ಮನ್ಸಿದ್ರೆ ಕೆಲ್ಸಾ ಮಾಡಿ ಇಲ್ವೆ ಜಾಗ ಖಾಲಿ ಮಾಡಿ

ದಾವಣಗೆರೆ:

         ಜನ-ಜಾನುವಾರುಗಳಿಗೆ ಕುಡಿಯಲು ನೀರು ಸಿಗದ ಕಾರಣಕ್ಕೆ ನಮ್ಮನ್ನ ಕ್ಯಾಕರಿಸಿ ಉಗಿತಾವ್ರೆ, ನಿಮ್ಗೆ ಕೆಲ್ಸಾ ಮಾಡೋ ಮನ್ಸಿದ್ರೆ ಮಾಡಿ, ಇಲ್ಲದಿದ್ರೆ ಜಾಗ ಖಾಲಿ ಮಾಡಿ, ಇಲ್ಲಿ ಹುಡುಗಾಟ ಆಡ್ತಿರಾ, ಸಸ್ಪೆಂಡ್ ಮಾಡಿ ಬಿಡ್ತಿನಿ ಹುಷಾರ್…! ಹೀಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ (ವಾಸು) ಅವರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಂಜಿನಿಯರ್‍ಗಳನ್ನು ತರಾಟೆಗೆ ತಗೆದುಕೊಂಡರು.

         ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ 2018-19ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮೂರನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕಳೆದ 20 ದಿನಗಳ ಹಿಂದೆ ಸಚಿವ ಸಂಪುಟ ಉಪ ಸಮಿತಿ ಬರ ನಿರ್ವಹಣೆ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ, ನೀರು ಸಿಗುವ ವರೆಗೂ ಅಂದರೆ, 1200 ಅಡಿಗಳ ವರೆಗೂ ಬೋರ್‍ವೆಲ್ ಕೊರೆಸಿ, ವಿಫಲಗೊಂಡಿರುವ ಕೊಳವೆ ಬಾವಿಗಳಲ್ಲಿ ರಿಡಿಗ್ಗಿಂಗ್ ಮಾಡಿ ಜನ-ಜಾನುವಾರುಗಳಿಗೆ ನೀರು ಪೂರೈಸುವಂತೆ ಸೂಚನೆ ನೀಡಲಾಗಿತ್ತು. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

         ಇದಕ್ಕೆ ಉತ್ತರಿಸಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ, ಈಗಾಗಲೇ ವಿಫಲಗೊಂಡಿರುವ ಸುಮಾರು 10 ಕೊಳವೆಬಾವಿಗಳಲ್ಲಿ ಸುಮಾರು 300ರಿಂದ 400 ಅಡಿಗಳ ವರೆಗೆ ರೀಬೋರಿಂಗ್ ಮಾಡಲಾಗಿದೆ. ಹೀಗಾಗಿ ಕೆಲ ಬೋರ್‍ವೆಲ್‍ಗಳಲ್ಲಿ ಸ್ವಲ್ಪ ನೀರಿನ ಅಂಶ ಕಂಡುಬಂದಿದ್ದು, ಮೂರ್ನಾಲ್ಕು ಕೊಳವೆಗಳು ವಿಫಲಗೊಂಡಿವೆ ಎಂದು ಹೇಳುತ್ತಿದ್ದಂತೆ, ಮಧ್ಯ ಪ್ರವೇಶಿಸಿದ ಸಚಿವರು ಎಷ್ಟು ಅಡಿಗಳ ವರೆಗೆ ಕೊರೆಸಲಾಗಿದೆ ಎಂದು ಮರು ಪ್ರಶ್ನೆ ಹಾಕಿದರು.

          ಆಗ ಪ್ರತಿಕ್ರಯಿಸಿದ ಕಾರ್ಯಪಾಲಕ ಅಭಿಯಂತರ 850 ಅಡಿಗಳ ವರೆಗೆ ಕೊರೆಸುತ್ತಿದ್ದೇವೆಂದು ಹೇಳುತ್ತಿದ್ದಂತೆ, ಕೆಂಡಮಂಡಲರಾದ ಸಚಿವ ಶ್ರೀನಿವಾಸ್, ಅವತ್ತು ಸಭೆಯಲ್ಲಿ ಇದ್ಯಲ್ಲ, ತಲೆ ಇಲ್ಲಿ ಇಟ್ಕೊಂಡಿದ್ಯಾ, ಇಲ್ಲಾ ಬೇರೆ ಕಡೆ ಇಟ್ಕೊಂಡಿದ್ಯಾ? ಅಂದು ಸ್ಪಷ್ಟವಾಗಿ ನೀರು ಸಿಗುವ ವರೆಗೂ ಸುಮಾರು 1200 ಅಡಿಗಳ ವರೆಗೂ ಕೊಳವೆ ಬಾವಿ ಕೊರೆಸಿ ಎಂದು ಸ್ಪಷ್ಟವಾಗಿ ಸೂಚಿಸಿದ್ದರೂ. ಏಕೆ ಹೀಗೆ ಮಾಡುತ್ತೀರಿ ಎಂದು ತರಾಟೆಗೆ ತಗೆದುಕೊಂಡರು.

         ಆಗ ತಡವರಿಸಿ ಉತ್ತರಿಸಿದ ಇಂಜಿನಿಯರ್ ಜಿಯೋಲಿಸ್ಟ್ ಎಂಬುದಾಗಿ ಗೊಣಗಾಡಲು ಆರಂಭಿಸಿದರು. ಇದರಿಂದ ಮತ್ತಷ್ಟು ಸಿಟ್ಟಿಗೇರಿದ ಸಚಿವರು, ನೀವೆಲ್ಲರೂ ಮೊದ್ಲೆ 700ರಿಂದ 800 ಅಡಿ ವರೆಗೆ ಬೋರ್‍ವೆಲ್ ಕೊರೆಸಬೇಕೆಂಬ ಮೈಂಡ್‍ಸೆಟ್ ಮಾಡಿಕೊಂಡಿದ್ದೀರಾ. ನಿಮಗೆಲ್ಲಾ ಏನಾಗಿದೆ? ನಿಮ್ಮ ಮನೆಗಳಲ್ಲಿ ನೀರಿಲ್ಲ ಎಂದರೇ ಏನು ಮಾಡುತ್ತೀರಿ? ಹುಡುಗಾಟ ಆಡ್ತಿರಾ ಜಿಲ್ಲಾಧಿಕಾರಿಗಳಿಂದ ವರದಿ ತರೆಸಿ ಸಸ್ಪೆಂಡ್ ಮಾಡಿಬಿಡುತ್ತೇನೆ ಹುಷಾರ್! ಹೇಳಿದಂತೆ ಕೆಲಸ ಮಾಡಿ, ಅದನ್ನು ಬಿಟ್ಟಿ ಪರಿಶೀಲನೆ ಮಾಡಲು ಹೋಗಬೇಡಿ ಎಂದು ತಾಕೀತು ಮಾಡಿದರು.

         ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಇದಕ್ಕೆಲ್ಲಾ ನಿಮ್ಮ ಸಹಾಯಕ ಅಭಿಯಂತರರು ಫಿಲ್ಡ್‍ಗೆ ಹೋಗದಿರುವುದು ಮುಖ್ಯ ಕಾರಣವಾಗಿದೆ. ಬೋರ್‍ವೆಲ್ ಎಷ್ಟೇ ಆಳ ಹೋದರೂ ಪರವಾಗಿಲ್ಲ. ಕುಡಿಯುವ ನೀರಿಗೆ ಸಾಕಷ್ಟು ಅನುದಾನವಿದೆ. ಹಣದ ಕೊರತೆ ಇಲ್ಲ. ಇನ್ನೂ ಹತ್ತು ದಿನಗಳಲ್ಲಿ ಯಾವ, ಯಾವ ಗ್ರಾಮಗಳಿಗೆ ಟ್ಯಾಂಕರ್‍ಗಳ ಮೂಲಕ ನೀರು ಪೂರೈಸಲಾಗುತ್ತಿದೆಯೋ ಆ ಎಲ್ಲಾ ಗ್ರಾಮಗಳಲ್ಲೂ 1500 ಅಡಿ ಆಳ ಹೋದರೂ ಪರವಾಗಿಲ್ಲ. ನೀರು ಸಿಗುವ ವರೆಗೂ ಬೋರ್‍ವೆಲ್ ಕೊರೆಸಿ ಜನ-ಜಾನುವಾರುಗಳಿಗೆ ನೀರು ಸರಬರಾಜು ಮಾಡಿ ಎಂದು ಸೂಚಿಸಿದರು.

         ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಇರುವ 29 ಸಮಸ್ಯಾತ್ಮಕ ಹಳ್ಳಿಗಳಿದ್ದು, ಈ ಎಲ್ಲಾ ಹಳ್ಳಿಗಳಲ್ಲೂ ವಿಫಲವಾಗಿರುವ ಕೊಳವೆ ಬಾವಿಗಳಲ್ಲಿ ಇನ್ನೂ 10 ದಿನಗಳಲ್ಲಿ ನೀರು ಸಿಗುವ ವರೆಗೂ 1500 ಅಡಿಗಳ ವರೆಗೂ ರಿಡಿಗ್ಗಿಂಗ್ ಮಾಡಿಸಿ, ಬೋರ್‍ವೆಲ್ ಬೊರ್‍ವೆಲ್ ಸಫಲಗೊಳಿಸಿ, ನೀರು ಪೂರೈಸಿ ನಾನೇ ಸ್ವತಃ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸುತ್ತೇನೆ ಎಂದರು.

        ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ರಾಜೀವ್ ಗಾಂಧಿಸಬ್ ಮಿಷನ್ ಯೋಜನೆಯಡಿ 256 ಹಳ್ಳಿಗಳಿಗೆ ನೀರು ಪೂರೈಸುವ ಸಂತೇ ಮುದ್ದಾಪುರ ಯೋಜನೆ 2011ರಲ್ಲಿ ಸಾಂಕ್ಷನ್ ಆಗಿದೆ. ಇದಕ್ಕೆ ಉಸ್ತುವಾರಿ ಸಚಿವರು ತಕ್ಷಣವೇ ಅನುಮೋದನೆ ಕೊಡಿಸಬೇಕೆಂದು ಮನವಿ ಮಾಡಿದರು.

          ಸಭೆಯಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ್, ಮಾಡಾಳ್ ವಿರೂಪಾಕ್ಷಪ್ಪ, ಜಿಲ್ಲಾ ಪಂಚಾಯತ್ ಪ್ರಭಾರ ಅಧ್ಯಕ್ಷೆ ಜೆ.ಸವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್, ಜಿ.ಪಂ. ಸದಸ್ಯ ಎಂ.ಆರ್.ಮಹೇಶ್, ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೇರದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap