ಚಿತ್ರದುರ್ಗ
ಚಿತ್ರದುರ್ಗದ ಭವ್ಯ ಇತಿಹಾಸವನ್ನು ಪ್ರತಿಯೊಬ್ಬ ಪ್ರವಾಸಿಗರೂ ಕಣ್ತುಂಬಿಕೊಂಡು ಅನುಭವಿಸುವ ರೀತಿಯಲ್ಲಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಇಲ್ಲಿನ ಕೋಟೆಯ ಆವರಣದಲ್ಲಿ ಕಲ್ಪಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ರಾಜ್ಯ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅವರು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಗಳ ಪ್ರಗತಿ ಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು, ವಿದೇಶಿ ಪ್ರವಾಸಿಗರು ದುರ್ಗದ ಕೋಟೆ ವೀಕ್ಷಿಸಲು ಬರುತ್ತಾರೆ. ದುರ್ಗದ ಕೋಟೆಯ ಇತಿಹಾಸವನ್ನು ತಿಳಿಯಲು ಅಥವಾ ಇಲ್ಲಿನ ಪ್ರವಾಸಿ ತಾಣಗಳ ಬಗ್ಗೆ ತಿಳಿಯಲು ಇಲ್ಲಿ ಮಾಹಿತಿ ಕೇಂದ್ರ ಕೂಡ ಲಭ್ಯವಿಲ್ಲ. ಕೋಟೆಯಲ್ಲಿ ಕೆಲವೆಡೆ ಲೈಟಿಂಗ್ ವ್ಯವಸ್ಥೆ ಮಾಡಿದ್ದರೂ ಅವು ಬೆಳಗುತ್ತಿಲ್ಲ ಎಂಬ ದೂರುಗಳಿವೆ.
ಅಂಡಮಾನ್ ಜೈಲು ಹಾಗೂ ಆಂಧ್ರದ ಗೋಲ್ಕಂಡ ಕೋಟೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಯವರು ಅಲ್ಲಿನ ಇತಿಹಾಸ ಸಾರುವ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಅಳವಡಿಸಿದ್ದಾರೆ. ಇದೇ ಮಾದರಿಯಲ್ಲಿ ಚಿತ್ರದುರ್ಗದ ಇತಿಹಾಸವನ್ನು ಬಿಂಬಿಸುವ ಸುಸಜ್ಜಿತ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಕೋಟೆಯ ಆವರಣದಲ್ಲಿ ಅಳವಡಿಸಬೇಕು. ಇದಕ್ಕೆ ಕೂಡಲೆ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸಲ್ಲಿಸಬೇಕು. ರಾಜ್ಯ ಪ್ರವಾಸೋದ್ಯಮ ಇಲಾಖೆ ಅಗತ್ಯ ನೆರವು ಒದಗಿಸಲಿದೆ ಎಂದು ಸಚಿವರು ಸೂಚನೆ ನೀಡಿದರು.
ಪ್ರವಾಸಿ ತಾಣಗಳ ಅಭಿವೃದ್ಧಿ :
ಜಿಲ್ಲೆಯಲ್ಲಿ ಒಟ್ಟು 8 ಪ್ರವಾಸಿ ತಾಣಗಳನ್ನು ಗುರುತಿಸಿ, ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾ ಖನಿಜ ನಿಧಿಯಡಿ 30.50 ಕೋಟಿ ರೂ. ಗಳ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಚಿತ್ರದುರ್ಗದ ಕೋಟೆ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಪ್ರವಾಸೋದ್ಯಮ ಇಲಾಖೆಯು ಸಮಗ್ರ ವರದಿ ಸಿದ್ಧಪಡಿಸಿ, 8.15 ಕೋಟಿ ರೂ. ಅನುದಾನವನ್ನು ಸರ್ಕಾರ ಒದಗಿಸುತ್ತಿದ್ದು, ಈಗಾಗಲೆ ಭಾರತೀಯ ಪುರಾತತ್ವ ಇಲಾಖೆಗೆ ಅನುಮೋದನೆಗೆ ಸಲ್ಲಿಸಿದೆ ಎಂದರು
ಅದೇ ರೀತಿ ಚಂದ್ರವಳ್ಳಿಯಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿಗಾಗಿ 8.32 ಕೋಟಿ ರೂ. ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆಯಲಿದೆ.. 2014-15 ರಿಂದ ಈವರೆಗೆ ಒಟ್ಟು 68 ಕಾಮಗಾರಿಗಳನ್ನು ಕೈಗೊಂಡಿದ್ದು, 32.82 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೆಎಸ್‍ಟಿಡಿಸಿ ಆವರಣದಲ್ಲಿ ಪ್ರವಾಸಿ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ನಿರ್ಮಿತಿ ಕೇಂದ್ರ ಹಾಗೂ ಕೆಆರ್‍ಐಡಿಎಲ್ ನವರು ಕೈಗೊಳ್ಳುತ್ತಿರುವ ಕಾಮಗಾರಿಗಳನ್ನು ಜನವರಿ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಸಚಿವರು ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಸಂಸದ ಎ. ನಾರಾಯಣಸ್ವಾಮಿ ಹಿರಿಯೂರು ಶಾಸಕಿ ಪೂರ್ಣಿಮ, ಜಿ.ಹೆಚ್. ತಿಪ್ಪಾರೆಡ್ಡಿ, ವಿಧಾನಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ತಿಪ್ಪೇಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ