ದಾವಣಗೆರೆ:
ವಿನಾಕಾರಣ ನನ್ನ ಮಗನ ಕೊಲೆಗೈದಿರುವ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕೆಂದು ಮೃತ ದಯಾಲತ್ ಖಾನ್ ತಾಯಿ ಅಖಿಲಾ ಬಾನು ಒತ್ತಾಯಿಸಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಜ್ಮೇರ್ ದರ್ಗಾದ ಗೌಸೆ ಪಾಕ್ ಧ್ವಜವನ್ನು ವಾಟ್ಸಾಪ್ ಸ್ಟೇಟಸ್‍ಗೆ ಹಾಕಿಕೊಂಡಿದ್ದನ್ನೇ ನೆಪ ಮಾಡಿಕೊಂಡು, ಕಳೆದ ಜೂ.9ರಂದು ನನ್ನ ಮಗ ದಯಾನತ್ ಖಾನ್ ಮೇಲೆ ಸ್ನೇಹಿತರೇ ಹಲ್ಲೆ ನಡೆಸಿದ್ದರು. ನಂತರ ಜೂ.14ರಂದು ರಾತ್ರಿ 8 ಗಂಟೆ ಸುಮಾರಿಗೆ ಗ್ಯಾರೇಜ್ ಕೆಲಸ ಮುಗಿಸಿಕೊಂಡು ಬರುತ್ತಿದ್ದ ಮಗನನ್ನು ಎಳೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆಂದು ಆರೋಪಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಹಿತ್ ಮತ್ತು ಹೇಮಂತ್ ಎಂಬುವರನ್ನು ಬಂಧಿಸಿದ್ದು, ಇನ್ನುಳಿದ ಐದಾರು ಜನ ಆರೋಪಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಸುಳ್ಳು ವದಂತಿ ಹಬ್ಬಿಸುವ ಮೂಲಕ ನನ್ನ ಮಗನ ಸಾವಿನ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಕುಟುಂಬಕ್ಕೆ ಆಧಾರವಾಗಿದ್ದ ನನ್ನ ಮಗನನ್ನು ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.
ಜೀವ ಬೆದರಿಕೆ ಎದುರಿಸುತ್ತಿರುವ ನಮ್ಮ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಮುಂದಿನ ದಿನಗಳಲ್ಲಿ ಯಾರಿಗೂ ಈ ರೀತಿ ಆಗದಂತೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ನೊಂದವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಶೊಯೇಬ್ ಖಾನ್, ವಕೀಲ ತನ್ವೀರ್ ಅಹಮದ್, ಅಶ್ಫಾಕ್, ಸನಾವುಲ್ಲಾ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ