ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಕೊಡಿಸಿ

ದಾವಣಗೆರೆ:

  ಮಕ್ಕಳಿಗೆ ವೈದ್ಯಕೀಯ, ಎಂಜೀನಿಯರಿಂಗ್ ಶಿಕ್ಷಣ ಕೊಡಿಸುವುದಕ್ಕಿಂತ ಸ್ಪರ್ಧಾತ್ಮಕ ಪರೀಕ್ಷೆ ಕೊಡಿಸುವತ್ತ ಪೋಷಕರು ಗಮನ ಹರಿಸಬೇಕೆಂದು ಹಿರಿಯ ಸಾಹಿತಿ ಡಾ| ನಾ.ಸೋಮೇಶ್ವರ್ ಕರೆ ನೀಡಿದರು.

    ಇಲ್ಲಿನ ರೇಣುಕಾಮಂದಿರದಲ್ಲಿ ಶನಿವಾರ ಕಲಾಕುಂಚ ಸಾಂಸ್ಕತಿಕ ಸಂಸ್ಥೆ ವತಿಯಿಂದ ಎಸ್ಸೆಸ್ಸೆಲ್ಸಿಯ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 120ಕ್ಕೂ ಹೆಚ್ಚು ಅಂಕ ಪಡೆದ ಮಕ್ಕಳಿಗಾಗಿ ಏರ್ಪಡಿಸಿದ್ದ ಕನ್ನಡ ಕುವರ, ಕುವರಿ, ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

    ಎಲ್ಲಾ ಪೋಷಕರು ಸಾಮಾನ್ಯವಾಗಿ ಮಕ್ಕಳಿಗೆ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಶಿಕ್ಷಣ ಕೊಡಿಸುವ ಮನೋಭಾವ ಹೊಂದಿದ್ದಾರೆ. ಇದು ಒಳ್ಳೆಯದಲ್ಲ, ಏಕೆಂದರೆ ವೈದ್ಯಕೀಯ ಶಿಕ್ಷಣವು ಕ್ಲಿಷ್ಟಕರ ಪದವಿಯಾಗಿದ್ದು, ವೈದ್ಯಕೀಯ ಶಿಕ್ಷಣವನ್ನು ಅಧ್ಯಯನ ಮಾಡುವ ಯೋಗ್ಯತೆ, ಅರ್ಹತೆ ಇದೆಯೆ ಎಂಬುದನ್ನು ಮೊದಲು ಗಮನಿಸಬೇಕು. ಅಲ್ಲದೇ, ಪ್ರತಿವರ್ಷ ದೇಶದಲ್ಲಿ ಸುಮಾರು 16 ಲಕ್ಷ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದು, ಈ ಪೈಕಿ ಕೇವಲ ಒಂದು ಲಕ್ಷ ಜನರಿಗೆ ಮಾತ್ರ ಉದ್ಯೋಗಾವಕಾಶ ದೊರೆಯುತ್ತಿದ್ದು, ಇನ್ನೂ 15 ಲಕ್ಷ ಜನ ಪದವೀಧರರು ನಿರುದ್ಯೋಗಿಗಳಾಗಿಯೇ ಉಳಿಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

    ಎಂಜಿನಿಯರಿಂಗ್ ವಿಷಯದಲ್ಲಿ ವಿಪುಲ ಅವಕಾಶಗಳಿವೆ. ಆದರೆ, ಎಂಜಿನಿಯರಿಂಗ್ ವೃತ್ತಿಗೆ ಬೇಕಾದ ಕೌಶಲವನ್ನು ವಿದ್ಯಾರ್ಥಿಗಳು ಪಡೆಯದೇ ಉರು ಹೊಡೆದು ಪಾಸಾಗಿರುವವರ ಸಂಖ್ಯೆಯೇ ಹೆಚ್ಚಿದೆ. ಹೀಗಾಗಿ ಉದ್ಯೋಗಾವಕಾಶಗಳು ಸಿಗುತ್ತಿಲ್ಲ. ಆದ್ದರಿಂದ ಮಕ್ಕಳನ್ನು ಪೋಷಕರು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣಕ್ಕೆ ಮಾತ್ರ ಸೀಮಿತ ಮಾಡದೇ, ಸ್ಪರ್ಧಾತ್ಮಕ ಪರೀಕ್ಷೆಯನ್ನು ಕೊಡಿಸುವ ಮೂಲಕ ಉನ್ನತ ಅಧಿಕಾರಿಗಳನ್ನಾಗಿ ರೂಪಿಸಬೇಕೆಂದು ಸಲಹೆ ನೀಡಿದರು.

     ಕರ್ನಾಟಕದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವುದರಲ್ಲಿ ಬಹಳಷ್ಟು ಹಿಂದೆ ಬಿದ್ದಿದ್ದಾರೆ. ಆದರೆ, ಗೂಂಡಾ ರಾಜ್ಯ ಎಂದೇ ಕರೆಯಲ್ಪಡುವ ಬಿಹಾರ್ ರಾಜ್ಯದವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒತ್ತು ನೀಡಿ ಉತ್ತಮ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ. ನಾವು ನಮ್ಮ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೊಡಿಸದೇ ಹೋದರೆ, ಇನ್ನೂ ಕೆಲವೇ ವರ್ಷಗಳಲ್ಲಿ ಇಡೀ ಕರ್ನಾಟಕವನ್ನು ಬಿಹಾರಿಗಳೇ ಆಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸೂಚ್ಯವಾಗಿ ನುಡಿದರು.

     ದೇಶದ ಬುದ್ಧಿವಂತರು ಇರುವ ಐದು ರಾಜ್ಯಗಳ ಪೈಕಿ ಕರ್ನಾಟಕವು ಸಹ ಒಂದಾಗಿದೆ. ಹೀಗಾಗಿ ನಮ್ಮ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಶಕ್ತಿ ಇದ್ದೇ ಇರುತ್ತದೆ. ಇದಕ್ಕಾಗಿ ಹೆಚ್ಚು ಕಷ್ಟ ಪಡಬೇಕಿಲ್ಲ. ಕ್ರಮಬದ್ಧ ಅಧ್ಯಯನದ ಜೊತೆಗೆ ಛಲ ಒಂದಿದ್ದರೇ ಸಾಕು ಎಂದ ಅವರು, ಮಿಲಿಟರಿಯಲ್ಲೂ ಮಕ್ಕಳನ್ನು ಸೇರಿಸುವ ಮೂಲಕ ದೇಶ ಕಾಯುವ ಯೋಧರಿಗೆ ಮಾರ್ಗದರ್ಶನ ಮಾಡುವ ಹಾಗೂ ಯುದ್ಧ ನೀತಿಗಳನ್ನು ರೂಪಿಸುವ ಉನ್ನತ ಅಧಿಕಾರಿಗಳನ್ನು ಮಾಡಬೇಕೆಂದು ಕಿವಿಮಾತು ಹೇಳಿದರು.

   ಪೋಷಕರು ಮಕ್ಕಳನ್ನು ಕೊಲ್ಲಬೇಡಿ ಹಾಗೂ ಅವರ ಬದುಕನ್ನು ಕಿತ್ತುಕೊಳ್ಳಬಾರದು. ಏಕೆಂದರೆ, ಮಕ್ಕಳ ಅಭಿವೃದ್ಧಿಯ ಮೇಲೆಯೇ ದೇಶದ ಪ್ರಗತಿಯೂ ನಿಂತಿದೆ. ಆದ್ದರಿಂದ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ವಾತಾವರಣ ಸೃಷ್ಟಿಸುವ ಜವಾಬ್ದಾರಿ ನಿಮ್ಮಗಳ ಮೇಲಿದೆ ಎಂದರು.

    ಇದೇ ಸಂದರ್ಭದಲ್ಲಿ ಡಾ.ಸಿ.ಆರ್.ಚಂದ್ರಶೇಖರ್ ಅವರ ‘ಸಮಸ್ಯಾತ್ಮಕ ಮಕ್ಕಳ ಆಪ್ತ ಸಮಾಲೋಚನೆ’, ‘ಪರೀಕ್ಷಾ ಸಂಭ್ರಮ’, ‘ಮಾನಸಿಕ ಆರೋಗ್ಯ ನಿಮ್ಮ ಮಕ್ಕಳು ನಿಮ್ಮ ಪ್ರಶ್ನೆಗಳು’ ಹಾಗೂ ಡಾ.ನಾ.ಸೋಮೇಶ್ವರ ಅವರ ‘ಅಡುಗೆಮನೆ ಸೈನ್ಸ್’, ‘ಸ್ವಚ್ಛಮೇವ ಜಯತೆ’ ಕೃತಿಗಳು ಲೋಕಾರ್ಪಣೆ ಗೊಂಡವು.

    ಈ ವೇಳೆ ಕನ್ನಡದಲ್ಲಿ 125ಕ್ಕೆ 123. 122, 121, 120 ಅಂಕ ಪಡೆದ ಮಕ್ಕಳಿಗೆ ಕನ್ನಡ, ಕುವರ, ಕನ್ನಡ ಕುವರಿ ಜಿಲ್ಲಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಯಕ್ಷರಂಗ ಅಧ್ಯಕ್ಷ ಮಲ್ಲಾಡಿ ಪ್ರಭಾಕರಶೆಟ್ಟಿ, ಪ್ರಕಾಶಕ ಎಸ್.ಎಸ್.ಹಿರೇಮಠ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ, ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ಜಿ.ವಿ.ಲೋಕೇಶ್, ವಿಜಯಕುಮಾರ್ ಶೆಟ್ಟಿ, ಅರವಿಂದ್, ಸೌಜನ್ಯ, ಹೇಮಾ ಶಾಂತಪ್ಪ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link