ತುಮಕೂರು:
ಕೋವಿಡ್-19 ಕಾರಣದಿಂದ ಸರಕಾರದ ಸಂಪನ್ಮೂಲ ಕ್ರೂಢೀಕರಣದಲ್ಲಿ ಕಡಿಮೆಯಾಗಿ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ.
ನಗರೋತ್ಥಾನ ಯೋಜನೆಯನ್ನು ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯೆಂದು ಹೊಸದಾಗಿ ರೂಪಾಂತರಿಸಿದ ಮೇಲೆ ರಾಜ್ಯ ಸರಕಾರ ಮೈಸೂರು, ಕಲ್ಬುರ್ಗಿ, ಹುಬ್ಬಳಿ ಧಾರವಾಡ ಮಹಾನಗರಪಾಲಿಕೆಗೆ 150 ಕೋಟಿ, ಮಂಗಳೂರು, ಬೆಳಗಾವಿ, ದಾವಣಗೆರೆ, ಬಳ್ಳಾರಿ, ವಿಜಯಪುರ, ತುಮಕೂರು ಹಾಗೂ ಶಿವಮೊಗ್ಗ ಮಹಾನಗರಪಾಲಿಕೆಗಳಿಗೆ ತಲಾ 125 ಕೋಟಿ ವಿಶೇಷ ಅನುದಾನ ಘೋಷಿಸಿ, ಇದಕ್ಕೆ ಸೂಕ್ತ ಕ್ರಿಯಾಯೋಜನೆ ಸಲ್ಲಿಸುವಂತೆ ಸೂಚಿಸಿತ್ತು.
ಸರಕಾರದ ಸೂಚನೆಯಂತೆ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹಾಗೂ ಪಾಲಿಕೆ ಆಡಳಿತ ಮಂಡಳಿಯವರು ನಗರದ 35 ವಾರ್ಡ್‍ಗಳ ಅಭಿವೃದ್ಧಿ ಕಾಮಗಾರಿಗಳನ್ನು ಪಟ್ಟಿ ಮಾಡಿ 125 ಕೋಟಿ ಮೊತ್ತದ ಕ್ರಿಯಾ ಯೋಜನೆ ರೂಪಿಸಿ ಜಿಲ್ಲಾ ಉಸ್ತುವಾರಿ ಸಚಿವರ ಸಮಿತಿ ಅನುಮೋದನೆಯೊಂದಿಗೆ ಸರಕಾರಕ್ಕೆ ಕಳುಹಿಸಿಕೊಡಲಾಗಿತ್ತು. ನಗರಾಭಿವೃದ್ಧಿ ಸಚಿವರಾದ ಬಸವರಾಜು ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಯಲ್ಲೂ ಕ್ರಿಯಾಯೋಜನೆ 2020 ಮಾ.5ರಂದೇ ಅನುಮೋದನೆಗೊಂಡಿದ್ದು, ಏಪ್ರಿಲ್ 15ರಂದೇ ಆದೇಶವಾಗಿದೆ.
ಆದರೆ ಆದೇಶವಾಗಿ ಐದು ತಿಂಗಳೇ ಕಳೆದರೂ ಅನುದಾನ ಬಿಡುಗಡೆಯಾಗಿಲ್ಲ. ಏತನ್ಮಧ್ಯೆ ಎದುರಾದ ಕೋವಿಡ್-19 ಮಹಾಮಾರಿ ಸರಕಾರದ ಅನುದಾನಕ್ಕೆ ಕೊಕ್ಕೆ ಹಾಕಿದ್ದು, ಅನುದಾನ ಬಿಡುಗಡೆಯಾಗುವುದೆಂದು ಎಂದು ಕಾಯುತ್ತಾ ಕೂರುವಂತಾಗಿದೆ.ಸ್ಮಾರ್ಟ್ ಸಿಟಿ ಕಾಮಗಾರಿಯಷ್ಟೇ ಪ್ರಗತಿ: ಸದ್ಯ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ 7 ವಾರ್ಡ್‍ಗಳು ಸೇರಿದಂತೆ ಸ್ಮಾರ್ಟ್ ಸಿಟಿ, ಕಾಮಗಾರಿಗಳಷ್ಟೆ ನಡೆಯುತ್ತಿದ್ದು, ಇತರೆ ವಾರ್ಡ್‍ಗಳಲ್ಲಿ ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ಪಾಲಿಕೆಗೆ ವಿಶೇಷ ಅನುದಾನದ ಕೊರತೆ ಎದುರಾಗಿದೆ. ಪ್ರತೀ ವರ್ಷ ಬಿಡುಗಡೆಯಾಗುವ ಎಸ್‍ಎಫ್‍ಸಿ, 15ನೇ ಹಣಕಾಸು ಅನುದಾನ ಬಿಟ್ಟರೆ ಯಾವುದೇ ವಿಶೇಷ ಅನುದಾನವೂ ತುಮಕೂರು ಮಹಾನಗರಪಾಲಿಕೆ ಈವರೆಗೆ ಬಿಡುಗಡೆಯಾಗಿಲ್ಲ.
ಬಂದಿರುವ ಅನುದಾನವೂ ಪಾಲಿಕೆ ಸಿಬ್ಬಂದಿ ವೇತನ, ಆಡಳಿತಾತ್ಮಕ ವೆಚ್ಚಗಳಿಗೆ ಸರಿಹೊಂದುತ್ತಿದ್ದು, ಕೊರೊನಾ ಕಾರಣಕ್ಕೆ ಪಾಲಿಕೆಯ ಸಂಪನ್ಮೂಲ ಕ್ರೂಢೀಕರಣವೂ ಕಡಿಮೆಯಿರುವುದರಿಂದ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಹಿಂದೆ ಮುಂದೆ ನೋಡುವಂತಾಗಿದೆ.
125 ಕೋಟಿ ಮೊತ್ತದ ಕ್ರಿಯಾಯೋಜನೆಯಲ್ಲಿ ಏನೇನಿತ್ತು?:
125 ಕೋಟಿ ಮೊತ್ತದ ಕ್ರಿಯಾಯೋಜನೆಯಲ್ಲಿ 25.30ಕೋಟಿ ಮೊತ್ತದ ಎಸ್‍ಸಿಪಿ- ಟಿಎಸ್‍ಪಿ ಅನುದಾಬದ ಕಾಮಗಾರಿಗೆ ಮೀಸಲಿರಿಸಿದ್ದು, ಇದರಲ್ಲಿ ಪರಿಶಿಷ್ಟ ಜಾತಿ ವರ್ಗದ ಕಾಲೋನಿಗಳ ಅಭಿವೃದ್ಧಿ, ಸಮುದಾಯದ ಫಲಾನುಭವಿಗಳಿಗೆ ವೈಯಕ್ತಿಕ ನೆರವು ನೀಡಲು ಉದ್ದೇಶಿಸಲಾಗಿತ್ತು. ಉಳಿದಂತೆ 79.69 ಕೋಟಿ ನಗರದ ಇತರೆ ವಾರ್ಡ್‍ಗಳ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲು ಕ್ರಿಯಾಯೋಜನೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಉಳಿದ20 ಕೋಟಿ ಯೋಜನಾ ವೆಚ್ಚ, ಇತರೆ ಆಡಳಿತಾತ್ಮಕ ವೆಚ್ಚಗಳಿಗೆ ವಿನಿಯೋಗಿಸಲು ಉದ್ದೇಶಿಸಲಾಗಿದೆ.
ಪ್ರಮುಖ ಕಾಮಗಾರಿಗಳ ಪೈಕಿ ತುಮಕೂರು ಮಹಾನಗರಪಾಲಿಕೆ ನೂತನ ಆಡಳಿತ ಕಟ್ಟಡಕ್ಕೆ 2.75 ಕೋಟಿ, ದಿಬ್ಬೂರು-ಬೆಳ್ಳಾವಿ ಮುಖ್ಯರಸ್ತೆ ಹಾಗೂ ಸದಾಶಿವನಗರದ ಮುಖ್ಯರಸ್ತೆ ಅಭಿವೃದ್ಧಿಗೆ 1.20 ಕೋಟಿ, ಶೆಟ್ಟಿಹಳ್ಳಿ ಅಂಡರ್‍ಪಾಸ್‍ನಿಂದ ರಿಂಗ್ ರಸ್ತೆವರೆಗೆ ಸಿಸಿ ಚರಂಡಿ ಕಾಮಗಾರಿಗೆ 1.75 ಕೋಟಿ, ಹಾಗೂ 35 ವಾರ್ಡ್‍ಗ¼ ರಸ್ತೆ ಚರಂಡಿ ಡಾಂಬರೀಕರಣಕ್ಕಾಗಿ ಒಟ್ಟು 44.46 ಕೋಟಿಯನ್ನು ವಿವಿಧ ಪ್ಯಾಕೇಜ್‍ಗಳಡಿ ಮೀಸಲಿರಿಸಲಾಗಿದೆ. ಆದರೆ ಅನುದಾನ ಬಾರದೆ ಇವೆಲ್ಲ ಹೊಸ ಕಾಮಗಾರಿಗಳು ಸ್ಥಗಿತಗೊಂಡಿವೆ.
ಸಚಿವರಿಗೆ ಮನವಿ:
ಅನುದಾನ ಬಿಡುಗಡೆ ಸಂಬಂಧ ಶಾಸಕ ಬಿ.ಜಿ.ಜ್ಯೋತಿಗಣೇಶ್ ಅವರು ನಗರಾಭಿವೃದ್ಧಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಪೂರಕವಾಗಿ ಇತರೆ ವಾರ್ಡ್‍ಗಳಲ್ಲೂ ಸಮಾನ ಅಭಿವೃದ್ಧಿ ಕಾರ್ಯಗಳು ಜರುಗಬೇಕಿದ್ದು, ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ಅನುದಾನ ತ್ವರಿತ ಬಿಡುಗಡೆ ಮಾಡಬೇಕೆಂದು ಕೋರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ