ತೋವಿನಕೆರೆ
ಶಾಲೆಗಳು ಇರುವ ಸ್ಥಳದಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ಬೀಡಿ, ಸಿಗರೇಟ್ ಮತ್ತು ಗುಟ್ಕಾದಂತಹ ವಸ್ತುಗಳನ್ನು ಮಾರಾಟ ಮಾಡಬಾರದು ಎಂದು ಸರ್ಕಾರ ಕಾನೂನು ಮಾಡಿದೆ. ಆದರೆ ಸೇದಿ ಬಿಸಾಕಿರುವ ಬೀಡಿ, ಸಿಗರೇಟ್, ಉಪಯೋಗಿಸಿ ಎಸೆದಿರುವ ಗುಟ್ಕಾದ ಪ್ಲಾಸ್ಟಿಕ್ ಕವರ್‍ಗಳನ್ನು ತುಳಿದುಕೊಂಡೆ ನಾವು ಪ್ರತಿನಿತ್ಯ ಶಾಲೆಯ ಒಳಕ್ಕೆ ಬರಬೇಕಾಗಿದೆ ನಿಯಂತ್ರಣ ಸಾಧ್ಯವಿಲ್ಲವೇ ಮುಂತಾದ ಪ್ರಶ್ನೆಗಳ ಮೂಲಕ ತೋವಿನಕೆರೆ ಸರ್ಕಾರಿ ಶಾಲಾ ಮಕ್ಕಳು ಶಾಲಾ ಆವರಣದಲ್ಲಿ ಇತ್ತೀಚೆÀಗೆ ಏರ್ಪಡಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಹಾಜರಿದ್ದ ಅಧಿಕಾರಿಗಳ ಮುಂದೆ ಸಮಸ್ಯೆಗಳ ಮಹಾಪೂರವನ್ನು ಬಿಚ್ಚಿಟರು.
ಕಲ್ಲು ಪುಡಿ ತುಂಬಿಕೊಂಡು ಪ್ರತಿನಿತ್ಯ ಓಡಾಡುವ ಲಾರಿಗಳಿಂದ ರಸ್ತೆಯ ಮೇಲಿನ ಧೂಳು ಎದ್ದು ವಿವಿಧ ರೀತಿಯ ಕಾಯಿಲೆಗಳಿಗೆ ಒಳಗಾಗುವಂತೆ ಆಗಿದೆ. ಇದಕ್ಕೆ ಪರಿಹಾರ ಏನು? ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ನೀಡುತ್ತಿರುವ ಸೌಲಭ್ಯಗಳಲ್ಲಿ ತಾರತಮ್ಯ ಏಕೆ ಎಂದು ವಿದ್ಯಾರ್ಥಿನಿಯು ಉದಾಹರಣೆ ಸಮೇತ ಕೇಳಿದ ಪ್ರಶ್ನೆಗೆ ವೇದಿಕೆಯ ಮೇಲೆ ಕುಳಿತಿದ್ಧ ಗಣ್ಯರು ಒಂದು ಕ್ಷಣ ಸ್ಥಬ್ದರಾದರು. ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಕೊಡುತ್ತಾರೆ, ಖಾಸಗಿ ಶಾಲಾ ಮಕ್ಕಳಿಗೆ ಕೊಡುವುದಿಲ್ಲ ಏಕೆ ? ಹಳ್ಳಿಯಿಂದ ಬರುವ ನಾವು ಹೆಣ್ಣು ಮಕ್ಕಳು ಶಾಲೆಗಳಿಗೆ ನಡೆದುಕೊಂಡು ಬರುತ್ತಿದ್ದೇವೆ. ಖಾಸಗಿ ಶಾಲೆಗಳಂತೆ ನಮಗೂ ಶಾಲಾ ವಾಹನ ಬೇಕು ಎಂಬ ಹಲವು ಹತ್ತು ಸಮಸ್ಯೆಗಳನ್ನು ಮಕ್ಕಳು ಗಣ್ಯರ ಮುಂದಿಟ್ಟರು.
ಮಕ್ಕಳ ಸಭೆಯನ್ನು ಉದ್ಘಾಟಿಸಿದ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಅಧಿಕಾರಿ ವಾಸಂತಿ ಉಪ್ಪಾರ ಮಾತನಾಡಿ, ವಾರ್ಡ ಸಭೆಗಳ ನಡೆಸಿ ಜನರಿಗೆ ಸೌಲಭ್ಯಗಳನ್ನು ನೀಡುವ ಗ್ರಾಮ ಪಂಚಾಯ್ತಿಗಳು ಪ್ರತಿ ವರ್ಷ ನವಂಬರ್ ತಿಂಗಳಲ್ಲಿ ಮಕ್ಕಳ ಗ್ರಾಮ ಸಭೆಯನ್ನು ನಡೆಸಬೇಕು. ಇದರಿಂದ ಮಕ್ಕಳಿಗೆ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುತ್ತದೆ. ಗ್ರಾಮ ಪಂಚಾಯ್ತಿಗಳು ಇದರ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲವೆಂದು ವಿಷಾದ ವ್ಯಕ್ತ ಪಡಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಿದ್ಧಗಂಗಮ್ಮ, ಉಪಾದ್ಯಕ್ಷ ಕೆಂಪಣ್ಣ, ಸದಸ್ಯರುಗಳಾದ ರಾಮಚಂದ್ರಪ್ಪ, ಟಿ.ಎಸ್.ಹನುಮಂತರಾಜು, ಸಿಎಂಸಿಎ ಸಂಸ್ಥೆಯ ಜನಾರ್ಧನ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ವಿದ್ಯಾರ್ಥಿಗಳ ಜೊತೆ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ