ತುಮಕೂರು
ತುಮಕೂರು ನಗರದ ವಿವಿಧೆಡೆ ಶುಕ್ರವಾರ ಸಂಜೆ ಕೆಲ ಕಾಲ ಸುರಿದ ಭಾರಿ ಮಳೆಯಿಂದ ನಗರದ ಅನೇಕ ಬಡಾವಣೆಗಳಲ್ಲಿ ಮಳೆ ನೀರು ರಸ್ತೆಯ ಇಕ್ಕೆಲದ ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ, ರಸ್ತೆಯ ತುಂಬ ಹೊಂಡದಂತೆ ತುಂಬಿಕೊಂಡು ಸಾರ್ವಜನಿಕರು ಫಜೀತಿಗೊಳಗಾದರು.
ನಗರದ ವಿವಿಧ ಬಡಾವಣೆಗಳಲ್ಲಿ ರಸ್ತೆಗಳ ಇಕ್ಕೆಲದಲ್ಲಿ ಮಳೆನೀರಿನ ಚರಂಡಿ (ಕಾಂಕ್ರಿಟ್ ಬಾಕ್ಸ್ ಚರಂಡಿ) ನಿರ್ಮಿಸಲಾಗಿದೆಯಾದರೂ, ಇದರ ನಿರ್ವಹಣೆ ಇಲ್ಲದಿರುವುದು ಈ ರೀತಿಯ ಸಮಸ್ಯೆಗೆ ಕಾರಣವಾಗಿದ್ದು, ಪ್ರತಿ ಮಳೆಗಾಲದಲ್ಲೂ ಈ ಸಮಸ್ಯೆ ಪುನರಾವರ್ತಿತವಾಗುತ್ತಿದೆ.
ಚರಂಡಿಯಲ್ಲಿ ಮಣ್ಣು ಹಾಗೂ ಕಸ ತುಂಬಿರುವುದರಿಂದ ಅನೇಕ ಕಡೆಗಳಲ್ಲಿ ಚರಂಡಿಗೆ ನೀರು ಹೋಗದೆ, ರಸ್ತೆಯಲ್ಲೇ ಹರಿಯಿತು. ಕೆಲವೆಡೆ ಚರಂಡಿಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ನೀರು ಚರಂಡಿಯಲ್ಲಿ ಮುಂದಕ್ಕೆ ಹರಿಯಲಾಗದೆ ಅಲ್ಲೇ ನಿಲ್ಲುವಂತಾಯಿತು. ಕೆಲವೆಡೆ ಚರಂಡಿ ಮೇಲೆ ಸ್ಲಾಬ್ ಜೋಡಿಸಿದ್ದು, ಅವುಗಳನ್ನು ತೆಗೆದು ಸ್ವಚ್ಛಗೊಳಿಸದಿರುವುದರಿಂದಲೂ ಈ ಸಮಸ್ಯೆ ಉದ್ಭವಿಸಿತು.
ನಗರದ ಬಿ.ಎಚ್. ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಇದರ ನಿರ್ವಹಣೆಯು ರಾಷ್ಟ್ರೀಯ ಹೆದ್ದಾರಿ ಇಲಾಖೆಯದ್ದಾಗಿದ್ದರೂ ಇಲ್ಲೂ ಸಹ ಮಳೆ ನೀರಿನ ಚರಂಡಿ ನಿರರ್ಥಕವಾಗಿದ್ದು, ಮಳೆ ಬಂದಾಗ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲೇ ಹರಿಯುವುದನ್ನು ಹಾಗೂ ಕೆಲವೆಡೆ ಸರ್ವಿಸ್ ರಸ್ತೆಯಲ್ಲೇ ನೀರು ಹಳ್ಳದಂತೆ ನಿಲ್ಲುವುದನ್ನು ಜನರು ಉಲ್ಲೇಖಿಸುತ್ತಿದ್ದಾರೆ.
“ಬಾಕ್ಸ್ ಚರಂಡಿ ನಿರ್ಮಾಣ ಮಾಡುವುದೇ ಒಂದು ದಂಧೆಯಂತಾಗಿದೆ. ಇದಕ್ಕಾಗಿ ತುಮಕೂರು ಮಹಾನಗರ ಪಾಲಿಕೆಯು ಕೋಟ್ಯಂತರ ರೂ. ವೆಚ್ಚ ಮಾಡಿದೆ. ಆದರೆ ಎಲ್ಲೂ ಸಹ ಇದು ವೈಜ್ಞಾನಿಕವಾಗಿ ನಿರ್ಮಾಣಗೊಂಡಿಲ್ಲ. ಮಳೆ ಬಂದಾಗ ಮಳೆಯ ನೀರು ಸರಾಗವಾಗಿ ಮುಂದಕ್ಕೆ ಹರಿದು ಹೋಗುವಂತೆ ಸಂಪರ್ಕ ಜಾಲ ಇಲ್ಲವೇ ಇಲ್ಲ. ರಸ್ತೆಯ ಮೇಲೆ ಬಿದ್ದ ಮಳೆ ನೀರು ತಕ್ಷಣವೇ ಅಕ್ಕಪಕ್ಕದ ಚರಂಡಿಗೆ ಹರಿದುಬರುವಂತೆ ವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಿಸಿಲ್ಲ. ಮನಬಂದಂತೆ ನಿರ್ಮಿಸಿ ಬಿಲ್ ಮಾಡಿಕೊಳ್ಳಲಾಗಿದೆ. ನೆಪಕ್ಕಷ್ಟೇ ಚರಂಡಿ ಇರುತ್ತದೆ.
ಆದರೆ ಅದೂ ಸಂಪೂರ್ಣವಾಗಿ ನಿರುಪಯೋಗವಾಗಿರುತ್ತದೆ. ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಮಳೆ ಬಂದಾಗ ಈ ಚರಂಡಿಗಳಲ್ಲಿ ಮಳೆ ನೀರು ಹರಿದು, ಮುಂದಕ್ಕೆ ಹೋಗುತ್ತಿದೆಯೇ ಎಂಬುದನ್ನು ಪರಿಶೀಲನೆ ಮಾಡುವುದೇ ಇಲ್ಲ. ಹೀಗಾಗಿ ಪ್ರತಿ ಬಾರಿ ಮಳೆ ಬಂದಾಗಲೂ ನೀರು ಮನೆಗಳಿಗೆ ನುಗ್ಗಿ ತೊಂದರೆ ಆಗುತ್ತದೆ. ಮಳೆ ನೀರು ರಸ್ತೆಯಲ್ಲೇ ಹೊಂಡದಂತೆ ನಿಂತು ಜನತೆಗೆ ಸಮಸ್ಯೆ ಆಗುತ್ತದೆ” ಎಂಬುದು ಸಾರ್ವಜನಿಕರ ಆರೋಪವಾಗಿದೆ.
“ಮಳೆ ನೀರಿನ ಚರಂಡಿಗಳನ್ನು ವಿಶೇಷ ಮುತುವರ್ಜಿಯಿಂದ ಸ್ವಚ್ಛಗೊಳಿಸಿದ ನಿದರ್ಶನಗಳೇ ಇಲ್ಲ. ಅದೇ ರೀತಿ ದೊಡ್ಡ ಚರಂಡಿಗಳನ್ನು ಸ್ವಚ್ಛಗೊಳಿಸಿದ ಉದಾಹರಣೆಗಳೂ ಕಾಣುತ್ತಿಲ್ಲ. ಈಗಲೇ ಮುನ್ನೆಚ್ಚರಿಕೆ ವಹಿಸದಿದ್ದರೆ, ಭಾರಿ ಮಳೆ ಬಂದಾಗ ಮತ್ತೆ ನೀರು ಮನೆಗೆ ನುಗ್ಗಿ ಸಮಸ್ಯೆ ತಲೆದೋರುತ್ತದೆ. ರಸ್ತೆಗಳಲ್ಲೆಲ್ಲ ನೀರು ನಿಂತು ಸಂಚಾರಕ್ಕೆ ತೊಡಕಾಗುತ್ತದೆ ಹಾಗೂ ರಸ್ತೆಗಳೂ ಹಾಳಾಗುತ್ತವೆ. ಆದ್ದರಿಂದ ಮಹಾನಗರ ಪಾಲಿಕೆಯ ಸದಸ್ಯರುಗಳು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ಸಮರೋಪಾದಿ ಕ್ರಮ ಕೈಗೊಳ್ಳಬೇಕು” ಎಂಬ ಜನಾಗ್ರಹ ಕೇಳಿಬರುತ್ತಿದೆ.
ಪಾಲಿಕೆಗೆ ದೂರುಗಳು
ಶುಕ್ರವಾರ ಸಂಜೆ ತುಮಕೂರು ನಗರದಲ್ಲಿ ಬಿರುಸಿನ ಮಳೆ ಬಂದ ಹಿನ್ನೆಲೆಯಲ್ಲಿ ನಗರದ ವಿವಿದೆಡೆ ರಸ್ತೆ-ಚರಂಡಿಗಳಲ್ಲೇ ನೀರು ನಿಂತು ತೊಂದರೆ ಉಂಟಾದ ಬಗ್ಗೆ ಮಹಾನಗರ ಪಾಲಿಕೆ ಕಚೇರಿಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ.
ದೂರುಗಳ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ನಗರದ ಗುಬ್ಬಿ ಗೇಟ್ ಆಸುಪಾಸು, ಜಿ.ಸಿ.ಆರ್. ಕಾಲೋನಿ, ಸತ್ಯಮಂಗಲ ರಸ್ತೆ, ಎಲ್ಲಾಪುರ ರಸ್ತೆ, ಶಿರಾಗೇಟ್‍ನ ಅರಳಿಮರದ ಪಾಳ್ಯ ಮೊದಲಾದ ಕಡೆಗಳಲ್ಲಿ ಮಹಾನಗರ ಪಾಲಿಕೆಯ ಪರಿಸರ ಇಂಜಿನಿಯರ್‍ಗಳು ಮತ್ತು ಆರೋಗ್ಯ ನಿರೀಕ್ಷಕರು ಸಿಬ್ಬಂದಿ ವರ್ಗದೊಡನೆ ತೆರಳಿ, ಜೆಸಿಬಿ ಯಂತ್ರ ಹಾಗೂ ಸಕ್ಕಿಂಗ್ ಯಂತ್ರ ಇತ್ಯಾದಿ ಬಳಸಿಕೊಂಡು ಮಳೆ ನೀರು ಮುಂದಕ್ಕೆ ಹರಿದುಹೋಗುವಂತೆ ಮಾಡಲು ಕ್ರಮ ಜರುಗಿಸಿದ್ದಾರೆ.
ಪಾಲಿಕೆಯಿಂದ ವಿಶೇಷ ತಂಡ
ಮಳೆಯಿಂದ ಆಗುವ ತೊಂದರೆಗಳನ್ನು ನಿರ್ವಹಿಸಲು ಪಾಲಿಕೆಯಲ್ಲಿ ಆಯುಕ್ತ ಟಿ.ಭೂಪಾಲನ್ ಅವರು “ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ” ರಚಿಸಿದ್ದಾರೆ. ಅದರಲ್ಲಿ 10 ಜನ ಪೌರಕಾರ್ಮಿಕರೊಂದಿಗೆ ಒಂದು ಜೆಸಿಬಿ, ಸಕ್ಕಿಂಗ್ ಯಂತ್ರ ಈ ತಂಡದೊಂದಿಗೆ ಇರಲಿವೆ. ಪಾಲಿಕೆಯ ಕಂಟ್ರೋಲ್ ರೂಂ (ಮೊ: 9449872599 ಅಥವಾ ಸ್ಥಿರ ದೂರವಾಣಿ- 0816-2272200)ಗೆ ಬರುವ ದೂರುಗಳನ್ನು ಈ ತಂಡವು ತುರ್ತಾಗಿ ನಿರ್ವಹಿಸಲಿದೆ ಎಂದು ಮೂಲಗಳು ಹೇಳಿವೆ.
ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಯಂತ್ರಿಸಲೇಬೇಕು
“ಶುಕ್ರವಾರ ಸಂಜೆ ಗಾಳಿಯೊಂದಿಗೆ ಮಳೆ ಬಂತು. ಆಗ ತುಮಕೂರು ನಗರದ ಅನೇಕ ರಸ್ತೆಗಳಲ್ಲಿ ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ತಟ್ಟೆ ಇತ್ಯಾದಿ ಪ್ಲಾಸ್ಟಿಕ್ ತ್ಯಾಜ್ಯಗಳು ಹರಡಿದ್ದುದು ಹಾಗೂ ಚರಂಡಿಗಳಲ್ಲಿ ಕಟ್ಟಿ ನಿಂತಿದ್ದುದು ಕಂಡುಬಂದಿತು. ಇಂತಹ ತ್ಯಾಜ್ಯಗಳಿಂದಲೇ ಚರಂಡಿಗಳು ಕಟ್ಟಿನಿಂತು ನೀರು ಮುಂದಕ್ಕೆ ಹರಿಯಲಾಗದೆ ಸಮಸ್ಯೆ ಉದ್ಭವಿಸುತ್ತಿದೆ. ಆದ್ದರಿಂದ ಯಾವುದೇ ಕಾರ್ಯಕ್ರವಾಗಲಿ, ಜಾತ್ರೆಗಳಾಗಲಿ ಯಾರೂ ಸಹ ಪ್ಲಾಸ್ಟಿಕ್ ಬಳಸಬಾರದು. ಪೇಪರ್ ಸಾಮಗ್ರಿಗಳನ್ನು ಉಪಯೋಗಿಸಿದರೂ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ಡಬ್ಬಿಗೇ ಹಾಕುವಂತೆ ಮಾಡಬೇಕು” ಎಂದು ಪ್ರಜ್ಞಾವಂತ ನಾಗರಿಕರು ಹೇಳುತ್ತಿದ್ದಾರೆ.