ದಾವಣಗೆರೆ
21 ವರ್ಷಗಳ ಕಾಲ ಕೇಂದ್ರ ಅರೆ ಮಿಲಿಟರಿ ಪಡೆಯಲ್ಲಿ ಸೇವೆ ಸಲ್ಲಿಸಿದ್ದ ಮಾಜಿ ಸೈನಿಕರೊಬ್ಬರು ಜಮೀನು, ನಿವೇಶನ ಪಡೆಯಲು ಕಳೆದ 8 ವರ್ಷಗಳಿಂದ ಅಲೆಯುತ್ತಿದ್ದರೂ ಯಾವುದೇ ನ್ಯಾಯ ಮಾತ್ರ ಸಿಕ್ಕಿಲ್ಲ.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಜಗಳೂರು ತಾಲೂಕು ಭರಮಸಮುದ್ರ ಗ್ರಾಮದ ಮಾಜಿ ಸೈನಿಕ ಬಿ.ಎನ್.ಪ್ರಹ್ಲಾದ್ ರೆಡ್ಡಿ ಮಾತನಾಡಿ, 1990ರಿಂದ 2011ರವರೆಗೆ ಸೆಂಟ್ರಲ್ ಪ್ಯಾರಾ ಮಿಲಿಟರಿ ಫೋರ್ಸ್‍ನಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿಯಾಗಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ನ್ಯಾಯಾಲಯದ ಆದೇಶದಂತೆ ನಿವೃತ್ತಿಯಾದ ಮಾಜಿ ಸೈನಿಕರಿಗೆ ಜಮೀನು, ಖಾಲಿ ನಿವೇಶನ ಕೊಡಬೇಕಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಭರಮಸಮುದ್ರ ಗ್ರಾಮದ ಸರ್ವೇ ನಂಬರ್ 24ರಲ್ಲಿ ಸರ್ಕಾರಿ ಸೇಂದಿ ವನ ಇದ್ದು, 20 ಎಕರೆ 21 ಗುಂಟೆ ಜಮೀನಿನಲ್ಲಿ ಅಂತಿಮವಾಗಿ ತಾಲೂಕು ಸರ್ವೇ ಅಧಿಕಾರಿ ನನಗೆ 4.5 ಎಕರೆ ಜಮೀನನ್ನು ಸರ್ವೇ ಮಾಡಿಕೊಟ್ಟಿದ್ದರು. ಅದಕ್ಕೆ ಸಂಬಂಧಿಸಿದ ಕಾಗದ ಪತ್ರಗಳು ಜಿಲ್ಲಾಧಿಕಾರಿ ಕಚೇರಿ ತಲುಪಿದ್ದರೂ ಈವರೆಗೆ ನನಗೆ ಜಮೀನು ಸಿಕ್ಕಿಲ್ಲ ಎಂದು ದೂರಿದರು.
ಜಗಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ವೇ ನಂಬರ್ 99ರಲ್ಲಿ ಜಮೀನಿದ್ದು, ಹಿಂದಿನ ಶಾಸಕರು ಮತ್ತು ಜಿಲ್ಲಾಧಿಕಾರಿಗಳು 40*30 ಅಡಿ ನಿವೇಶನ ನೀಡುವಂತೆ ಆದೇಶಿಸಿದ್ದರೂ ಸಹ ನನಗೆ ಖಾಲಿ ನಿವೇಶನ ನೀಡಿಲ್ಲ. ಈ ವಿಚಾರವಾಗಿ ಕಳೆದ 8 ವರ್ಷಗಳಿಂದಲೂ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದರೂ ನ್ಯಾಯ ಮಾತ್ರ ಸಿಕ್ಕಿಲ್ಲ ಎಂದು ಅಳಲುತೋಡಿಕೊಂಡರು.
ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು, ಮುಖ್ಯಮಂತ್ರಿ ಸೇರಿದಂತೆ ಅನೇಕರಿಗೆ ಮನವಿಪತ್ರ ನೀಡಿದ್ದೇನೆ. ಆದರೂ ಅಧಿಕಾರಿಗಳು ಯಾವ ರೀತಿಯಲ್ಲೂ ಸ್ಪಂದಿಸುತ್ತಿಲ್ಲ. ಮುಂದೆ ಎಸಿಬಿ, ಲೋಕಾಯುಕ್ತಕ್ಕೆ ದೂರು ನೀಡಿ ದೆಹಲಿಯಲ್ಲಿ ಧರಣಿ ಸತ್ಯಾಗ್ರಹ ಕೈಗೊಳ್ಳಲು ನಿರ್ಧರಿಸಿದ್ದೇನೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ರಾಮಚಂದ್ರಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
