ದಾವಣಗೆರೆ:
ಪ್ರತಿದಿನ ಉಧೋ, ಉಧೋ ಎಂಬ ಘೋಷ ವಾಕ್ಯ, ಗಂಟೆ-ಜಾಗಟೆಯ ನಿನಾದ ಕೇಳುತ್ತಿದ್ದ ನಗರ ದೇವತೆ ಶ್ರೀದುರ್ಗಾಂಭಿಕಾ ದೇವಿ ದೇವಸ್ಥಾನದ ಎದುರು ಭಾನುವಾರ ಕೆಜಿಗ್ ಎಂಬತ್…, ಅರ್ಧ ಕೆಜಿಗ್ ನಲ್ವತ್…, ಕಾಲ ಕೆಜಿಗ್ ಇಪ್ಪತ್… ಎಂಬ ಕೂಗು ಕೇಳಿ ಬರುತ್ತಿತ್ತು.
ಹೌದು… ಇದೇನಂತಾ ಉಬ್ಬೇರಿಸಬೇಡಿ, ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಬರಗಾಲ ಆವರಿಸಿರುವುದರಿಂದ ವರುಣ ಕೃಪೆಗಾಗಿ ಶ್ರೀದುರ್ಗಾಂಭಿಕಾದೇವಿ ದೇವಸ್ಥಾನ ಟ್ರಸ್ಟ್ ಹಾಗೂ ಮಹಾನಗರ ವತಿಯಿಂದ ನಗರ ದೇವತೆ ಶ್ರೀದುರ್ಗಾಂಭಿಕಾ ದೇವಸ್ಥಾನದ ಆವರಣದಲ್ಲಿ ಈ ಭಾನುವಾರದಿಂದ ವಾರದ ಸಂತೆ ಆರಂಭಿಸಿದ ಹಿನ್ನೆಲೆಯಲ್ಲಿ ಕೇಳಿ ಬಂದ ವ್ಯಾಪಾರಿಗಳ ಕೂಗಿದು.
ಭಾನುವಾರ ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಪಾಲಿಕೆ ಆಯುಕ್ತ ವೀರೇಂದ್ರ ಕುಂದುಗೋಳ ಹಾಗೂ ಪಾಲಿಕೆ ಸಿಬ್ಬಂದಿಗಳು ಮತ್ತು ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ಹನುಮಂತರಾವ್ ಸಾವಂತ್, ಗುರುರಾಜ್ ಸೊಪ್ಪಿನ್ ಮತ್ತಿತರರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಉತ್ತಮ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಿದರು.
ವಾಡಿಕೆಯಂತೆ ಮಳೆಯಾಗದೇ ಇದ್ದ ಸಂದರ್ಭದಲ್ಲಿಯೂ ಪ್ರತಿ ವರ್ಷವೂ ವರುಣನ ಕೃಪೆಗಾಗಿ ದೇವಿ ಆವರಣದಲ್ಲಿ ಐದು ವಾರಗಳ ಕಾಲ ಸಂತೆ ಹಾಕಲಾಗುತ್ತದೆ. ಹೀಗೆ ಸಂತೆ ಹಾಕಿದ ಸಂದರ್ಭದಲ್ಲೆಲ್ಲಾ ಮೂರು ವಾರದ ಒಳಗೆ ಮಳೆ ಬಂದಿರುವ ನಿದರ್ಶನಗಳಿವೆ. ಆದರಂತೆ ಈ ಬಾರಿಯೂ ವರುಣ ಮುನಿಸಿಕೊಂಡಿರುವ ಹಿನ್ನೆಲೆಯಲ್ಲಿ ವರುಣನ ಕೃಪೆಗಾಗಿ ಇಲ್ಲಿ ಸಂತೆ ಹಾಕಲಾಗಿದ್ದು, ಮೂರು ವಾರದ ಸಂತೆ ಆಗುವುದರ ರೊಳಗೆ ಉತ್ತಮ ಮಳೆಯಾಗಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ಗೌಡರ ಚನ್ನಬಸಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ದೇವಸ್ಥಾನದ ಆವರಣದ ಸುತ್ತ ಸಂತೆ ಹಾಕಿದ್ದ ವ್ಯಾಪಾರಸ್ಥರು ಸಹ ದೇವಿಯಲ್ಲಿ ಮಳೆಗಾಗಿ ಪ್ರಾರ್ಥಿಸಿ, ವ್ಯಾಪಾರ-ವಹಿವಾಟು ಆರಂಭಿಸಿದರು. ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೂ ವ್ಯಾಪಾರ ಉತ್ತಮವಾಗಿತ್ತು. ಆದರೆ, ಮಧ್ಯಾಹ್ನನ ನಂತರ ವ್ಯಾಪಾರದಲ್ಲಿ ಕುಸಿತಗೊಂಡಿದೆ ಎಂಬುದು ವ್ಯಾಪಾರಸ್ಥರ ಅಭಿಪ್ರಾಯವಾಗಿದೆ.
ಮಳೆಗಾಗಿ ಈ ಹಿಂದೆಯೂ ದೇವಿ ದೇವಸ್ಥಾನದ ಆವರಣದಲ್ಲಿ ವಾರದ ಸಂತೆ ಮಾಡಿದ್ದೇವು. ಅದೇರೀತಿ ಈ ಬಾರಿಯೂ ಕೂಡ ಸಂತೆ ಈ ಬಾರಿ ಆರಂಭಿಸಿದ್ದೇವೆ. ಹಿಂದಿನ ವರ್ಷಗಳಿಗಿಂತ ಹೆಚ್ಚು ಬಿಸಲಿದೆ. ಬಿಸಲಿರುವ ಕಾರಣ ಗ್ರಾಹಕರು, ದೇವಸ್ಥಾನದ ಆವರಣದ ಸಮೀಪದಲ್ಲೇ ಇರುವ ವ್ಯಾಪಾರಸ್ಥರ ಬಳಿ ಬರುವುದಿಲ್ಲ. ಅಲ್ಲೆ ಹೊರಗಡೆಯೇ ಸಂತೆ ಮಾಡಿಕೊಂಡು ಹೋಗಿ ಬಿಡುತ್ತಾರೆ. ಆದ್ದರಿಂದ ವ್ಯಾಪಾರದಲ್ಲಿ ಭಾರೀ ಕುಸಿತ ಕಂಡಿದೆ ಎಂದು ತರಕಾರಿ ವ್ಯಾಪಾರಿ ಎಮ್ಮೆಹಟ್ಟಿಯ ಶಿವಣ್ಣ ಅಳಲು ತೋಡಿಕೊಂಡರು.
ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಅಷ್ಟು ವ್ಯಾಪಾರವಿಲ್ಲ. ಮಳೆ ಇಲ್ಲದೇ, ತರಕಾರಿ ಸೇರಿದಂತೆ ಇತರೆ ಉತ್ಪನ್ನಗಳು ಮಾರುಕಟ್ಟೆಗೆ ಬಾರದ ಕಾರಣ ತರಕಾರಿ ಬೆಲೆ ಜಿಗಿತ ಕಂಡಿದೆ. ಆದರೆ, ಜನ ಬಾಯಿಗೆ ಬಂದ ಬೆಲೆಗೆ ಚೌಕಾಸಿ ಮಾಡ್ತಾರೆ. ಕೇಳಿದ ರೇಟಿಗೆ ಕೊಡದಿದ್ದರೆ ಬೇರೆ ಕಡೆಗೆ ಹೋಗುತ್ತಾರೆ. ಹೀಗಾಗಿ ನಮಗೆ ವ್ಯಾಪಾರದಲ್ಲಿ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂದು ವ್ಯಾಪಾರಸ್ಥೆ ಭರಮಸಾಗರದ ರತ್ನಮ್ಮ ಬೇಸರ ವ್ಯಕ್ತಪಡಿಸಿದರು.