ವಿವಿಧ ಇಲಾಖೆಗಳ ಸೌಲಭ್ಯ ಪಡೆದುಕೊಳ್ಳಿ;ಶಶಿಕಲಾ ಸುರೇಶ್

ಚಿತ್ರದುರ್ಗ:

   ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ತಲುಪಬೇಕು. ಇಲಾಖೆಯ ಯೋಜನೆಗಳ ಸದುಪಯೋಗವನ್ನು ರೈತರು ಹಾಗೂ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ ಸಾಮಾಜಿಕ ಜಾಲತಾಣದದಿಂದ ಅರಿವು ನೆರವು ಕಾರ್ಯಕ್ರಮದ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಹೇಳಿದರು.

   ನಗರದ ಜಿಲ್ಲಾ ಪಂಚಾಯತಿ ಮಿನಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ “ಅರಿವು ನೆರವು” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಾಮಾಜಿಕ ಜಾಲತಾಣಗಳು ವೇಗವಾಗಿ ಬೆಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಯೂಟ್ಯೂಬ್ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ಸಾರ್ವಜನಿಕರಿಗೆ ಸಮರ್ಪಕವಾಗಿ ತಿಳಿಯಲಿ ಎಂಬ ಉದ್ದೇಶ ಹೊಂದಲಾಗಿದೆ.

   ಪ್ರತಿಯೊಂದು ವಾರವೂ ಒಂದೊಂದು ಇಲಾಖೆಯ ಕಾರ್ಯಕ್ರಮಗಳ ಕುರಿತು, ಪ್ರಸಕ್ತ ವರ್ಷದ ಯೋಜನೆಗಳ ಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಕಳೆದ ವಾರ ಕೃಷಿ ಇಲಾಖೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

  ತೋಟಗಾರಿಕೆ ಇಲಾಖೆ ಕುರಿತು ಮಾಹಿತಿ: ತೋಟಗಾರಿಕೆ ಇಲಾಖೆಯ ಕಾರ್ಯಕ್ರಮಗಳ ಕುರಿತು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಅವರು ಇಲಾಖೆಯ ಸೌಲಭ್ಯಗಳು ಹಾಗೂ ರೈತರಿಗೆ ಅಗತ್ಯ ಮಾರ್ಗದರ್ಶನ ಹಾಗೂ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು 1 ಲಕ್ಷ 63 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ತೋಟದ ಬೆಳೆಗಳಾದ ತೆಂಗು ಮತ್ತು ಅಡಿಕೆ ಬೆಳೆಗಳನ್ನು 94 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.

    ಹಣ್ಣಿನ ಬೆಳೆಗಳಾದ ದಾಳಿಂಬೆ, ಪಪ್ಪಾಯ, ಬಾಳೆ, ಸಪೋಟ, ಕಲ್ಲಂಗಡಿ ಬೆಳೆಗಳನ್ನು 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಪ್ರಮುಖವಾಗಿ ಜಿಲ್ಲೆಯ ತರಕಾರಿ ಬೆಳೆಗಳಾದ ಈರುಳ್ಳಿ, ಹಸಿಮೆಣಸಿನ ಕಾಯಿ, ನುಗ್ಗೆ ಬೆಳೆಗಳನ್ನು 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಅಲ್ಲದೆ ಪುಷ್ಪ ಬೆಳೆಗಳಾದ ಸುಗಂದರಾಜ, ಗುಲಾಬಿ, ಕನಕಾಂಬರ ಸೇರಿದಂತೆ 2500 ಹೆಕ್ಟೇರ್ ಪ್ರದೇಶದಲ್ಲಿ ಪುಷ್ಪ ಕೃಷಿ ಮಾಡಲಾಗುತ್ತಿದೆ. ಔಷಧಿ ಬೆಳೆಗಳನ್ನು ಸಹ 40 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.

   ಕೋವಿಡ್-19 ಲಾಕ್‍ಡೌನ್ ಸಂದರ್ಭದಲ್ಲಿ ರೈತರಿಗೆ ಮಾರುಕಟ್ಟೆ ಇಲ್ಲದೇ ಸಮಸ್ಯೆಯಾಗಿತ್ತು. ಈ ಸಂದರ್ಭದಲ್ಲಿ ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‍ಗೆ ರೂ. 25.000 ರೂ ಪರಿಹಾರ ನೀಡಲಾಗಿತ್ತು. ಸರ್ಕಾರದ ಮಾರ್ಗಸೂಚಿ ಪ್ರಕಾರ ಜಿಲ್ಲೆಯಲ್ಲಿ 1596 ಹೂವಿನ ಬೆಳೆಗಾರರಿಗೆ 1 ಕೋಟಿ 26 ಲಕ್ಷ ಪರಿಹಾರ ಧನ ಪಾವತಿ ಮಾಡಲಾಗಿದೆ. 2395 ಹಣ್ಣಿನ ಬೆಳೆಗಾರರಿಗೆ 2 ಕೋಟಿ 40 ಲಕ್ಷ ಪರಿಹಾರ ಧನ ಪಾವತಿ ಮಾಡಲಾಗಿದೆ. 9000 ತರಕಾರಿ ಫಲಾನುಭವಿಗಳಿಗೆ 9 ಕೋಟಿ 16 ಲಕ್ಷ ಪಾವತಿಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 13,006 ಫಲಾನುಭವಿಗಳಿಗೆ ಒಟ್ಟು 12 ಕೋಟಿ 83 ಲಕ್ಷ ಡಿಬಿಟಿ ಮೂಲಕ ಪರಿಹಾರದ ಹಣ ಪಾವತಿಯಾಗಿದೆ ಎಂದು ತಿಳಿಸಿದರು.

   ಕೇಂದ್ರ ಸರ್ಕಾರದ ರಾಷ್ಟೀಯ ತೋಟಗಾರಿಕೆ ಮಿಷನ್ ಯೋಜನೆ ಅನುಷ್ಠಾನ ಮಾಡಲಾಗುತ್ತಿದ್ದು, ಈ ಯೋಜನೆಯಡಿ ಹಣ್ಣು ಮತ್ತು ಹೂವಿನ ಪ್ರದೇಶದ ವಿಸ್ತರಣೆ ಹಾಗೂ ತರಕಾರಿ ಪ್ರದೇಶ ವಿಸ್ತರಣೆ ಮಾಡುವ ರೈತರಿಗೆ ಸಹಾಯಧನ ನೀಡಲು ಅವಕಾಶವಿದೆ. ಅಲ್ಲದೇ ಪಾಲಿಮನೆ, ಪ್ಯಾಕ್‍ಹೌಸ್, ಈರುಳ್ಳಿ ಸಂಗ್ರಹಣಾ ಘಟಕ, ಸಮುದಾಯ ಕೃಷಿ ಹೊಂಡ, ವೈಯಕ್ತಿಕ ಕೃಷಿ ಹೊಂಡ, ಜೇನು ಕೃಷಿ ಹಾಗೂ ಯಾಂತ್ರಿಕರಣ ಘಟಕಗಳಿಗೆ ಈಗಾಗಲೇ ಸಹಾಯಧನಕ್ಕಾಗಿ ಅರ್ಜಿಗಳನ್ನು ತಾಲ್ಲೂಕುವಾರು ಸ್ವೀಕರಿಸಲಾಗಿದೆ. ಅರ್ಹ ರೈತರಿಗೆ ಕಾರ್ಯಾದೇಶ ನೀಡಲಾಗುತ್ತಿದ್ದು, ಘಟಕಗಳು ಪ್ರಾರಂಭಗೊಂಡಿವೆ. ರೈತ ಬಾಂಧವರು ರಾಷ್ಟ್ರೀಯ ತೋಟಗಾರಿಕೆ ಮಿಷನ್‍ನ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.

   ನರೇಗಾ ಯೋಜನೆಯಡಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ಗರಿಷ್ಟ 2 ಲಕ್ಷ ಪಡೆಯಲು ಅವಕಾಶವಿದೆ. ಜಿಲ್ಲೆಯಲ್ಲಿ ಪ್ರಮುಖವಾಗಿ ತೆಂಗು ನಾಟಿ ಮಾಡಿದರೆ 1 ಹೆಕ್ಟೇರ್‍ಗೆ ಕೂಲಿ ಮತ್ತು ವೆಚ್ಚ ಸೇರಿ 62 ಸಾವಿರ ನೀಡಲು ಅವಕಾಶವಿದೆ ಮಾವು ಮತ್ತು ಸಪೋಟಕ್ಕೆ 44,381 ಸಹಾಯಧನ ರೈತರು ಪಡೆಯಬಹುದು. ದಾಳಿಂಬೆಗೆ 1 ಹೆಕ್ಟೇರ್‍ಗೆ ಕೂಲಿ ಮತ್ತು ಸಾಮಾಗ್ರಿ ವೆಚ್ಚ 59 ಸಾವಿರ ಪಡೆಯಬಹುದು ಎಂದು ಮಾಹಿತಿ ನೀಡಿದರು.

   ಜಿಲ್ಲೆಯಲ್ಲಿ ಹಳೆಯ ತೆಂಗಿನ ತೋಟದ ಬೆಳೆಗಳಿದ್ದು, ಹಳೆಯ ತೆಂಗಿನ ತೋಟಗಳನ್ನು ಪುನಃಶ್ಚೇತನಗೊಳಿಸಲು ಪ್ರತಿ ಹೆಕ್ಟೇರ್‍ಗೆ 41 ಸಾವಿರ ಸಹಾಯಧನ ನೀಡಲಾಗುವುದು ಎಂದು ಹೇಳಿದರು. ಹಳೇಯ ಮಾವಿನ ತೋಟಗಗಳನ್ನು ಪುನಃಶ್ವೇತನಗೊಳಿಸಲು 46,9856 ರೂಗಳನ್ನು ಕೊಡಲು ಅವಕಾಶವಿದೆ. ಈರುಳ್ಳಿ ಪ್ರಮುಖ ತರಕಾರಿ ಬೆಳೆಯಾಗಿದ್ದು, ಈರುಳ್ಳಿ ಸಂಗ್ರಹಣಾ ಘಟಕಕ್ಕೆ ರೂ.. 87,500 ಸಹಾಯಧನ ನೀಡಲಾಗುವುದು. ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಹನಿನೀರಾವರಿ ಮಾಡಲು ಅವಕಾಶವಿದೆ ಎಂದು ಹೇಳಿದರು.

    ತೋಟಗಾರಿಕೆ ಬೆಳೆಗಳ ತಾಂತ್ರಿಕ ಮಾಹಿತಿಗೆ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ರೈತರು ಇಲಾಖೆಯ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಟಿ.ಯೋಗೇಶ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಸೇರಿತಂತೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link