ತುರುವೇಕೆರೆ:
ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಯಾವುದೇ ಲೋಪದೋಷಗಳು ಆಗದಂತೆ ಸಮರ್ಪಕ ಅನುಷ್ಟಾನ ವಾಗಬೇಕು ಎಂದು ಜಿಲ್ಲಾ ಪಂಚಾಯ್ತಿ ಸಿ.ಇ.ಓ ಶುಭಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ತಾಲೂಕು ಮಟ್ಟದ ಅಧಿಕಾರಿಗಳು, ಪಿ.ಡಿ.ಓ. ಹಾಗೂ ಕಾರ್ಯದರ್ಶಿಗಳ ಪ್ರಗತಿಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ಮಾನವ ದಿನಗಳನ್ನು ಸೃಷ್ಟಿಸಬೇಕಿದೆ.
ಈ ಮೂಲಕ ಗ್ರಾಮೀಣರಿಗೆ ಉದ್ಯೋಗ ಖಾತ್ರಿಯನ್ನು ನೀಡಬೇಕಾಗಿದೆ. ಈ ಯೋಜನೆಯ ಸಮರ್ಪಕ ಅನುಷ್ಟಾನ ಗೊಳಿಸುವ ನಿಟ್ಟಿನಲ್ಲಿ ಸರ್ಕಾರ ನಿಗದಿಪಡಿಸಿದ ಮಾನದಂಢಗಳನ್ನು ತಪ್ಪದೇ ಪಾಲಿಸಬೇಕು. ಯಾವುದೇ ಲೋಪದೋಷಗಳು ಕಂಡುಬಂದರೇ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಅಪೂರ್ಣಗೊಂಡಿರುವ ಅಂಗನವಾಡಿ ಕಟ್ಟಡ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಸ್ಥಳೀಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೇಡಿಕೆ ಅನುಗುಣವಾಗಿ ಕರವಸೂಲಾತಿ ಮಾಡುವ ಮೂಲಕ ಸ್ಥಳೀಯ ಸಂಪನ್ಮೂಲಗಳನ್ನು ವೃದ್ದಿಗೊಳಿಸಲು ಗ್ರಾ.ಪಂ. ಸಿಬ್ಬಂಧಿಗಳು ಕಾರ್ಯೋನ್ಮುಖರಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸುವುದಕ್ಕೆ ಆದ್ಯತೆ ನೀಡಬೇಕು ಎಂದರು.
ಸಭೆಯಲ್ಲಿ ಇ.ಓ. ಜಯಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಮೋದ್ಕುಮಾರ್, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸದಾಶಿವಮೂರ್ತಿ, ತೋಟಗಾರಿಕೆ ಇಲಾಖೆ ನಿರ್ದೇಶಕಿ ರೇಖಾ, ಮೀನುಗಾರಿಕಾ ಇಲಾಖೆ ನಿರ್ದೇಶಕಿ ದೀಪಾಲಿ, ಪಿ.ಆರ್.ಇ.ಡಿ.ಎ.ಇ.ಇ. ಅಕ್ಷರದಾಸೋಹ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ,ಪಿ.ಡಿ.ಓಗಳು ಹಾಗೂ ಕಾರ್ಯದರ್ಶಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ