ದಾವಣಗೆರೆ:
ಜಿಲ್ಲೆಯಲ್ಲಿರುವ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್‍ಗಳನ್ನು ಗುರುತಿಸಲು ಸೆ.24ರಿಂದ ಜಿಲ್ಲಾದ್ಯಂತ ಮರು ಸಮೀಕ್ಷೆ ನಡೆಸಿ, ಸೆ.30ರ ಒಳಗೆ ಪಕ್ಕಾ ಅಂಕಿ-ಅಂಶ ಹೊಂದಿರುವ ಪಟ್ಟಿ ನೀಡಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಯವರು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್‍ಗಳ ಮರು ಸಮೀಕ್ಷೆಗೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಮರು ಸಮೀಕ್ಷೆಯ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡು, ಸೆ.24ರಿಂದ ಎಲ್ಲ ಕಡೆಯೂ ಸಮೀಕ್ಷೆ ಮಾಡಿಸಿ, ಸರಿಯಾದ ಅಂಕಿ-ಅಂಶ ಇರುವ ಪಟ್ಟಿ ತಯಾರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕೆಂದು ತಾಕೀತು ಮಾಡಿದರು.
ಇದಕ್ಕೂ ಮುಂಚೆ ಸಭೆಯಲ್ಲಿ ಮಾತನಾಡಿದ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಈ ಹಿಂದೆ ಜಿಲ್ಲೆಯ ದಾವಣಗೆರೆ ಹಾಗೂ ಹರಿಹರದಲ್ಲಿರುವ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್‍ಗಳ ಕುರಿತು ಸಮೀಕ್ಷೆ ನಡೆಸಿ, 156 ಜನರನ್ನು ಗುರುತಿಸಿ ಪಟ್ಟಿ ಮಾಡಿ ಕಳುಹಿಸಲಾಗಿತ್ತು. ಆದರೆ, ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಈ ಪಟ್ಟಿಗೆ ಮಾನ್ಯತೆ ಸಿಕ್ಕಿಲ್ಲ. ಹೀಗಾಗಿ ಮರು ಸಮೀಕ್ಷೆ ನಡೆಸಿ ಪಟ್ಟಿ ತಯಾರಿಸಲು, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ನಿರ್ದೇಶನ ನೀಡಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್‍ಗಳ ಬಗ್ಗೆ ಮರು ಸಮೀಕ್ಷೆ ನಡೆಸಲು ಕ್ಯಾಂಪ್ ಗುರುತಿಸಿದ್ದೀರಾ? ತಂಡಗಳನ್ನು ರಚಿಸಿದ್ದೀರಾ?, ಆ ತಂಡದಲ್ಲಿರುವವರಿಗೆ ಯಾರಿಂದ ತರಬೇತಿ ಕೊಡಿಸಿದ್ದೀರಾ? ಈ ಮರು ಸಮೀಕ್ಷೆಗೆ ಎಷ್ಟು ದಿನ ಕಾಲಾವಕಾಶಬೇಕೆಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ನಜ್ಮಾ, ಈಗಾಗಲೇ ಮರು ಸಮೀಕ್ಷೆ ನಡೆಸಲು ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲಿಯೇ ಅವರಿಗೆ ಪಾಲಿಕೆಯಲ್ಲಿರುವ ಹೆಲ್ತ್ ಇನ್ಸ್‍ಪೆಕ್ಟರ್‍ಗಳಿಂದ ತರಬೇತಿ ಕೊಡಿಸಲಾಗುವುದು. ದಾವಣಗೆರೆ ಹಾಗೂ ಹರಿಹರದಲ್ಲಿ ಸಮೀಕ್ಷೆ ನಡೆಸಲು 2 ದಿನ ಮತ್ತು ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ಮಲೆಬೆನ್ನೂರು, ಜಗಳೂರುಗಳಲ್ಲಿ ಸಮೀಕ್ಷೆ ನಡೆಸಲು ಒಂದೊಂದು ದಿನ ಬೇಕಾಗುತ್ತದೆ ಎಂದು ಪ್ರತಿಕ್ರಯಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಪದ್ಧತಿಯು ಅತ್ಯಂತ ಅನಿಷ್ಟ ಪದ್ಧತಿಯಾಗಿದೆ. ಇದನ್ನು ಕೊನೆ ಗಾಣಿಸಲೇಬೇಕಾಗಿದೆ. ಇದಾಗಬೇಕಾದರೆ, ಇವರನ್ನು ಕರಾರುವಕ್ಕಾಗಿ ಗುರುತಿಸಿ, ಪುನರ್ವಸತಿ ಕಲ್ಪಿಸುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಕಾ ಅಂಕಿ-ಅಂಶ ಇರುವ ಪಟ್ಟಿ ತಯಾರಿಸಿ ಸಲ್ಲಿಸಬೇಕೆಂದು ಹೇಳಿದರು.
ಸಫಾಯಿ ಕರ್ಮಚಾರಿಗಳ ಜಿಲ್ಲಾ ಕಣ್ಗಾವಲು ಸಮಿತಿಯ ಸದಸ್ಯ ಬಾಬು ಮಾತನಾಡಿ, ಹೊನ್ನಾಳಿಯಲ್ಲೂ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಇದ್ದಾರೆ. ಹೊನ್ನಾಳಿಯ ಟಿಬಿ ಸರ್ಕಲ್ ಬಳಿಯಲ್ಲಿ ವಾಸವಾಗಿದ್ದುಕೊಂಡು ಪಟ್ಟಣದಲ್ಲಿ ಈ ಕೆಲಸ ಮಾಡುತ್ತಿದ್ದಾರೆ. ಆದರೆ, ಈ ಸರ್ಕಲ್ ಕುಳಗಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವುದರಿಂದ ಅವರ ಹೆಸರುಗಳನ್ನು ಕೈಬಿಡಲಾಗಿತ್ತು. ಈ ಮರು ಸಮೀಕ್ಷೆಯಲ್ಲಿ ಅವರನ್ನು ಪಟ್ಟಿಗೆ ಸೇರಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಯಿಸಿದ ಡಿಸಿ ಮಹಾಂತೇಶ್ ಬೀಳಗಿ, ನಮಗೆ ಆಯೋಗವು ನಗರ ಮತ್ತು ಪಟ್ಟಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಾತ್ರ ಇವರನ್ನು ಪತ್ತೆ ಹಚ್ಚಲು ಸೂಚಿಸಿದೆ. ಆದ್ದರಿಂದ ಅವರನ್ನು ಈ ಪಟ್ಟಿಯಲ್ಲಿ ಸೇರಿಸಲಾಗದು ಎಂದ ಅವರು, ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಪತ್ರ ಬರೆದು, ಗ್ರಾಮೀಣ ಪ್ರದೇಶದಲ್ಲಿರುವ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್‍ಗಳ ಬಗ್ಗೆ ಸಮೀಕ್ಷೆ ನಡೆಸಲು ಎಲ್ಲಾ ತಾಲೂಕು ಪಂಚಾಯತ್ ಇಒಗಳಿಗೆ ಸೂಚಿಸಬೇಕೆಂದು ಕೋರಿ ಪತ್ರ ಬರೆಯಿರಿ ಎಂದು ನಗರ ಅಭಿವೃದ್ಧಿ ಕೋಶದ ನಜ್ಮಾ ಅವರಿಗೆ ಸೂಚನೆ ನೀಡಿದರು.
ರಾಜ್ಯ ಪೌರ ಕಾರ್ಮಿಕರ ಸಂಘದ ಉಪಾಧ್ಯಕ್ಷ ಎಲ್.ಎಂ.ಹನುಮಂತಪ್ಪ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ಎಷ್ಟು ಜನ ಪೌರಕಾರ್ಮಿಕರಿದ್ದಾರೆಂಬುದರ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ. ಎಷ್ಟೋ ಕಾರ್ಮಿಕರಿಗೆ ಗುರುತಿನ ಚೀಟಿಯೇ ವಿತರಿಸಿಲ್ಲ. ಗುಮಾಸ್ತರು ಅವರಿಗೆ ಬೇಕಾದವರಿಗೆ ಲಂಚ ಪಡೆದು ಗುರುತಿನ ಚೀಟಿ ನೀಡುತ್ತಿದ್ದಾರೆ. ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ಆರೋಪಿಸಿ, ಮೊದಲು ಮಲ ಗುಂಡಿಗಳಿದ್ದವು. ಆದರೆ, ಈಗ ಅವು ಯುಜಿಡಿಗಳಾಗಿವೆ. ಅವು ಎಲ್ಲೇ ಕೆಟ್ಟರೂ ನಮ್ಮ ಪೌರ ಕಾರ್ಮಿಕರೇ ಕೆಲಸ ಮಾಡಬೇಕು. ಹೀಗಾಗಿ ಇವರಿಗೂ ಸೌಲಭ್ಯ ಕಲ್ಪಿಸುವುದರ ಜೊತೆಗೆ ಮಾಸ್ಟರ್ ಹೆಲ್ತ್ ಚೆಕಾಪ್ ಮಾಡಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಪ್ರತಿಕ್ರಯಿಸಿದ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ಪಾಲಿಕೆಗೆ ಒಟ್ಟು 633 ಪೌರ ಕಾರ್ಮಿಕರ ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 290 ಖಾಯಂ ಮತ್ತು 245 ಖಾಯಂ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದೆ. ಪ್ರತಿ ತಿಂಗಳು 10ನೆ ತಾರೀಖಿನೊಳಗೆ ವೇತನ ಬಟವಾಡೆ ಮಾಡಲಾಗುತ್ತಿದೆ. ಅಲ್ಲದೇ, ಮಾಸ್ಟರ್ ಹೆಲ್ತ್ ಚೆಕಾಪ್ ನಡೆಸುವಂತೆಯೂ ಜಿಲ್ಲಾಸ್ಪತ್ರೆ ಅಧೀಕ್ಷಕರಿಗೆ ಪತ್ರ ಬರೆಯಲಾಗಿದೆ ಎಂದರು.
ಸಫಾಯಿ ಕರ್ಮಚಾರಿ ಸಂಘದ ಸಂತೋಷ ಮಾತನಾಡಿ, ಸಫಾಯಿ ಕರ್ಮಚಾರಿ ನಿಗಮದ ಅಡಿಯಲ್ಲಿ ಪೌರ ಕಾರ್ಮಿಕರ ಮಕ್ಕಳು ವಿವಿಧ ಸೌಲಭ್ಯಕ್ಕಾಗಿ ಮನವಿ ಸಲ್ಲಿಸಿದ್ದರು. ಆದರೆ, ಅದೇನಾಯಿತು ಎಂಬುದು ಇನ್ನೂ ಗೊತ್ತಾಗಲಿಲ್ಲ ಎಂದರು.ಈ ವೇಳೆ ನಿಗಮದ ಡಿಎಂ ಹೀನಾ ಕೌಸರ್ ಮಾತನಾಡಿ, ರಾಜ್ಯ ಸರ್ಕಾರವು ನಮಗೆ ಜಿಲ್ಲೆಯಲ್ಲಿ 3,843 ಮಂದಿ ಸಫಾಯಿ ಕರ್ಮಚಾರಿಗಳಿದ್ದಾರೆಂಬುದಾಗಿ ಮಾಹಿತಿ ನೀಡಿತ್ತು. ಇದರಡಿಯಲ್ಲಿ 362 ಜನರು ವಿವಿಧ ಸೌಲಭ್ಯಕ್ಕಾಗಿ ಅರ್ಜಿಸಲ್ಲಿಸಿದ್ದರು. ಆದರೆ, ಸರ್ಕಾರದಿಂದ ಈ ವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದರು. ಆಗ ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಅರ್ಜಿಗಳನ್ನು ಸರ್ಕಾರಕ್ಕೆ ಕಳುಹಿಸಿ ಕೊಡಿ ಎಂದರು.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸಮಾಜ ಕಲ್ಯಾಣ ಇಲಖೆ ಉಪ ನಿರ್ದೇದಶಕ ಶಿವಾನಂದ ಕಂಬಾರ್, ಸಫಾಯಿ ಕರ್ಮಚಾರಿಗಳ ಜಿಲ್ಲಾ ಕಣ್ಗಾವಲು ಸಮಿತಿಯ ವಸಂತ್, ಮಂಜುಳಮ್ಮ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ