ಮಲೆ ನಾಡಿನಲ್ಲಿ ಜೋರಾದ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ

ಶಿವಮೊಗ್ಗ

       ಲೋಕಸಭಾ ಚುನಾವಣೆ ಎರಡನೇ ಹಂತದ ಮತದಾನಕ್ಕೆ ಇನ್ನೆರೆಡು ದಿನಗಳು ಮಾತ್ರ ಬಾಕಿ ಉಳಿದಿರುವ ಹಿನ್ನೆಲೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ರಾಜಕೀಯ ಪಕ್ಷಗಳ ಕಾವು ಪರಸ್ಪರ ಪೋಪೋಟಿ, ರಾಜಕೀಯ ನಾಯಕರ ವಾಕ್ಪ್ರಹಾರ, ಪ್ರಚಾರದ ಪೈಪೋಟಿ ಭರ್ಜರಿಯಾಗಿ ಸಾಗಿದೆ.

       ಒಂದು ಕಡೆ ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸುತ್ತೇನೆಂದು ಸಚಿವ ಡಿ.ಕೆ.ಶಿವಕುಮಾರ್ ಪಣತೊಟ್ಟು ಅಖಾಡ ಪ್ರವೇಶಿಸಿದ್ದರೆ, ಇತ್ತ ಬಿಜೆಪಿ‌ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಬಿಜೆಪಿ ಅಭ್ಯರ್ಥಿ ಬಿ
ವೈ.ರಾಘವೇಂದ್ರ ಪರ ಪ್ರಚಾರ ನಡೆಸಿ ತಿರುಗೇಟು ನೀಡಿದರು.

        ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್ ಹಾಗೂ ಜೆಡಿಎಸ್ ಮಾಜಿ ಶಾಸಕ ಅಪ್ಪಾಜಿಗೌಡರ ನಡುವಿನ ವೈಮನಸನ್ನು ತಿಳಿಗೊಳಿಸಿರುವ ಡಿ.ಕೆ.ಶಿವಕುಮಾರ್ ಸಹ ಇಂದು ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ಪರ ಪ್ರಚಾರ ನಡೆಸಿ ಮತಯಾಚಿಸಿದರು‌. ಮಧು ಅವರನ್ನು ಗೆಲ್ಲಿಸಲು ಇಬ್ಬರೂ ನಾಯಕರು ಒಂದಾಗಿದ್ದನ್ನು ತೋರಿಸುವ ಮೂಲಕ ಎರಡೂ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಲು ಕರೆ ನೀಡಿದರು.
 

        ಜಿಲ್ಲೆಯ ಉಂಬ್ಳೇಬೈಲು ನಲ್ಲಿ ನಡೆದ ಜೆಡಿಎಸ್-ಕಾಂಗ್ರೆಸ್ ಸಮಾವೇಶವನ್ನುದ್ದೇಶಿ‌ ಮಾತನಾಡಿದ ಡಿ.ಕೆ.ಶಿವಕುಮಾರ್,
ಯಡಿಯೂರಪ್ಪ ಅವರು ತಮ್ಮ ಪುತ್ರ ರಾಘವೇಂದ್ರ ಅವರ ನಾಮಪತ್ರ ಸಲ್ಲಿಕೆಗೆ ಹೊರಟಿದಂತಹ ಸಂದರ್ಭದಲ್ಲಿ ಅವರ ಹೆಲಿ ಕಾಫ್ಟರ್ ಹಾರಲೇ ಇಲ್ಲ. ಅದೇ ಗಳಿಗೆ, ಮಧುಗೆ ದೇವರ ಕೃಪೆ ಇದೆ ಎಂಬುದು ಸಾಬೀತು ಪಡಿಸಿತು. ಇದು ಸಚಿವ ಹೆಚ್.ಡಿ.ರೇವಣ್ಣ ಅವರ ಲೆಕ್ಕಾಚಾರ ಅಲ್ಲ.ಇದು ತಮ್ಮ ಲೆಕ್ಕಾಚಾರ ಎಂದರು.

        ಯಡಿಯೂರಪ್ಪ ಅವರು ತಾವು ಮಾಡಿದ ಕೆಲಸ ಹೇಳದೇ ಮೋದಿ ಅವರ ಹೆಸರಿನಲ್ಲಿ ಹೇಳಿ ಮತಕೇಳುತ್ತಿರುವುದಕ್ಕೆ ಇವರಿಗೆ ನಾಚಿಕೆ ಆಗಬೇಕು.ಕೇಂದ್ರದಲ್ಲಿ ಬಿಜೆಪಿ‌ಗೆ ಅಚ್ಚೇ ದಿನ್ ಬಂದಿತೇ ಹೊರತು ದೇಶದ ಜನತೆಗಲ್ಲ. ಇಂಧನ ಬೆಲೆ ಏರಿಕೆ ಆಯಿತು. ದೇಶದಲ್ಲಿ ಹೆಣ್ಣುಮಕ್ಕಳ ರಕ್ಷಣೆಗೆ ಬಿಜೆಪಿ ಬರಲಿಲ್ಲ. ದೇವಾಲಯಕ್ಕೆ 25 ಸಾವಿರ ಕೇಳಿದರೆ ಈಶ್ವರಪ್ಪ ಅವರು ಒಂದು ಲಕ್ಷ ಬರೆದುಕೊಳ್ಳು ಎನ್ನುತ್ತಿದ್ದಾರೆ. ಯಡಿಯೂರಪ್ಪ ಈಶ್ವರಪ್ಪ‌ ಅವರ ನಡುವಿನ ವೈಮನಸು ಇನ್ನೂ‌ ಹಾಗೆಯೇ ಇದೆ.

        ಅವರಿಗೆ ಹೇಗಾದರೂ ಮಾಡಿ ಮಧುಬಂಗಾರಪ್ಪ‌ಅವರೇ ಗೆಲ್ಲಬೇಕು, ರಾಘವೇಂದ್ರ ಸೋಲಬೇಕು ಎಂದು ಬಯಸುತ್ತಿದ್ದಾರೆ ಎಂದರು.

        ಐದು ವರ್ಷ ಅಧಿಕಾರ ಇದ್ದಾಗ ಮೀಸಲಾತಿ ಬಗ್ಗೆ ಮಾತನಾಡದ ಬಿಜೆಪಿ ನಾಯಕರು ಚುನಾವಣೆ ಸಂದರ್ಭ ಬಂದಾಗ ಮಾತ್ರ ಈ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕರು ಎಂದಿಗೂ ಆರ್ಥಿಕ, ಸಾಮಾಜಿಕ ಭದ್ರತೆ ಕೊಡಲು ಸಿದ್ಧ.

         ಯಡಿಯೂರಪ್ಪ ಅವರು ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಸೈನಿಕರ ಹೆಸರಿನಲ್ಲಿ ಮತ‌ಕೇಳುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು

        ಡಬಲ್ ಡಿಜಿಟ್ ನಮ್ಮದು, ಸಿಂಗಲ್ ಡಿಜಿಟ್ ನಿಮ್ಮದು ಬರೆದಿಟ್ಟುಕೊಳ್ಳಿ ಯಡಿಯೂರಪ್ಪ ನವರೇ ಎಂದು‌ ಸವಾಲು ಹಾಕಿದರು.
ಇಡೀ ರಾಜ್ಯ ಸರ್ಕಾರ , ಕುಮಾರಸ್ವಾಮಿ ನೇತೃತ್ವದ ಮಂತ್ರಿ ಮಂಡಲ ಮಧು ಪರವಾಗಿ ನಿಂತಿದೆ. ಈಗಾಗಲೇ ಜಿಲ್ಲೆಯಬಜನರು ರಾಘವೇಂದ್ರ ಅವರಿಗೆ ಒಂದು ಅವಕಾಶ ಕೊಟ್ಟಿದ್ದರೂ ಸಹ ರಾಘವೇಂದ್ರ ಜಿಲ್ಲೆಗೆ ಯಾವುದೇ ಕೊಡುಗೆಯನ್ನಾಗಲೀ ಅಭಿವೃದ್ಧಿ‌ಕೆಲಸಗಳ ನ್ನಾಗಲಿ ಮಾಡಲಿಲ್ಲ.ಈ ಬಾರಿ ಬದಲಾವಣೆ ಅನಿವಾರ್ಯವಾಗಿದೆ. ಹೀಗಾಗಿ ಮಧು ಬಂಗಾರಪ್ಪ ಗೆಲುವು‌ ನಿಶ್ಚಿತ ಎಂದು ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

       ಬಿಜೆಪಿಯ ಅವರ ಸಿನೆಮಾ ಬಂದ್ ಮಾಡಿ, ನಮ್ ಹೊಸ ಸಿನೆಮಾ ಹಾಕಿ. ಆ ಸ್ವಿಚ್ ಆಫ್ ಮಾಡಿ, ಈ ಸ್ವಿಚ್ ಆನ್ ಮಾಡಿ ಎಂದು ಅವರು ಸೂಚ್ಯವಾಗಿ ಹೇಳಿದರು.ಜಿಲ್ಲೆಯ ಭದ್ರಾವತಿಯಲ್ಲಿಂದು ಅಮಿತ್ ಷಾ ರೋಡ್ ಷೋ ನಡೆಸುವ ಮೂಲಕ ಬಿ.ವೈ.ರಾಘವೇಂದ್ರ ಪರ ಮತಯಾಚಿಸಿದರು. ರಂಗಪ್ಪ ವೃತ್ತದಿಂದ ಬಸ್ ನಿಲ್ದಾಣವರೆಗೆ ತೆರೆದ ವಾಹನದಲ್ಲಿ ಬಿಜೆಪಿ ರೋಡ್ ಷೋ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ, ಶಾಸಕ ಕೆ.ಎಸ್. ಈಶ್ವರಪ್ಪ, ಮಾಜಿ ಸಭಾಪತಿಡಿ.ಎಚ್. ಶಂಕರಮೂರ್ತಿ, ಮೇಲ್ಮನೆ ಸದಸ್ಯ ರುದ್ರೇಗೌಡ, ಬಿಜೆಪಿ ಮುಖಂಡ ದತ್ತಾತ್ರಿ ಸೇರಿದಂತೆ ಹಲವು ನಾಯಕರು ಷಾಗೆ ಜೊತೆಯಾದರು.

        ಈ ಸಂದರ್ಭದಲ್ಲಿ ಅಮಿತ್ ಷಾ ಮಾತನಾಡಿ, ಈ ಚುನಾವಣೆ ರಾಘವೇಂದ್ರರನ್ನ ಗೆಲ್ಲಿಸುವ ಚುನಾವಣೆ ಅಲ್ಲ.ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಚುನಾವಣೆ ಇದಾಗಿದೆ. ಪಕ್ಕದ ಶತೃರಾಷ್ಟ್ರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಮೋದಿ ಮತ್ತೊಮ್ಮೆ ಪ್ರಧಾನಿ ಹುದ್ದೆಗೇರಬೇಕಾಗಿದೆ.

        ಆದ್ದರಿಂದ ರಾಘವೇಂದ್ರ ಅವರಿಗೆ ಮತದಾರರು ಮತಚಲಾಯಿಸಬೇಕು ಎಂದು ಅವರು ಮನವಿ ಮಾಡಿದರು.
ಬಿ.ವೈ.ರಾಘವೇಂದ್ರ ಮಾತನಾಡಿ, ಜಿಲ್ಲೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕಾಲಿಟ್ಟಿರುವುದು ನಮ್ಮೆಲ್ಲರ ಪುಣ್ಯ.ಮೋದಿ ಅವರ ಗೆಲುವಿಗೆ ಕಮಲದ ಗುರುತಿಗೆ ಮತಚಲಾಯಿಸಬೇಕು ಎಂದರು.ಕೆ.ಎಸ್.ಈಶ್ವರಪ್ಪ ಮಾತನಾಡಿ, ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕು.ಕಳೆದ ಚುನಾವಣೆ ಸಂದರ್ಭದಲ್ಲಿ ಭದ್ರಾವತಿ ತಾಲೂಕಿನಿಂದ ಕಡಿಮೆ ಮತಗಳು ಬಂದಿದದ್ದವು. ಆದರೆ ಈ ಬಾರಿ ಈ ಕ್ಷೇತ್ರದಿಂದ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕು ಎಂದು ಅವರು ಕರೆ ನೀಡಿದರು.

 

Recent Articles

spot_img

Related Stories

Share via
Copy link
Powered by Social Snap