ಚಳ್ಳಕೆರೆ
ಸರ್ಕಾರದ ವತಿಯಿಂದ ಪಡೆಯಬೇಕಾದ ದಾಖಲಾತಿಯನ್ನು ಪಡೆಯಲು ಸಾರ್ವಜನಿಕರು ನಾನಾ ರೀತಿಯ ಸಂಕಷ್ಟಗಳನ್ನು ಅನಿವಾರ್ಯವಾಗಿ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕ್ಯಾದಿಗುಂಟೆ ಗ್ರಾಮದ ನಿವೃತ್ತ ನೌಕರನೊಬ್ಬ ಕಳೆದ ಆರು ತಿಂಗಳಿನಿಂದ ಗ್ರಾಮ ಪಂಚಾಯಿತಿ ವತಿಯಿಂದ ಇ-ಸ್ವತ್ತು ಮಾಹಿತಿ ಕೇಳಿದರೂ ಕೊಡುತ್ತಿಲ್ಲವೆಂದು ಕ್ಷೇತ್ರದ ಶಾಸಕರಿಗೆ ದೂರು ನೀಡುವ ಮೂಲಕ ಅಧಿಕಾರಿ ವರ್ಗಕ್ಕೆ ಚಳಿ ಬಿಡಿಸಿದ್ದಾನೆ.
ತಾಲ್ಲೂಕಿನ ಸಿದ್ದೇಶ್ವರದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾದಿಗುಂಟೆ ಗ್ರಾಮದ ನಿವೃತ್ತ ಡಿ.ದರ್ಜೆ ನೌಕರ ಡಿ.ಪಲ್ಲಕಪ್ಪ ಕಳೆದ ಆರು ತಿಂಗಳಿನಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಿ.ಸರ್ವೆ ನಂ. 292ರ ಪೂರ್ವ, ಪಶ್ಚಿಮ 29 ಅಡಿ, ಉತ್ತರ, ದಕ್ಷಿಣ 70 ಅಡಿ, ರಿ. ಸರ್ವೆ ನಂ292/1ರ ಪೂರ್ವ, ಪಶ್ಚಿಮ 29 ಅಡಿ, ಉತ್ತರ, ದಕ್ಷಿಣ 29 ಅಡಿ ಅಳತೆಯ ಎರಡು ಖಾಲಿ ನಿವೇಶನಗಳ ಇ-ಸ್ವತ್ತು ನೀಡುವಂತೆ ಗ್ರಾಮ ಪಂಚಾಯಿತಿಗೆ ಅರ್ಜಿ ನೀಡಿ ಸಂಬಂಧಪಟ್ಟ ಶುಲ್ಕವನ್ನು ಸಹ ಪಾವತಿಸಿದ್ದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಾಖಲೆ ನೀಡಿರಲಿಲ್ಲ. ಅನಾರೋಗ್ಯ ಪೀಡಿತನಾದ ಈತ ತನಗೆ ದಾಖಲಾತಿಗಳು ಕೊಡಿಸುವಂತೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರ ಮೊಬೈಲ್ ವಾಟ್ಸ್ ಆಫ್‍ಗೆ ತನ್ನ ಎಲ್ಲಾ ಮಾಹಿತಿ ನೀಡಿ, ಕೂಡಲೇ ನನಗೆ ಸಂಬಂಧಪಟ್ಟ ದಾಖಲಾತಿಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ಧಾನೆ.
ಡಿ.ಪಲ್ಲಕಪ್ಪನವರ ಮಾಹಿತಿಯನ್ನು ವಾಟ್ಸ್ ಆಫ್ ಮೂಲಕ ತಿಳಿದ ಶಾಸಕ ಟಿ.ರಘುಮೂರ್ತಿ ಕೂಡಲೇ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳನ್ನು ಸಂಪರ್ಕಿ ಅರ್ಜಿದಾರರ ಅರ್ಜಿಯನ್ನು ವಿಲೇವಾರಿ ಮಾಡಲು ಸಾಧ್ಯವಾಗದಿದ್ದಕ್ಕೆ ಕಾರಣ ಕೊಡುವಂತೆ ತಿಳಿಸಿದ್ದಲ್ಲದೆ ಕೂಡಲೇ ಪಲ್ಲಕಪ್ಪನವರಿಗೆ ಅವರು ಕೇಳಿದ ದಾಖಲಾತಿಗಳನ್ನು ನೀಡಿ ವರದಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ಧಾರೆ.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸ್ವಷ್ಟಣೆ
ದೂರುದಾರ ಡಿ.ಪಲ್ಲಕಪ್ಪ ಮಾಹಿತಿ ಸಂಬಂಧಪಟ್ಟಂತೆ ಪತ್ರಿಕೆಯೊಂದಿಗೆ ಮಾತನಾಡಿದ ಕಾರ್ಯನಿರ್ವಹಣಾಧಿಕಾರಿ ಬಿ.ಎಲ್. ಈಶ್ವರಪ್ರಸಾದ್ , ಈ ಬಗ್ಗೆ ಶಾಸಕರು ಸೂಚನೆ ನೀಡಿದ್ದು, ನಾನು ಕೂಡಲೇ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿ ಅರ್ಜಿದಾರರ ಅರ್ಜಿಯನ್ನು ಎರಡು ದಿನಗಳೊಳಗೆ ವಿಲೇವಾರಿ ಮಾಡಿ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ ಎಂದಿದ್ಧಾರೆ.