ಮನುಷ್ಯನ ಪ್ರಾಣ ಉಳಿಸಲು ಹಣವೊಂದಿದ್ದರೆ ಸಾಲದು : ಎಸ್ ಆರ್ ಉಮಾಶಂಕರ್

ಬೆಂಗಳೂರು

      ಮನುಷ್ಯನ ಪ್ರಾಣ ಉಳಿಸಲು ಹಣವೊಂದಿದ್ದರೆ ಸಾಲದು, ಮಾನವೀಯತೆಯೂ ಅಗತ್ಯ ರೆಡ್ ಕ್ರಾಸ್ ಸಂಸ್ಥೆ ಅಂತಹ ಮಾನವೀಯ ಸೇವೆಗಳನ್ನು ಸಮಾಜಕ್ಕೆ ನೀಡುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಆರ್ ಉಮಾಶಂಕರ್ ಪ್ರಶಂಷಿಸಿದರು

      ನಗರದಲ್ಲಿ ನಡೆದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಜನತೆ ವಿದ್ಯಾಭ್ಯಾಸದ ಜೊತೆಗೆ ಸಮಾಜ ಸೇವೆ ಮಾಡಲು ಮುಂದಾಗಬೇಕು.ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿಗಳು ಕೇವಲ ಟ್ಯೂಷನ್ ಗಳಲ್ಲಿ ಹೇಳಿಕೊಡುವ ಪಾಠಗಳಷ್ಟೇ ಓದಿ ಸರ್ಕಾರ ನಡೆಸುವ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ಯಶಸ್ಸು ಕಾಣುತ್ತಾರೆ, ಆದರೆ ಶಾಲೆಯಲ್ಲಿ ಹೇಳಿಕೊಡುವ ಪಠ್ಯಗಳನ್ನು ಅರ್ಥೈಸಿಕೊಂಡು ಓದುವ ವಿದ್ಯಾರ್ಥಿಗಳು ಜೀವನವೆಂಬ ಪರೀಕ್ಷೆಯಲ್ಲಿ ಸಫಲರಾಗುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

      ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆ ಉಪಾಧ್ಯಕ್ಷ ಡಾ.ಎಂ.ಕೆ ಶ್ರೀಧರ್ ಮಾತನಾಡಿ, ಸಂಸ್ಥೆಯು ಮಾನವೀಯತೆಯ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಸಾರ್ವಜನಿಕರು ಹಾಗೂ ಯುವ ಜನತೆ ನಮ್ಮ ಸಂಸ್ಥೆಯ ಜೊತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

     ವಿಶ್ವದಾದ್ಯಂತ 190 ದೇಶಗಳಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಶಾಖೆಗಳು ಕಾರ್ಯ ನಿರ್ವಹಿಸುತ್ತಿದ್ದು, ಈಗಾಗಲೇ 97 ದಶ ಲಕ್ಷಕ್ಕೂ ಅಧಿಕ ಸದಸ್ಯರನ್ನು ಸಂಸ್ಥೆಯು ಒಳಗೊಂಡಿದ್ದು, ಮನುಷ್ಯತ್ವ, ಸ್ವಾತಂತ್ರ್ಯ ಹಾಗೂ ನಿಸ್ಪಕ್ಷಪಾತವಾಗಿ ಸೇವೆ ಸಲ್ಲಿಸುತ್ತಿದೆ ಎಂದು ಶ್ಲಾಘಿಸಿದರು.

      ಈಗಾಗಲೇ ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯು ವಿದ್ಯಾರ್ಥಿಗಳು ಸ್ವತಃ ಸ್ವಯಂ ಸೇವಕರಾಗಿ ಸಂಸ್ಥೆಯಲ್ಲಿ ತೊಡಗಿಕೊಳ್ಳಲು ಅನುವು ಮಾಡಿಕೊಡುವುದಾಗಿ ತಿಳಿಸಿದ್ದು, ಇದರಿಂದ ಸಾರ್ವಜನಿಕರಿಗೆ ಸಂಸ್ಥೆಯ ಸೇವೆಗಳು ತಲುಪಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

       ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ಸಭಾಪತಿ ಎಸ್ ನಾಗಣ್ಣ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯು ವಿಶ್ವವ್ಯಾಪಿಯಾಗಿದ್ದು ಮನುಕುಲದ ಉದ್ಧಾರಕ್ಕಾಗಿ ವಿವಿಧ ರೀತಿಯ ಸೇವೆಗಳನ್ನು ಸಲ್ಲಿಸುತ್ತಾ ಬಂದಿದೆ. ನಿರಾಶ್ರಿತರಿಗಾಗಿ ಕೌಶಲ್ಯ ತರಬೇತಿ, ಆರೋಗ್ಯ ತಪಾಸಣಾ ಶಿಬಿರ, ರಕ್ತನಿಧಿ ಮತ್ತಿತರ ಸೇವೆಗಳನ್ನು ದೇಶದಾದ್ಯಂತ ನಡೆಸುತ್ತಿದೆ ಎಂದರು.

     ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮೃತ್ಯುಂಜಯ ಮಹಾಪಾತ್ರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಉಪಸಭಾಪತಿ ಡಾ.ವಿ.ಎಲ್.ಎಸ್ ಕುಮಾರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಪ್ರಶಾಂತ ಚಂದ್ರಶೇಖರ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಮೃತ್ಯುಂಜಯ ಮಹಾಪಾತ್ರ ಅವರನ್ನು ಸನ್ಮಾನಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap