಲಭ್ಯ:
ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಏಳು ದಶಕಗಳು ಕಳೆದರೂ ಸಹ ಮಡಿವಾಳ ಸಮುದಾಯಕ್ಕೆ ಯಾವುದೇ ಸೌಲಭ್ಯ ದೊರೆತಿಲ್ಲ. ಆಳುವ ಸರ್ಕಾರಗಳು ನಮ್ಮ ಕಷ್ಟಗಳಿಗೆ ಸ್ಪಂದಿಸದೇ, ಕೇವಲ ಕೇವ ವೋಟು ಬ್ಯಾಂಕ್ ಅನ್ನಾಗಿ ನಮ್ಮನ್ನು ಬಳಿಸಿಕೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಸಿಗೆ ಸೇರಿಸಿ:
ನಮ್ಮ ಸಮುದಾಯವು ರಾಜ್ಯದಲ್ಲಿ ಸುಮಾರು 15 ಲಕ್ಷ ಜನಸಂಖ್ಯೆ ಹೊಂದಿದ್ದು, ಶೇ.99ರಷ್ಟು ಜನರು ನಮ್ಮ ಕುಲ ಕಸುಬು ಮತ್ತು ಕೂಲಿ ಆಧಾರದ ಮೇಲೆ ಜೀವನ ನಡೆಸುತ್ತಿದ್ದಾರೆ. ಎಲ್ಲಾ ಸಮುದಾಯಗಳಂತೆ ಮಡಿವಾಳ ಸಮುದಾಯವು ಕೂಡ ಮುಖ್ಯ ವಾಹಿನಿಗೆ ಬರಬೇಕಿದೆ. ಇಂದಿಗೂ ಕೂಡ ನಾವುಗಳು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಯಾವುದೇ ಪ್ರಾತಿನಿದ್ಯ ಸಿಗದೇ ತೀರಾ ಹಿಂದುಳಿದಿದ್ದೇವೆ. ಆದ್ದರಿಂದ ಈಗಲಾದರೂ ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವತ್ತ ಸರ್ಕಾರ ಗಮನ ಹರಿಸಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಮಠಗಳು ಇರದಿದ್ದರೆ ಬಹುಶಃ ಜನರು ಧಾರ್ಮಿಕ ವಂಚನೆಯನ್ನು ಅನುಭವಿಸಬೇಕಾಗುತ್ತಿತ್ತು. ಪ್ರಸ್ತುತ ಮಠಗಳು ಅದನ್ನು ತಪ್ಪಿಸಲು ಪ್ರತಿಯೊಬ್ಬರನ್ನು ಪ್ರಜ್ಞಾವಂತರನ್ನಾಗಿಸಲು ಮಾತ್ರವಲ್ಲದೇ ಸಾಮಾಜಿಕ ಜವಾಬ್ದಾರಿಯ ಜಾಗೃತಿ ಮೂಡಿಸಲು ಸಹಾಯಕವಾಗಿವೆ. ಆ ಮೂಲಕ ಸಮುದಾಯದ ಎಲ್ಲರನ್ನೂ ಮೇಲೆತ್ತುವ ಕಾರ್ಯ ನಡೆದಿದೆ ಎಂದರು.
ಮಡಿವಾಳ ಸಂಘದ ಜಿಲ್ಲಾ ಕಾಯಾಧ್ಯಕ್ಷ ಹಾಗೂ ನಗರ ಪಾಲಿಕೆ ಸದಸ್ಯ ಹೆಚ್.ಜಿ.ಉಮೇಶ್ ಮಾತನಾಡಿ, 12ನೇ ಶತಮಾನದ ಬಸವಣ್ಣರ ಅನುಭವ ಮಂಟಪದಲ್ಲಿದ್ದ ಬಹುತೇಕ ಶರಣರಲ್ಲಿ ಮುಂಚೂಣಿ ನಾಯಕತ್ವ ಹೊಂದಿದ ಮಹಾಶರಣ ಮಡಿವಾಳ ಮಾಚಿದೇವರ ಸಮಾಜದಲ್ಲಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರಾಗಿದ್ದೇವೆ. ಮಾಚಿದೇವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಮಡಿವಾಳ ಸಮುದಾಯದಲ್ಲಿ ಶಿಕ್ಷಣ ನೀಡುವ ಮೂಲಕ ಅವರನ್ನು ಉನ್ನತ ಹುದ್ದೆಗಳಿಗೆ ಸೇರಿಸುವ ಕೆಲಸವನ್ನು ಸಮಾಜ ಮತ್ತು ಪೋಷಕರು ಮಾಡಬೇಕಿದೆ. ಮಾತ್ರವಲ್ಲ ರಾಜಕೀಯ ಪ್ರಜ್ಞೆ ಬೆಳೆಸುವ ಅಗತ್ಯವಿದೆ. ಆ ಮೂಲಕ ಶಾಸನ ಸಭೆಗಳಲ್ಲಿ ಸಮುದಾಯದ ದನಿ ಎತ್ತಲು ರಾಜಕೀಯ ರಂಗ ಪ್ರವೇಶದ ಅಗತ್ಯವಿದೆ. ಇದಕ್ಕಾಗಿ ಪರಿಶಿಷ್ಟಜಾತಿ ಮೀಸಲಾತಿ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮುಂದಾಗಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಎಂ.ಎನ್.ಸತೀಶ್, ಪ್ರಧಾನ ಕಾರ್ಯದರ್ಶಿ ಎಂ.ನಾಗೇಂದ್ರಪ್ಪ, , ಖಜಾಂಚಿ ವಿಜಯಕುಮಾರ್, ವಿರೂಪಾಕ್ಷಪ್ಪ, ವೀಣಾ, ನಾಗಮ್ಮ , ಡೈಮಂಡ್ ಮಂಜುನಾಥ್, ಕೋಗುಂಡೆ ಸುರೇಶ್, ರುದ್ರೇಶ್, ಅಂಜಿನಪ್ಪ ಪೂಜಾರ್, ರವಿ, ಕಿಶೋರ್ ಕುಮಾರ್, ಗುಡ್ಡಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
