ಮಕ್ಕಳು ಆಸಕ್ತಿ ವಿಷಯ ಕಲಿಯಲು ಬೇಸಿಗೆ ಶಿಬಿರ ಸಹಕಾರಿ-ಸಿಇಓ

ತುಮಕೂರು

        ಮಕ್ಕಳಲ್ಲಿನ ಪ್ರತಿಭೆ ಮತ್ತು ಅವರ ಆಸಕ್ತಿಯ ವಿಷಯಗಳ ಬಗ್ಗೆ ಪೋಷಕರು ಮತ್ತು ಶಿಕ್ಷಕರು ತಿಳಿದುಕೊಳ್ಳಲು ಬೇಸಿಗೆ ಶಿಬಿರ ಒಂದು ಒಳ್ಳೆಯ ವೇದಿಕೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಶ್ರೀಮತಿ ಶುಭಾ ಕಲ್ಯಾಣ ಅಭಿಪ್ರಾಯಪಟ್ಟಿದ್ದಾರೆ.

      ನಗರದ ಬಾಲಭವನದಲ್ಲಿ ಬಾಲಭವನ ಸೊಸೈಟಿ ಬೆಂಗಳೂರು,ಜಿಲ್ಲಾ ಬಾಲಭವನ ಸಂಘ(ರಿ) ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಆಯೋಜಿಸಿದ್ದ 2019ನೇ ಸಾಲಿನ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾ ಡುತಿದ್ದ ಅವರು,ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳಿಕೆಗೆ ಹೆಚ್ಚು ಒತ್ತು ನೀಡುವುದರಿಂದ ಎಷ್ಟೋ ಸಂದರ್ಭಗಳಲ್ಲಿ ಮಕ್ಕಳ ಆಸಕ್ತಿ ಯಾವ ಕಡೆಗಿದೆ ಎಂದು ತಿಳಿದುಕೊಳ್ಳುವುದು ಕಷ್ಟದ ಕೆಲಸವಾಗಿರುತ್ತದೆ.ಕೆಲವೊಂದು ಸಂದರ್ಭದಲ್ಲಿ ಇಷ್ಟವಿಲ್ಲದ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಲಾಗದೆ,ಮಕ್ಕಳು ಬೌದ್ದಿಕವಾಗಿ ಕುಂಠಿತವಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇಂತಹ ಶಿಬಿರಗಳು ಮಕ್ಕಳ ಆಸಕ್ತಿಗೆ, ಅವರ ಪ್ರತಿಭೆಯನ್ನು ಆಧರಿಸಿ,ಚಟುವಟಿಕೆಗಳು ನಡೆಯುವುದರಿಂದ ಮಕ್ಕಳಿಗೂ ಸಹ ತಮ್ಮ ಆಸಕ್ತಿಯ ಕ್ಷೇತ್ರಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಮೂಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

       ಇಂದಿನ ತಂತ್ರಜ್ಞಾನದ ಯುಗದಲ್ಲಿ ಮಕ್ಕಳು ವಾಸ್ತವ ಜಗತ್ತಿಗಿಂತ ಕಲ್ಪನಾ ಲೋಕದಲ್ಲಿಯೇ ಹೆಚ್ಚು ಕಾಲ ಕಳೆಯುತ್ತಾರೆ. ವಿಡಿಯೋ ಗೇಮ್, ವಾಟ್ಸಫ್,ಫೇಸ್‍ಬುಕ್‍ನಂತಹ ಅಧುನಿಕ ಮಾಧ್ಯಮಗಳ ಸೆಳೆತಕ್ಕೆ ಒಳಗಾಗಿ ನಿಜವಾದ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ನೊಬ್ಬರ ಜೊತೆ ಕಲೆತು ಆಟವಾಡುವುದನ್ನೇ ಮೆರೆಯುತ್ತಿದ್ದು,ಮಕ್ಕಳು ಕಳೆದುಕೊಳ್ಳುತ್ತಿರುವ ಬಾಲ್ಯವನ್ನು ಮರಳಿ ಪಡೆಯಲು ಇಂತಹ ಬೇಸಿಗೆ ಶಿಬಿರಗಳು ಸಹಕಾರಿಯಾಗುತ್ತವೆ. ಮುಂದಿನ 15 ದಿನಗಳ ಕಾಲ ಮಕ್ಕಳಿಗೆ ಯಾವುದೇ ತೊಂದರೆಯಾಗದ ರೀತಿ, ಅವರ ಆಸಕ್ತಿಯ ವಿಷಯಗಳನ್ನು ಕಲಿಸಲು ಬಾಲಭವನ ಸಮಿತಿ ಕ್ರಮ ಕೈಗೊಳ್ಳಬೇಕು, ಹಾಗೆಯೇ ಮಕ್ಕಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಿಇಓ ಶ್ರೀಮತಿ ಶುಭಾ ಕಲ್ಯಾಣ ಸೂಚನೆ ನೀಡಿದರು.

       ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ದೇವರಾಜಯ್ಯ ಮಾತನಾಡಿ,ಈ ಹಿಂದಿನ ತಲೆಮಾರಿನ ಜನ ಬಹುದಿನಗಳ ಕಾಲ ಆರೋಗ್ಯದಿಂದ ಇರಲು,ರಜಾ ದಿನಗಳಲ್ಲಿ ನಡೆಯುತ್ತಿದ್ದ ಆಟೋಟಗಳು.ನಮ್ಮ ಕಾಲದಲ್ಲಿ ಬೇಸಿಗೆ ರಜೆ ಬಂತೆಂದರೆ ಎಲ್ಲಿಲ್ಲದ ಖುಷಿ,ಮರಕೋತಿ,ಚಿಣ್ಣಿ, ದಾಂಡು, ಲಗೋರಿ,ಗೋಲಿ,ಗಜ್ಜಗ,ಈಜು ಮುಂತಾದ ಆಟಗಳಲ್ಲಿ ಹೆಚ್ಚು ಪಾಲ್ಗೊಳ್ಳುತಿದ್ದ ಪರಿಣಾಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ,ಬಹುಕಾಲ ರೋಗಮುಕ್ತರಾಗಿ ಬದುಕಲು ಸಾಧ್ಯ ವಾಗಿದೆ.ಆದರೆ ಇಂದು ಮೊಬೈಲ್ ಮತ್ತು ಕಂಪ್ಯೂಟರ್‍ಗಳು ಮಕ್ಕಳ ಬಾಲ್ಯವನ್ನು ಕಸಿದುಕೊಂಡಿವೆ.ಓದು,ಬರಹ, ಅಂಕಗಳಿಕೆಗೆ ಜೊತು ಬಿದ್ದು,ಇನ್ನೊಬ್ಬರೊಂದಿಗೆ ಮಾತನಾಡಲು ಕೀಳಿರಿಮೆ ಪಡುವಂತಾಗಿದೆ.ಮಕ್ಕಳಲ್ಲಿನ ಕೀಳಿರಿಮೆ ಹೋಗಬೇಕೆಂದರೆ ಇಂತಹ ಶಿಬಿರಗಳಲ್ಲಿ ಅವರು ಮುಕ್ತವಾಗಿ ಭಾಗವಹಿಸುವಂತಾಗಬೇಕು ಎಂದರು.

      ಇಂದು ಸರಕಾರ ಶಾಲೆಗಳಾದ ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ಮಕ್ಕಳು ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ಶೇ99ರಷ್ಟು ಫಲಿತಾಂಶ ಪಡೆದಿವೆ.ದೊಡ್ಡ ಜಾಹೀರಾತು ನೀಡುವ ಸಂಸ್ಥೆಗಳ ಫಲಿತಾಂಶ ಶೇ90 ದಾಟಿಲ್ಲ. ಸರಕಾರಿ ಸಂಸ್ಥೆಗಳ ಬಲಪಡಿಸುವ ನಿಟ್ಟಿನಲ್ಲಿ ಇದೊಂದು ಒಳ್ಳೆಯ ಬೆಳವಣಿಗೆ ಎಂದು ದೇವರಾಜಯ್ಯ ನುಡಿದರು.

       ಪತ್ರಕರ್ತ ಉಗಮ ಶ್ರೀನಿವಾಸ್ ಮಾತನಾಡಿ,ತುಮಕೂರು ಜಿಲ್ಲೆ ರಂಗಭೂಮಿಯಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿದೆ.ನೂರಾರು ಜನರು ನೀನಾಸಂ ನಂತಹ ರಂಗಶಾಲೆಗಳಲ್ಲಿ ತರಬೇತಿ ಪಡೆದವರಿದ್ದಾರೆ.ಅವರುಗಳ ಸಹಕಾರ ಪಡೆದು,ಇಂತಹ ಬೇಸಿಗೆ ಶಿಬಿರಗಳಲ್ಲಿ ಮಕ್ಕಳಲ್ಲಿ ರಂಗಾಸಕ್ತಿ ಬೆಳೆಸುವ,ಮಕ್ಕಳಿಂದ ನಾಟಕಗಳ ಪ್ರದರ್ಶನ ಏರ್ಪಡಿಸು ವಂತಹ ಪೂರಕ ವಾತಾವರಣ ಸೃಷ್ಟಿಯಾಗಬೇಕು.ಮೈಸೂರಿನ ರಂಗಾಯಣದ ರೀತಿ, ಮತ್ತೊಂದು ಸಾಂಸ್ಕøತಿಕ ಕೇಂದ್ರವಾಗಿ ಈ ಬಾಲಭವನ ಬೆಳೆಯ ಬೇಕೆಂಬ ಆಶಯ ವ್ಯಕ್ತಪಡಿಸಿದರು.

       ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನಟರಾಜು ಮಾತನಾಡಿ,ಮುಂದಿನ 15 ದಿನಗಳ ನಡೆಯುವ ಈ ಬೇಸಿಗೆ ಶಿಬಿರದಲ್ಲಿ ಮಕ್ಕಳು ನಿರಂತರವಾಗಿ ಭಾಗವಹಿಸುವಂತಾಗ ಬೇಕು.ಸರಿಯಾದ ಸಮಯಕ್ಕೆ ತಮ್ಮ ಮಕ್ಕಳನ್ನು ಶಿಬಿರಕ್ಕೆ ಕರೆತರುವ ಮತ್ತು ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ಪೋಷಕರು ನಿರ್ವಹಿಸುವಂತೆ ಸಲಹೆ ನೀಡಿದರು.

       ಮಕ್ಕಳ ಬೇಸಿಗೆ ಶಿಬಿರದ ಬಗ್ಗೆ ಮಾತನಾಡಿದ ಬಾಲಭವನ ಸಂಘದ ವ್ಯವಸ್ಥಾಪಕ ಬಾಲಕೃಷ್ಣ ಎನ್.ಎಸ್,, ತುಮಕೂರು ಬಾಲಭವನ ಸುಮಾರು 3 ಎಕರೆ ಜಾಗವನ್ನು ಹೊಂದಿದ್ದು, ಸುಮಾರು 1 ಎಕರೆಯಲ್ಲಿ ಕಟ್ಟಡವಿದೆ.ಉಳಿದ ಜಾಗದಲ್ಲಿ ಗಿಡ ಮರಗಳನ್ನು ನಡೆಸಲಾಗಿದೆ.

        ಬಾಲಭವನ ಸಂಘ ವರ್ಷವಿಡಿ, ಮಕ್ಕಳಿಗಾಗಿ ವಾರಾಂತ್ಯದ ಬೋಧನೆ, ಎಸ್.ಎಸ್.ಎಲ್.ಸಿ. ಮಕ್ಕಳಿಗೆ ವಿಜ್ಞಾನ, ಗಣಿತ ಕಾರ್ಯಾಗಾರ ಇನ್ನಿತರ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ.ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ವಿಜ್ಞಾನ ವಿಷಯಗಳ ಬೋಧನೆ,ಜೊತೆಗೆ ಕರಾಟೆ, ಯೋಗ,ಚಿತ್ರಕಲೆ, ನೃತ್ಯ, ಕರಕುಶಲತೆ, ದೇಶಿಯ ಕ್ರೀಡೆಗಳ ಪರಿಚಯ ಮಾಡಿಸಲಾಗುವುದು .ಅಲ್ಲದೆ 9-16 ವರ್ಷದ ಮಕ್ಕಳಿಗೆ ಶಿಬಿರದ ಕೊನೆಯ ದಿನ ಪ್ರಕೃತಿ ವೀಕ್ಷಣೆಗಾಗಿ ಟ್ರಕ್ಕಿಂಗ್ ಕರೆದುಕೊಂಡು ಹೋಗಲಾಗುವುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಡಿಹೆಚ್‍ಓ ಡಾ.ಚಂದ್ರಕಲಾ, ಶ್ರೀಮತಿ ಅಂಬಿಕಾ,ಮಮತ ಮುಂತಾದವರು ಹಾಜರಿದ್ದರು. ಮಕ್ಕಳ ಕಲಿಕೆಗೆ ಅನುಕೂಲವಾಗುವ ವಿವಿಧ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು

Recent Articles

spot_img

Related Stories

Share via
Copy link