ಮಹಿಳಾ ಹೋರಾಟ ಫ್ಯಾಷನ್‍ಗೆ ಸೀಮಿತವಾಗದಿರಲಿ

ದಾವಣಗೆರೆ:

      ಸ್ತ್ರೀ ಸಮಾನತೆಯ ಹೋರಾಟವು ಫ್ಯಾಷನ್‍ಗೆ ಸೀಮಿತವಾಗಬಾರದು ಎಂದು ಬ್ರಹ್ಮಾಕುಮಾರಿ ಈಶ್ವರಿ ವಿದ್ಯಾಲಯದ ಜಿಲ್ಲಾ ಸಂಚಾಲಕಿ ಲೀಲಾಜಿ ಅಭಿಪ್ರಾಯಪಟ್ಟರು.

       ನಗರದ ಜಿಲ್ಲಾ ವಕೀಲರ ಭವನದಲ್ಲಿ ಶನಿವಾರ ಜಿಲ್ಲಾ ವಕೀಲರ ಸಂಘದಿಂದ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ತ್ರೀ ಸ್ವಾತಂತ್ರ್ಯ, ಮಹಿಳಾ ಸಮಾನತೆಯ ಹೆಸರಿನಲ್ಲಿ ಹಲವು ಹೋರಾಟಗಳು ನಡೆಯುತ್ತಿವೆ. ಆದರೆ, ಈ ಹೋರಾಟಗಳು ಫ್ಯಾಷನ್‍ಗೆ ಮಾತ್ರ ಸೀಮಿತವಾಗದೇ, ನೈತಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಮಹಿಳೆಯರನ್ನು ಮುನ್ನೆಲೆಗೆ ತರುವ ಹೋರಾಟವಾಗಿ ರೂಪಗೊಳ್ಳಬೇಕೆಂದು ಆಶಯ ವ್ಯಕ್ತಪಡಿಸಿದರು.

      ಸ್ವೇಚ್ಛಾಚಾರದ ವರ್ತನೆಯು ಯಾವುದೇ ಕಾರಣಕ್ಕೂ ಸಮಾನತೆ ಆಗುವುದಿಲ್ಲ. ನಾರಿಯರಿಗೆ ದೈವತ್ವದಿಂದ ವಿಶೇಷ ಗುಣಗಳು ಹಾಗೂ ಶಕ್ತಿ ದೊರೆತಿವೆ. ಆದ್ದರಿಂದ ಸ್ತ್ರೀ ಸ್ವೇಚ್ಛಾಚಾರ ರೀತಿಯ ಸಮಾನತೆಗಾಗಿ ಹಾತೊರೆಯದೇ, ಹೆಣ್ಣಿಗೆ ಸಹಜವಾಗಿ ಸಿಗಬೇಕಾಗಿರುವ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

       ಪ್ರೀತಿ, ವಾತ್ಸಲ್ಯ, ತ್ಯಾಗ ಹಾಗೂ ಸಹನೆ ಹೆಣ್ಣಿನ ಪ್ರಮುಖ ಗುಣಗಳಾಗಿವೆ. ಹುಟ್ಟು ಗುಣಗಳಾದ ಇವುಗಳನ್ನು ಮತ್ತಷ್ಟು ವಿಕಸನಗೊಳಿಸಿಕೊಳ್ಳುವುದರ ಜೊತೆಗೆ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು. ಹೆಣ್ಣಿಗೆ ಒಳ್ಳೆಯ ಗುಣಗಳಿರುವಂತೆಯೇ ಈರ್ಷೆ ಹಾಗೂ ಜಗಳಗಂಟಿತನವೆಂಬ ಕೆಟ್ಟ ಗುಣಗಳೂ ಇವೆ ಎಂಬ ಆಕ್ಷೇಪಗಳಿವೆ. ಎರಡು ಜಡೆ ಎಂದೂ ಸೇರುವುದಿಲ್ಲ, ಹತ್ತು ಮಹಿಳೆಯರು ಸುಸೂತ್ರವಾಗಿಸಭೆ ನಡೆಸಲಾಗದು ಎಂಬ ಟೀಕೆಗಳಿವೆ. ಆದರೆ, ನಮ್ಮ ಬ್ರಹ್ಮಕುಮಾರಿಯಲ್ಲಿ 15 ಸಾವಿರಕ್ಕೂ ಹೆಚ್ಚು ಘಟಕಗಳನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಇದು ಮಹಿಳೆಯ ಸಂಘಟನಾ ಸಾಮಥ್ರ್ಯವನ್ನು ತೋರಿಸುತ್ತದೆ ಎಂದರು.

        ಮೊದ ಮೊದಲು ಮಹಿಳೆಯರನ್ನು ದೇವತಾ ಸ್ವರೂಪದಲ್ಲಿ ಕಾಣಲಾಗುತ್ತಿತ್ತು. ಭಗವಂತನನ್ನು ಸ್ತ್ರೀ ಸ್ವರೂಪದಲ್ಲಿ ಮೊದಲು ಆರಾಧಿಸಲಾಗುತ್ತಿತ್ತು. ಮಾತೃದೇವೋಭಾವ, ಭೂಮಾತೆ ಎಂಬ ಮಾತುಗಳಲ್ಲಿ ಹೆಣ್ಣಿಗೆ ಗೌರವವಿತ್ತು. ಹಣಕ್ಕಾಗಿ ಲಕ್ಷ್ಮಿದೇವಿ, ಶಕ್ತಿಗಾಗಿ ದುರ್ಗಾದೇವಿ, ಬುದ್ಧಿಗಾಗಿ ಸರಸ್ವತಿ ಮೊರೆ ಹೋಗುತ್ತಿದ್ದರು. ಆದರೆ, ಮಧ್ಯ ಕಾಲದಲ್ಲಿ ಪರಕೀಯರ ದಾಳಿಯಿಂದ ಮಹಿಳಾ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿ ಅವರು ನಾಲ್ಕು ಗೋಡೆಗಳ ನಡುವೆ ಇರುವಂತಾಗಿತ್ತು. ಆದರೆ, ಈಗ ಮಹಿಳೆ ಮತ್ತೆ ಎಲ್ಲ ರಂಗಗಳಲ್ಲೂ ಮುಂದುವರೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶ್ಲಾಘಿಸಿದರು.

       ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕುಲಕರ್ಣಿ ಜಿ ಅಂಬಾದಾಸ್ ಮಾತನಾಡಿ, ರಕ್ಷಣೆಗಾಗಿ ದುರ್ಗಾದೇವಿಯನ್ನು, ಶಿಕ್ಷಣಕ್ಕಾಗಿ ಶಾರದಾ ದೇವಿಯನ್ನು ಹಾಗೂ ಹಣಕ್ಕಾಗಿ ಲಕ್ಷ್ಮಿದೇವಿ ಎಂಬ ಪ್ರಮುಖ ದೇವತೆಗಳನ್ನು ನಾವು ಆರಾಧಿಸುವ ಮೂಲಕ ಹೆಣ್ಣಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ಜಿಲ್ಲಾ ನ್ಯಾಯಾಲಯದಲ್ಲಿ ಈಗ ನಾಲ್ವರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಸೋಮವಾರ ಇನ್ನೂ ಇಬ್ಬರು ಮಹಿಳಾ ನ್ಯಾಯಮೂರ್ತಿಗಳು ಸೇರ್ಪಡೆಯಾಗುತ್ತಿದ್ದಾರೆ ಎಂದರು.

         ದುಡಿಯುವ ಮಹಿಳೆಯರು ಇತರ ಬಡ ಹೆಣ್ಣುಮಕ್ಕಳ ಓದಿಗೆ ನೆರವು ನೀಡುವ ಮೂಲಕ ಅವರನ್ನೂ ಆದರ್ಶ ಮಹಿಳೆಯರನ್ನಾಗಿ ಮಾಡಬೇಕು. ದೀನ-ದಲಿತರು, ಬಡವರಿಗೆ ನೆರವಾಗಬೇಕೆಂದು ಸಲಹೆ ನೀಡಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಮೂರ್ತಿ ಎಸ್ ನಾಗಶ್ರೀ, 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಮೂರ್ತಿ ಇ.ಚಂದ್ರಕಲಾ, 2ನೇ ಜೆಎಂಎಫ್‍ಸಿ ನ್ಯಾಯಮೂರ್ತಿ ಎಸ್.ಎಫ್. ಚೇತನಾ, ಹೆಚ್ಚುವರಿ ಸಿವಿಲ್ ನ್ಯಾಯಮೂರ್ತಿ ರಶ್ಮಿ ಎಸ್. ಮರಡಿ, ಹಾಗೂ ಜಿಲ್ಲಾ ವಕೀಲ ಸಂಘದ ಕಾರ್ಯಕಾರಿ ಸಮಿತಿ ಸದಸ್ಯೆ ಟಿ.ಎಂ. ಅನ್ನಪೂರ್ಣಮ್ಮ ಉಪಸ್ಥಿತರಿದ್ದರು.ಹಿರಿಯ ವಕೀಲೆ ಐ. ವಸಂತ ಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಬಿ.ಎಸ್. ಲಿಂಗರಾಜು ಸ್ವಾಗತಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap