ಹುಳಿಯಾರು
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಸಾಧನೆಯನ್ನು ಮನೆಮನೆಗೆ ತಲುಪಿಸುವಂತೆ ಕಾರ್ಯಕರ್ತರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕರೆಕೊಟ್ಟರು.ಅವರು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಎರಡನೆ ಅವಧಿಯ ಮೊದಲ ವರ್ಷ ಪೂರ್ಣಗೊಳಿಸಿದ ಪ್ರಯುಕ್ತ ಹುಳಿಯಾರಿನಲ್ಲಿ ಆಯೋಜಿಸಿದ್ದ ಕೇಂದ್ರ ಸರ್ಕಾರದ ಸಾಧನೆಗಳನ್ನು ತಲುಪಿಸುವ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಸರ್ಕಾರದ 370ನೆ ವಿಧಿ ರದ್ದತಿ, ತ್ರಿವಳಿ ತಲಾಕ್ ನಿಷೇಧ, ಆಯುಷ್ಮಾನ್ ಭಾರತ್, ಗರಿಬ್ ಕಲ್ಯಾಣ, ಅಟಲ್ ಪೆನ್ಷನ್, ಪ್ರಧಾನಮಂತ್ರಿ ಕಿಸಾನ್ ಸೇರಿದಂತೆ ಹಲವು ಅಭಿವೃದ್ಧಿ ನಿರ್ಧಾರಗಳು ಜನರಿಂದ ಪ್ರಶಂಸನೆಗೊಳಗಾಗಿವೆ. ಜಮ್ಮು-ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದುಪಡಿಸುವುದು, ಪೌರತ್ವ ತಿದ್ದುಪಡಿ ವಿಧೇಯಕ ಅಂಗೀಕಾರ, ಬಹುದಿನಗಳ ಕನಸಾಗಿದ್ದ ರಾಮಮಂದಿರ ನಿರ್ಮಾಣದ ಮೂಲಕ ಮೋದಿ ಸರ್ಕಾರ ದಿಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದೆ ಎಂದು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಜಗತ್ತನ್ನೇ ತಲ್ಲಣಗೊಳಿಸಿದ ಮಹಾ ಮಾರಿ ಕೋವಿಡ್ ಒಡ್ಡಿದ ಪ್ರಬಲ ಸವಾಲನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವ ಜತೆಗೆ ಜನರಿಗೆ ಆರ್ಥಿಕ ಮತ್ತು ವೈದ್ಯಕೀಯ ನೆರವು ನೀಡುವ ಮೂಲಕ ಸಂಕಷ್ಟಗಳ ಸುಳಿಯಲ್ಲಿ ಸಿಲುಕಿದ್ದ ದೇಶವನ್ನು ಸುರಕ್ಷಿತವಾಗಿ ದಡ ಸೇರಿಸುವಲ್ಲಿ ಯಶಸ್ವಿಯಾಗಿವೆ. ಇದನ್ನು ವಿಶ್ವವೆ ಹೊಗಳುತ್ತಿದೆ, ಎಂದರಲ್ಲದೆ ಕೊರೊನಾ ನಿಯಂತ್ರಿಸಿದ್ದೇ ಎರಡೂ ಸರ್ಕಾರದ ಈ ವರ್ಷದ ಬಹುದೊಡ್ಡ ಸಾಧನೆಯಾಗಿದ್ದು ಕಾರ್ಯಕರ್ತರು ಜನರಿಗೆ ಹೆಮ್ಮೆಯಿಂದ ತಲುಪಿಸಬೇಕಿದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಟಿ.ಶಂಕರಲಿಂಗಯ್ಯ, ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿರಂಜನಮೂರ್ತಿ, ಯುವ ಬಿಜೆಪಿಯ ಸಂತೋಷ್, ಓಬಿಸಿ ಘಟಕದ ಲೋಕೇಶ್, ತಾಪಂ ಸದಸ್ಯರುಗಳಾದ ಸಿಂಗದಹಳ್ಳಿ ರಾಜಕುಮಾರ್, ಕೇಶವಮೂರ್ತಿ, ಶ್ರೀಹರ್ಷ, ತಾಪಂ ಮಾಜಿ ಸದಸ್ಯರುಗಳಾದ ಕೆಂಕೆರೆ ನವೀನ್, ವಸಂತಯ್ಯ, ಜಯಣ್ಣ, ಪಪಂ ಮಾಜಿ ಸದಸ್ಯ ಹೇಮಂತ್, ಬರಕನಹಾಲ್ ಶಿವು, ರಾಮಣ್ಣ, ಪಾತ್ರೆ ಪರಮೇಶ್, ರೇವಣ್ಣ, ಯಳನಾಡು ಮೋಹನ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ