ತುಮಕೂರು:
ಇಂದಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಇರುವ ಅವಕಾಶಗಳು ಬಹಳಷ್ಟು. ಪರಿಣತ ಉಪನ್ಯಾಸಕ ವರ್ಗದೊಂದಿಗೆ ಆಧುನಿಕ ತಂತ್ರಜ್ಞಾನಗಳು ಶಿಕ್ಷಣವನ್ನು ಸುಲಭವಾಗಿಸಿವೆ. ಮಾಹಿತಿಯ ಮಹಾಪೂರವೇ ವಿದ್ಯಾರ್ಥಿಗಳ ಅಂಗೈಯಲ್ಲಿದೆ. ಅದನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಸಂಸ್ಥೆಗೆ ಸಾರ್ಥಕ್ಯ ಭಾವ ಒದಗಿಸುವುದು ಅವರ ಜವಾಬ್ದಾರಿ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಕೆ ಬಿ ಜಯಣ್ಣ ಹೇಳಿದರು.
ಅವರು ವಿದ್ಯಾನಿಧಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಮೃದು ಕೌಶಲ್ಯಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಎನ್ ಬಿ ಪ್ರದೀಪ ಕುಮಾರ್ ತಂತ್ರಜ್ಞಾನದಲ್ಲಿ ಪ್ರಗತಿಯಾಗುತ್ತಿದ್ದಂತೆ ಕೃತಕ ಬುದ್ಧಿಮತ್ತೆಯ ಸೃಷ್ಟಿಯಾಗುತ್ತಿದೆ. ಚಾಲಕರಹಿತ ವಾಹನಗಳು ಇದಕ್ಕೆ ಉದಾಹರಣೆ. ಇಂತಹ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ, ಸೃಜನಶೀಲರಾಗಿರುವುದು ಮುಖ್ಯ. ಮಾತೃಭಾಷೆಯೆಂಬ ಪದಕ್ಕೆ ಜೋತುಬೀಳದೇ ಜಾಗತಿಕ ಭಾಷೆಯನ್ನು ಕಲಿಯಿರಿ.
ಸಂವಹನದ ಎಲ್ಲ ಅವಕಾಶಗಳನ್ನೂ ನಿಮ್ಮ ಪ್ರಗತಿಗೆ ಬಳಸಿಕೊಳ್ಳಿ. ಇಂಗ್ಲಿಷಿನಲ್ಲಿ ಓದು, ಚಿಂತನೆ, ಬರಹಗಳನ್ನು ರೂಢಿಸಿಕೊಳ್ಳಿ. ಮಾಧ್ಯಮಗಳಿಗೆ ಬರೆಯುವ ಅವಕಾಶವೂ ಸಾಕಷ್ಟಿದೆ. ಅಂತಹ ಕೌಶಲ್ಯಗಳನ್ನು ಬೆಳೆಸಿಕೊಳ್ಳಿ ಎಂದು ಕರೆನೀಡಿದರು. ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ತರಬೇತುದಾರರಾದ ಸಂಚಿತಾ ಮುಖರ್ಜಿ ಭಾಗವಹಿಸಿದ್ದರು.
ಮನಃಶಾಸ್ತ್ರಜ್ಞೆಯಾಗಿದ್ದು, ಕಾರ್ಪೋರೇಟ್ ವರ್ತನೆಗಳನ್ನು ಅಧ್ಯಯನ ಮಾಡಿರುವ ಅವರು, ತರಗತಿ ಅಧ್ಯಯನಗಳಲ್ಲಿ ನೀವು ಗಳಿಸುವ ಜ್ಞಾನ ಆಂತರಿಕವಾಗಿ ನಮಗೆ ಬಲ ನೀಡಿದರೆ, ನೀವು ಹೇಗೆ ವರ್ತಿಸುತ್ತೀರಿ ಮತ್ತು ಒಂದು ಸನ್ನಿವೇಶದಲ್ಲಿ ಹೇಗೆ ಮಾತನಾಡುತ್ತೀರಿ ಎಂಬುದು ನಿಮ್ಮ ಒಟ್ಟೂ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಯಾವುದೇ ಕ್ಷೇತ್ರದಲ್ಲಿ ನೀವು ಆಯ್ಕೆಯಾಗಬೇಕಾದರೆ ನಿಮ್ಮ ಮನೋಧರ್ಮ, ಆಕರ್ಷಕ ಮಾತುಗಳು ಮುಖ್ಯವಾಗುತ್ತವೆ. ಪ್ರಯತ್ನಪೂರ್ವಕವಾಗಿ ಮೃದು ಕೌಶಲಗಳನ್ನು ಬೆಳೆಸಿಕೊಳ್ಳಿ ಎಂದರು.
2018-19ನೇ ಸಾಲಿನ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ವಿದ್ಯಾರ್ಥಿ/ನಿಯರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಮತ್ತು ವಿದ್ಯಾರ್ಥಿವೃಂದದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
