ಹುಳಿಯಾರು
ಚಿಕ್ಕನಾಯಕನಹಳ್ಳಿಯ ಬಹುತೇಕ ಕೆರೆಗಳಲ್ಲಿ ದಿನೇ ದಿನೆ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವಂತೆಯೇ ಮರಳು ಲೂಟಿಯೂ ವ್ಯಾಪಕಗೊಳ್ಳಲಾರಂಭಿಸಿದ್ದು ಜಿಲ್ಲಾಧಿಕಾರಿಗಳು ಮರಳು ಲೂಟಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವಂತೆ ಲಂಚ ಮುಕ್ತ ವೇದಿಕೆಯ ಭಟ್ಟರಹಳ್ಳಿ ಮಲ್ಲಿಕಾರ್ಜನ್ ಮನವಿ ಮಾಡಿದ್ದಾರೆ.
ತಾಲುಕಿನಲ್ಲಿ ಮರಳು ದಂಧೆಯ ತಂಡಗಳು ರಾತ್ರಿ ಹಗಲೆನ್ನದೆ ಬತ್ತುತ್ತಿರುವ ಕೆರೆ, ಹಳ್ಳಗಳಿಂದ ಕಾನೂನು ನಿಬಂಧನೆಗಳನ್ನೆಲ್ಲ ಗಾಳಿಗೆ ತೂರಿ ಮರಳು ಲೂಟಿ ನಡೆಸುತ್ತಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದರೂ ಗಮನ ಹರಿಸದಿರುವುದಿಂದ ಮರಳು ಲೂಟಿ ತಂಡಕ್ಕೆ ವರದಾನವಾಗಿ ಮಾರ್ಪಟ್ಟಿದೆ.
ಕೆರೆಯಿಂದ ತೆಗೆಯುವ ಮರಳನ್ನು ಟಿಪ್ಪರ್ ಲಾರಿ ಮತ್ತಿತರ ವಾಹನಗಳಲ್ಲಿ ಬೆಂಗಳೂರಿಗೆ ಸಾಗಿಸುತ್ತಿದ್ದಾರೆ. ಕೆಲವರು ತೋಟಕ್ಕೆ ಊಳು ತುಂಬುವ ನೆಪದಲ್ಲಿ ಮರಳು ಸಾಗಿಸುತ್ತಿದ್ದಾರೆ. ಆದರೆ ಸ್ಥಳೀಯರಿಗೆ ಮನೆ ಕಟ್ಟಿಕೊಳ್ಳುವುದಿರಲಿ ಶೌಚಾಲಯ ಕಟ್ಟಲು ಮರಳು ಸಿಗದೆ ಕೃತಕ ಅಭಾವ ಸೃಷ್ಠಿಸಿದ್ದಾರೆ.
2016 ರ ಮರಳು ನೀತಿ ತಾಲ್ಲೋಕಿನಲ್ಲಿ ಜಾರಿಯಾಗುತ್ತಿಲ್ಲ. ದಂಧೆಕೋರರು ಮರಳು ಲೂಟಿ ಮಾಡುತ್ತಿರುವುದರಿಂದ ಬಡವರು ಮನೆ ಶೌಚಾಲಯ ಕಟ್ಟಿಕೊಳ್ಳಲು ಚೀಲದಲ್ಲಿ ಮರಳು ತುಂಬುವ ಪರಿಸ್ಥಿತಿ ಬಂದಿದೆ. ಮರಳಿಗೆ ಪರ್ಯಾವಾಗಿ ತಾಲ್ಲೋಕಿನ ಜನರಿಗೆ ಯಾವ ವ್ಶವಸ್ಥೆ ಸಹ ಮಾಡಲಾಗಿಲ್ಲ. ಹಾಗಾಗಿ ಮರಳು ದಂಧೆಗೆ ಕಡಿವಾಣ ಹಾಕುವಂತೆ ಅವರು ಒತ್ತಾಯಿಸಿದ್ದಾರೆ.