ಹಿರಿಯೂರು :
ಮಾನವ ಜನ್ಮ ಬಹಳ ದೊಡ್ಡದು ಹಾಗೂ ತುಂಬಾ ಮಹತ್ವವಾದುದು. ಇಂತಹ ಮಹತ್ವವಾದ ಜನ್ಮ ಪಡೆದ ನಾವುಗಳು, ಧಾರ್ಮಿಕ ಶ್ರದ್ಧೆ, ಭಕ್ತಿಭಾವ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ಹಿಂದೂಪುರ ಸದ್ಗುರು ಶ್ರೀ ನರಹರಿ ಪೀಠಾಧ್ಯಕ್ಷರಾದ ಡಾ.ವೈ.ರಾಜಾರಾಂರವರು ಹೇಳಿದರು.
ನಗರದ ಶ್ರೀ ನಿತ್ಯಾನಂದ ಅವಧೂತರ ಆಶ್ರಮದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ “72 ಗಂಟೆಗಳ ಅಖಂಡ ಶಿವಯಜ್ಞ” ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿರಿಯೂರಿನ ಶ್ರೀನಿತ್ಯಾನಂದ ಆಶ್ರಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಧರ್ಮದರ್ಶಿಗಳಾದ ಶ್ರೀಯುತ ಗೋವಿಂದಪ್ಪನವರು ಹಾಗೂ ಸದ್ಗುರು ನಿತ್ಯಾನಂದ ಶಿಷ್ಯಮಂಡಳಿ ನೇತೃತ್ವದಲ್ಲಿ ಶಿವಯಜ್ಞ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನದಾಸೋಹ ಕಾರ್ಯಕ್ರಮ ನಡೆಸುತ್ತಾ ಬಂದಿದ್ದು, ಇದು ಲೋಕಕಲ್ಯಾಣಾರ್ಥವಾಗಿ ನಡೆಸುತ್ತಿರುವ ಒಂದು ಅಮೂಲ್ಯವಾದ ಕಾರ್ಯಕ್ರಮವಾಗಿದೆ ಎಂಬುದಾಗಿ ಅವರು ಪ್ರಶಂಸಿಸಿದರು.
ಈ ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು, ಬಸವನಹಳ್ಳಿ ಶ್ರೀ ಶಿವಾನಂದ ಆಶ್ರಮದ ರಮಣಾನಂದ ಮಹಾಸ್ವಾಮಿಗಳು, ನಿತ್ಯಾನಂದ ಆಶ್ರಮದ ಧರ್ಮದರ್ಶಿಗಳಾದ ಶ್ರೀಗೋವಿಂದಪ್ಪನವರು ಸದ್ಗುರು ನಿತ್ಯಾನಂದ ಶಿಷ್ಯ ಮಂಡಳಿಯವರು ಅನೇಕ ಭಕ್ತರು ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು.