ಚಿತ್ರದುರ್ಗ 

ಜಿಲ್ಲೆಯ ಜಿಲ್ಲಾ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೈರ್ಮಲ್ಯ ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಶುಚಿತ್ವ ಮತ್ತು ನೈರ್ಮಲ್ಯದ ಕೊರತೆ, ಶೌಚಾಲಯಗಳಲ್ಲಿ ಸ್ವಚ್ಛತೆಯ ಕೊರತೆ ಇರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಇತ್ತೀಚಿಗೆ ಹಿರಿಯೂರು ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವರು ಇಲ್ಲಿನ ಶೌಚಾಲಯದ ದುಸ್ಥಿತಿ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಆಸ್ಪತ್ರೆಗಳಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆ ನಿರ್ವಹಣೆಗೆ ಸಾಕಷ್ಟು ಸಿಬ್ಬಂದಿಗಳು ಲಭ್ಯವಿದ್ದರೂ, ನೈರ್ಮಲ್ಯದ ಕೊರತೆಯಾಗುತ್ತಿರುವುದು ಸರಿಯಲ್ಲ. ಆಸ್ಪತ್ರೆಗಳ ಸ್ವಚ್ಛತಾ ಸಿಬ್ಬಂದಿಗಳಿಗೆ ಸರದಿ ಆಧಾರದಲ್ಲಿ ಕೆಲಸ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಆದರೆ ಬೆಳಿಗ್ಗೆಯಿಂದ ಸಂಜೆಯವರೆಗೆ ಮಾತ್ರ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬರುತ್ತಿದೆ. ಈ ರೀತಿ ಆದಲ್ಲಿ, ಆಸ್ಪತ್ರೆಯನ್ನು ಸ್ವಚ್ಛವಾಗಿರಿಸಿಕೊಳ್ಳಲು ಸಾಧ್ಯವಿಲ್ಲ ಎಂದರು
ಅವಧಿ ಮೀರಿದ ಔಷಧಿಗಳನ್ನು ಯಾವುದೇ ಕಾರಣಕ್ಕೂ ವಿತರಿಸುವಂತಿಲ್ಲ. ಇನ್ನು ಮುಂದೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರು ಆಸ್ಪತ್ರೆಗಳ ಸ್ವಚ್ಛತೆ ಸ್ಥಿತಿ-ಗತಿ ಕುರಿತು ಪ್ರತಿ ತಿಂಗಳು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಇದರ ಜೊತೆಗೆ ಪ್ರತಿ ಆಸ್ಪತ್ರೆವಾರು ಅಲ್ಲಿನ ಪ್ರಯೋಗಾಲಯ, ಕುಡಿಯುವ ನೀರು, ಬಳಕೆ ನೀರು, ಔಷಧಿಯ ಲಭ್ಯತೆಯ ವಿವರವನ್ನೂ ಕೂಡ ಸಲ್ಲಿಸಬೇಕು. ಮಾರ್ಗಸೂಚಿಗಳ ಪಾಲನೆ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.
ಜನೌಷಧಿ ಮಳಿಗೆಗಳ ಪರಿಶೀಲನೆ :
ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಜೀವರಕ್ಷಕ ಔಷಧಿಗಳು ಲಭ್ಯವಾಗುವಂತೆ ಮಾಡಲು ಜಿಲ್ಲೆಯಾದ್ಯಂತ ಜನೌಷಧಿ ಮಳಿಗೆಗಳನ್ನು ತೆರೆಯಲಾಗಿದೆ. ಇಲ್ಲಿ ಶೇ. 50 ರ ರಿಯಾಯಿತಿ ದರದಲ್ಲಿ ಔಷಧಿಗಳನ್ನು ಜನರಿಗೆ ಮಾರಾಟ ಮಾಡಬೇಕು.
ಜನೌಷಧಿ ಮಳಿಗೆಗಳಲ್ಲಿ ಎಲ್ಲ ಔಷಧಿಗಳು ಲಭ್ಯವಿಧೆಯೇ ಇಲ್ಲವೆ, ವಿತರಣೆ ಮಾಡಲಾಗುತ್ತಿರುವ ಔಷಧಿಗಳು ಜನೌಷಧಿಗೆ ಸಂಬಂಧಿಸಿದ್ದೇ ಅಲ್ಲವೆ ಎಂಬುದನ್ನು ಯಾರೂ ಪರಿಶೀಲನೆ ಮಾಡುತ್ತಿಲ್ಲ. ಇನ್ನು ಮುಂದೆ ಜಿಲ್ಲೆಯಲ್ಲಿನ ಎಲ್ಲ ಜನೌಷಧಿ ಮಳಿಗೆಗಳ ಕಾರ್ಯ ಚಟುವಟಿಕೆಗಳ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲನೆ ನಡೆಸಿ, ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಫಾಲಾಕ್ಷ, ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರೂ ಆಗಿರುವ ಉಪವಿಭಾಗಾಧಿಕಾರಿ ವಿಜಯಕುಮಾರ್, ಸರ್ವೆಲೆನ್ಸ್ ಮೆಡಿಕಲ್ ಆಫೀಸರ್ ಬಳ್ಳಾರಿಯ ಡಾ. ಶ್ರೀಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯಕ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಜಯಪ್ರಕಾಶ್ ಸೇರಿದಂತೆ ತಾಲ್ಲೂಕುಗಳ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
