ದಾವಣಗೆರೆ:
ಇಲ್ಲಿನ ಕಲಾಕುಂಚ ಸಾಂಸ್ಕøತಿಕ ಸಂಸ್ಥೆಯ ವತಿಯಿಂದ ನಗರದ ಶ್ರೀಅಭಿನವ ರೇಣುಕಾ ಮಂದಿರದಲ್ಲಿ ಜು.20ರಂದು ‘ಕನ್ನಡ ಕುವರ’-‘ಕನ್ನಡ ಕುವರಿ’ ಜಿಲ್ಲಾ ಪ್ರಶಸ್ತಿ ಹಾಗೂ ಜು.21ರಂದು ‘ಕನ್ನಡ ಕೌಸ್ತುಭ’, ‘ಸರಸ್ವತಿ ಪುರಸ್ಕಾರ’, ‘ಜ್ಞಾನಸಿರಿ’ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿಯ ಕನ್ನಡ ವಿಷಯದಲ್ಲಿ 125ಕ್ಕೆ 120ಕ್ಕೂ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜು.20ರಂದು ಬೆಳಿಗ್ಗೆ 10.05ಕ್ಕೆ ಹಿರಿಯ ಸಾಹಿತಿ ಡಾ.ನಾ.ಸೋಮೇಶ್ವರ ಅವರು ‘ಕನ್ನಡ ಕುವರ’, ‘ಕನ್ನಡ ಕುವರಿ’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಯಕ್ಷರಂಗ ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಪ್ರಭಾಕರಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾಲೂಕು ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ, ಶ್ರೀಮತಿ ಮೋತಿ ಗೌರಮ್ಮ ಮೋತಿ ಪಿ. ರಾಮರಾವ್ ಚಾರಿಟಬಲ್ ಟ್ರಸ್ಟ್‍ನ ಛೇರ್ಮನ್ ಮೋತಿ ಪರಮೇಶ್ವರ, ಪ್ರಕಾಶಕ ಎಸ್.ಎಸ್.ಹಿರೇಮಠ ಭಾಗವಹಿಸಲಿದ್ದಾರೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾ.ಸಿ.ಆರ್.ಚಂದ್ರಶೇಖರ್ ಅವರ ‘ಸಮಸ್ಯಾತ್ಮಕ ಮಕ್ಕಳ ಆಪ್ತ ಸಮಾಲೋಚನೆ’, ‘ಪರೀಕ್ಷಾ ಸಂಭ್ರಮ’, ‘ಮಾನಸಿಕ ಆರೋಗ್ಯ ನಿಮ್ಮ ಮಕ್ಕಳು ನಿಮ್ಮ ಪ್ರಶ್ನೆಗಳು’ ಹಾಗೂ ಡಾ.ನಾ.ಸೋಮೇಶ್ವರ ಅವರ ‘ಅಡುಗೆಮನೆ ಸೈನ್ಸ್’, ‘ಸ್ವಚ್ಛಮೇವ ಜಯತೆ’ ಕೃತಿಗಳು ಬಿಡುಗಡೆಯಾಗಲಿವೆ. ಸಂಜೆ 7 ಗಂಟೆಗೆ ವೃತ್ತಿನಿರತ ಯಕ್ಷಗಾನ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನೆರವೇರಲಿದೆ ಎಂದರು.
ಜು.21ರಂದು ಬೆಳಿಗ್ಗೆ 10.05ಕ್ಕೆ ಹಿರಿಯ ಮನೋ ವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಅವರು ಎಸ್ಸೆಸ್ಸೆಲ್ಸಿಯ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ ಮಕ್ಕಳಿಗೆ ‘ಕನ್ನಡ ಕೌಸ್ತುಭ’ ಒಟ್ಟು 625ಕ್ಕೆ 600ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ‘ಸರಸ್ವತಿ ಪುರಸ್ಕಾರ’ ಹಾಗೂ ಸೆಂಟ್ರಲ್ ಸಿಲೆಬಸ್‍ನ ಒಟ್ಟು 500 ಅಂಕಗಳಿಗೆ 480ಕ್ಕೂ ಅಧಿಕ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ‘ಜ್ಞಾನಸಿರಿ’ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕಲಾಕುಂಚ ಸಾಂಸ್ಕøತಿಕ ಸಂಸ್ಥೆ ಅಧ್ಯಕ್ಷ ಕೆ.ಎಚ್.ಮಂಜುನಾಥ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ದೂರದರ್ಶನ ಕೇಂದ್ರದ ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ನಿರೂಪಕ ಡಾ.ನಾ.ಸೋಮೇಶ್ವರ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಮಂಜುನಾಥ್ ಕುರ್ಕಿ, ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟ್ ಅಧ್ಯಕ್ಷ ಸಿ.ಆರ್. ವಿರೂಪಾಕ್ಷಪ್ಪ, ಕವಯತ್ರಿ ಎ.ಸಿ.ಶಶಿಕಲಾ ಶಂಕರಮೂರ್ತಿ ಮತ್ತಿತರರು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕನ್ನಡದ ತಿಲಕವಿಟ್ಟು, ಕನ್ನಡ ಕಂಕಣಕಟ್ಟಿ, ಕನ್ನಡಾರತಿ ಬೆಳಗಿ, ಅತಿಥಿಗಳೊಂದಿಗೆ ಮಂಗಳವಾದ್ಯ, ಡೊಳ್ಳುಕುಣಿತ, ವೀರಗಾಸೆ, ಜನಪದಪ್ರಕಾರಗಳೊಂದಿಗೆ ಮೆರವಣಿಗೆಯಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ವೇದಿಕೆಗೆ ಬರ ಮಾಡಿಕೊಂಡು, ಈ ಎರಡು ದಿನಗಳ ಕಾಲ ಒಟ್ಟು ಒಂದೂವರೆ ಸಾವಿರ ಮಕ್ಕಳನ್ನು ಪ್ರತ್ಯೇಕ ಆಸನಗಳಲ್ಲಿ ಕೂರಿಸಿ, ಪುಷ್ಪವೃಷ್ಟಿಯೊಂದಿಗೆ ಕಿರೀಟವಿಟ್ಟು ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ, ಚಿನ್ನದ ಲೇಪನದ ಪದಕದೊಂದಿಗೆ ಸನ್ಮಾನಿಸಲಾಗುವುದು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಲಾಕುಂಚ ಸಾಂಸ್ಕತಿಕ ಸಂಘಟನೆಯ ಅಧ್ಯಕ್ಷ ಕೆ.ಎಚ್.ಮಂಜುನಾಥ್, ಯಕ್ಷರಂಗ ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿ, ಹೇಮಾ ಶಾಂತಪ್ಪ ಪೂಜಾರಿ, ಬೇಳೂರು ಸಂತೋಷ್ ಕುಮಾರ ಶೆಟ್ಟಿ, ಶೈಲಾ ವಿಜಯಕುಮಾರ್, ವಸಂತಿ ಮಂಜುನಾಥ್, ದೀಪಾ ಕಿರಣ್, ರೇಖಾ ಓಂಕಾರಪ್ಪ, ಜ್ಯೋತಿ ಗಣೇಶ್ ಶೆಣೈ, ಶಾಂತಪ್ಪ ಪೂಜಾರಿ, ಕುಸುಮಾ ಲೋಕೇಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
