ಮಕ್ಕಳು ದೇಶದ ಆಸ್ತಿ: ಬಾದಾಮಿಕರ್

ತುಮಕೂರು

       ಮಕ್ಕಳು ದೇಶದ ಆಸ್ತಿ ಅವರನ್ನು ಶಾಲೆಗೆ ಕಳುಹಿಸಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಮಾಡುವುದು ಎಲ್ಲರ ಜವಾಬ್ದಾರಿ ಹಾಗೂ ಕರ್ತವ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ್ ತಿಳಿಸಿದರು.

     ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಹಾಗೂ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿಂದು ಆಯೋಜಿಸಲಾಗಿದ್ದ ವಿಶ್ವ ಬಾಲ ಕಾರ್ಮಿಕರ ಪದ್ದತಿ ವಿರೋಧಿ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

       ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ದತಿ ನಿಷೇಧ ಕಾಯ್ದೆಯಡಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಜಿಲ್ಲೆಯಲ್ಲಿ ಯಾರೂ ಬಾಲ ಕಾರ್ಮಿಕರು ಇಲ್ಲ ಅಂತ ಹೇಳಲು ಸಾಧ್ಯವಿಲ್ಲ, ಎಲ್ಲಾ ಉದ್ದಿಮೆಗಳಲ್ಲೂ ಬಾಲ ಕಾರ್ಮಿಕರು ಇದ್ದಾರೆ. ಹೋಟೆಲ್, ಬಸ್-ರೈಲ್ವೆ ನಿಲ್ದಾಣಗಳಲ್ಲಿ, ವ್ಯವಸಾಯ ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಬಾಲ ಕಾರ್ಮಿಕರು ಕಂಡು ಬರುತ್ತಾರೆ.

       ಮಕ್ಕಳು ಕೆಲಸಕ್ಕೆ ತೊಡಗಿಕೊಳ್ಳಲು ಅನೇಕ ಕಾರಣಗಳಿವೆ ಅವು ಬಡತನ, ಅನಕ್ಷರತೆ, ಅಜ್ಞಾನ, ತಿಳುವಳಿಕೆ ಇಲ್ಲದೆ ಇರುವುದು ಬಾಲ ಕಾರ್ಮಿಕ ಪದ್ದತಿಗೆ ಮುಖ್ಯ ಕಾರಣವಾಗಿದೆ. ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡಲು ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿಕೊಂಡಿವೆ.

        ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿವೆ. ಮಕ್ಕಳನ್ನು ಶಾಲೆಗೆ ಸೇರಿಸಲು ಸರ್ಕಾರಗಳು ಕಡ್ಡಾಯ ಶಿಕ್ಷಣ ಕಾಯ್ದೆ, ಬಿಸಿಯೂಟ ಕಾರ್ಯಕ್ರಮ, ರೇಡಿಯೋ ಕಾರ್ಯಕ್ರಮ ಮುಂತಾದ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಬಡತನ ನಿರ್ಮೂಲನೆಯಿಂದ ಬಾಲ ಕಾರ್ಮಿಕ ಪದ್ದತಿ ಕಡಿಯಾಗುತ್ತದೆ. ಸಮಾಜದ ಎಲ್ಲ ನಾಗರಿಕರು ಕೈ ಜೋಡಿಸಿದರೆ ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ ಮಾಡಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.

       ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಅವರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಸರ್ಕಾರಗಳು ಶಿಕ್ಷಣದಲ್ಲಿ ನಲಿ-ಕಲಿ, ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್ ವಿತರಣೆ ಈ ಯೋಜನೆಗಳನ್ನು ಜಾರಿಗೆ ತಂದಿವೆ. ಬಾಲ ಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡುವುದೇ ಸರ್ಕಾರದ ಉದ್ದೇಶವಾಗಿದೆ.

       ಮಕ್ಕಳು ಕೂಲಿ ಮಾಡುವುದನ್ನು ಬಿಟ್ಟು ಶಾಲೆಗೆ ಹೋಗಿ ವಿದ್ಯಾರ್ಥಿಯಾದರೆ ಮುಂದಿನ ದಿನಗಳಲ್ಲಿ ವಿಜ್ಞಾನಿಯಾಗಬಹುದು. ಹಣ್ಣು ಮಾರುವುದು, ಹೋಟೆಲ್‍ಗಳಲ್ಲಿ ಕೆಲಸ ಮಾಡುವ 14 ವರ್ಷದ ಒಳಗಿನ ಮಕ್ಕಳನ್ನು ಅವರ ಪೋಷಕರ ಗಮನಕ್ಕೆ ತಂದು ಅವರಿಗೆ ಶಿಕ್ಷಣದ ಬಗ್ಗೆ ತಿಳುವಳಿಕೆ ಹೇಳಬೇಕು ಎಂದರು.

      ಮಕ್ಕಳಿಗೆ ಅವರದೆ ಆದ ಜೀವನ ಇರುತ್ತದೆ. ಮಕ್ಕಳು ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ಮಾಡಬಾರದು, ಮಕ್ಕಳು ಕನಸನ್ನು ಸಕಾರಗೊಳಿಸುವ ರೀತಿಯಲ್ಲಿ ಕನಸು ಕಾಣಬೇಕು. ಮಕ್ಕಳನ್ನು ವಿದ್ಯಾವಂತರಾಗಿ ಮಾಡಲು ಸರ್ಕಾರಗಳು, ಪೋಷಕರು, ನಾಗರಿಕರು ಶ್ರಮಿಸಬೇಕಾಗಿದ್ದು, ಅವರಿಗೆ ಬೇಕಾದ ಸವಲತ್ತುಗಳನ್ನು ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.

       ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಂ.ಆರ್. ಕಾಮಾಕ್ಷಿ ಮಾತನಾಡಿ, ಬಾಲ ಕಾರ್ಮಿಕರ ಪದ್ದತಿ ತಡೆದು ಮಕ್ಕಳಿಗೆ ಶಿಕ್ಷಣ ನೀಡುವುದು ಸಂವಿಧಾನದ ಹಕ್ಕು ಹಾಗೂ ಸರ್ಕಾರ, ಪೋಷಕರ ಜವಾಬ್ದಾರಿ. ಮಕ್ಕಳನ್ನು ಶಾಲೆಗೆ ಸೇರಿಸುವುದು ಶಿಕ್ಷಣ ಇಲಾಖೆ ಮೇಲೆ ಹೆಚ್ಚಿನ ಜವಬ್ದಾರಿಯಾಗಿದೆ.

      ಜಿಲ್ಲೆಯಲ್ಲಿ 248 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. ಮಕ್ಕಳ ತಂದೆ ತಾಯಂದಿರು ಕೂಲಿ ಮಾಡಲು ಬೇರೆ ಸ್ಥಳಗಳಿಗೆ ಹೋಗಿ ಅಲ್ಲೇ ವಾಸವಾಗಿದ್ದರೆ ಅವರ ಮಕ್ಕಳಿಗೆ ಹತ್ತಿರದ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಮಾಡಿಸಬಹುದು ಹಾಗೂ ಶಿಕ್ಷಕರು ಮಗುವಿನ ಯಾವುದೇ ದಾಖಲೆಗಳನ್ನು ಕೇಳಬಾರದು. ಆ ಮಗು ಯಾವ ತರಗತಿಯಲ್ಲಿ ಶಾಲೆ ಬಿಟ್ಟಿರುತ್ತದೆಯೋ ಅಲ್ಲಿಂದಲೇ ತರಗತಿ ಪ್ರಾರಂಭಿಸಬಹುದು ಎಂದರು.

      ಉಸಿರಾಟಕ್ಕೆ ಆಮ್ಲಜನಕ ಎಷ್ಟು ಮುಖ್ಯವೋ ಒಂದು ಮಗುವಿಗೆ ಶಿಕ್ಷಣ ಅಷ್ಟೇ ಮುಖ್ಯ. ಯಾವುದಾದರು ಸ್ಥಳದಲ್ಲಿ ಬಾಲ ಕಾರ್ಮಿಕರು ಕಂಡು ಬಂದರೆ ಮಕ್ಕಳ ಪೋಷಕರಿಗೆ ತಿಳುವಳಿಕೆ ಹೇಳಿ ಪೊಲೀಸ್ ಹಾಗೂ ಶಿಕ್ಷಣ ಇಲಾಖೆಗೆ ಮಾಹಿತಿ ತಿಳಿಸಿದರು. ಇದು ಎಲ್ಲರ ಜವಬ್ದಾರಿ ಎಂದು ಅವರು ತಿಳಿಸಿದ್ದರು.

      ಕಾರ್ಯಕ್ರಮದಲ್ಲಿ ವಕೀಲ ಎಸ್. ರಮೇಶ್ ಉಪನ್ಯಾಸ ನೀಡುತ್ತಾ, ಮಕ್ಕಳಿಗೆ ಪ್ರೀತಿ, ರಕ್ಷಣೆ ಶಿಕ್ಷಣ ನೀಡಿ ಅಗತ್ಯತೆಗಳನ್ನು ಈಡೇರಿಸುವುದು ಸರ್ಕಾರ ಹಾಗೂ ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ದುಡಿಮೆಯಲ್ಲಿ ತೊಡಗಿರುವ ಈ ಮಕ್ಕಳು ತಮ್ಮ ಬಾಲ್ಯಾವಸ್ಥೆ ಮರೆತು ದೈಹಿಕವಾಗಿ, ಮಾನಸಿಕವಾಗಿ ನೊಂದು ಮಾಲೀಕರ ಕಿರುಕುಳ ದೌರ್ಜನ್ಯ, ಲೈಂಗಿಕ ಕಿರುಕುಳದಿಂದ ಹಿಂಸೆ ಅನುಭವಿಸುತ್ತಿದ್ದಾರೆ.

     14 ವರ್ಷದೊಳಗಿನ ಯಾವುದೇ ಮಕ್ಕಳಿಂದ ದುಡಿಸಿಕೊಳ್ಳುತ್ತಿರುವುದು ಕಾನೂನಿನ ಪ್ರಕಾರ ಅಪರಾಧ. ವಿದ್ಯೆಯಿಂದ ವಂಚಿತರಾಗಿ ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಮಗುವನ್ನು ರಕ್ಷಿಸೋಣ ಅವರ ಏಳಿಗೆಗಾಗಿ ಶ್ರಮಿಸೋಣ ಎಂದು ಅವರು ಉಪನ್ಯಾಸ ನೀಡಿದರು.

     ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಸದಸ್ಯ ಕಾರ್ಯದರ್ಶಿ ಬಿ. ದಶರಥ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್. ನಟರಾಜು, ಕಾರ್ಮಿಕ ಅಧಿಕಾರಿ ಸುಭಾಷ್ ಎಂ. ಆಲದಕಟ್ಟಿ, ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರವಿಕುಮಾರ್, ಡಿ.ವೈ.ಎಸ್.ಪಿ. ತಿಪ್ಪೇಸ್ವಾಮಿ, ಆಶಾ ಕಾರ್ಯಕರ್ತೆಯರು ಹಾಗೂ ನರ್ಸಿಂಗ್ ವಿದ್ಯಾರ್ಥಿನಿಯರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link