ಮರಳು ತುಂಬಲು ಮತ್ತೆ ಅಡ್ಡಿಪಡಿಸಿದ ಗ್ರಾಮಸ್ಥರು ಹಾಗೂ ರೈತರು

ಚಳ್ಳಕೆರೆ

      ಕಳೆದ ಹಲವಾರು ವರ್ಷಗಳಿಂದ ಮಳೆಬಾರದೆ ಬರಗಾಲದ ದುಸ್ಥಿತಿಯಲ್ಲಿ ಬರಡು ಬದುಕನ್ನು ಕಂಡುಕೊಂಡಿರುವ ಇಲ್ಲಿನ ರೈತ ಸಮುದಾಯಕ್ಕೆ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು ತಾಲ್ಲೂಕು ಗಡಿಯಲ್ಲಿನ ವೇದಾವತಿ ನದಿ ಪಾತ್ರದ ಮರಳನ್ನು ಟೆಂಡರ್ ಮೂಲಕ ವಿಲೇವಾರಿ ಮಾಡಲು ಈಗಾಗಲೇ ಆದೇಶಿಸಿದ್ದು, ರೈತರು ಸರ್ಕಾರ ನಿರ್ಧಾರಕ್ಕೆ ಭಾರಿ ಪ್ರತಿರೋಧ ವ್ಯಕ್ತ ಪಡಿಸಿದರು.

       ರಾಜ್ಯ ಸರ್ಕಾರ ಟೆಂಡರ್ ಮೂಲಕ 2017 ರಿಂದ 2022ರ ತನಕ ಐದು ವರ್ಷಗಳ ಅವಧಿಗೆ ಇ-ಟೆಂಡರ್ ಮೂಲಕ ಹೊಸದುರ್ಗದ ಕೆ.ಎಸ್.ನಟರಾಜು ಎಂಬುವವರು ಈಗಾಗಲೇ ಮರಳನ್ನು ದಾಸ್ತಾನು ಮಾಡಲು ಹಾಗೂ ವಿತರಣೆ ಮಾಡಲು ಅವಕಾಶ ಕಲ್ಪಿಸಿದ್ದು, ಟೆಂಡರ್ ಪಡೆದ ಕೆ.ಎಸ್.ನಟರಾಜು ಸಹ ಸರ್ಕಾರಕ್ಕೆ ಹಣ ಪಾವತಿಸಿದ್ದು, ಕಳೆದ ಜನವರಿ-25ರಂದು ಭೂಗರ್ಭ ಇಲಾಖೆ, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಪ್ರಯತ್ನಿಸಿದ್ದು, ರೈತರು ವಿಷ ಸೇವಿಸಿ ಪ್ರಾಣ ಕಳೆದುಕೊಳ್ಳುವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ವಿಧಿಇಲ್ಲದೆ ಎಲ್ಲರೂ ವಾಪಾಸ್ ತೆರಳಿದ್ದರು.

      ಆದರೆ, ಮತ್ತೊಮ್ಮೆ ಜಿಲ್ಲಾಡಳಿತ ಟೆಂಡರ್‍ದಾರರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಮೇ-10ರ ಶುಕ್ರವಾರ ವೇದಾವತಿ ನದಿ ಪಾತ್ರದ ಕೋನಿಗರಹಳ್ಳಿ ಬಳಿ ಮರಳು ತೆಗೆಯಲು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ಮತ್ತೊಮ್ಮೆ ರೈತರು ಸರ್ಕಾರದ ಪ್ರಯತ್ನಕ್ಕೆ ಆಕ್ರೋಶ ವ್ಯಕ್ತ ಪಡಿಸಿದರು.

       ಪ್ರತಿಭಟನೆ ನೇತೃತ್ವದ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಕಳೆದ ಹತ್ತಾರು ವರ್ಷಗಳಿಂದ ಮಳೆ, ಬೆಳೆ ಇಲ್ಲದೆ ಈ ಭಾಗದ ಸಾವಿರಾರು ಎಕರೆ ತೋಟಗಳು ಒಣಗಿವೆ. ಕೆರೆ ಮತ್ತು ನದಿ ಪಾತ್ರದಲ್ಲಿ ಬಿರುಕುಗಳು ಮೂಡಿದ್ದು, ಕುಡಿಯಲು ಸಹ ನೀರಿಲ್ಲದೆ ಈ ಭಾಗದ ರೈತರ ಬದುಕು ಸಂಪೂರ್ಣ ನಾಶವಾಗಿದೆ.

     ಮರಳು ಇದ್ದಲ್ಲಿ ಮಳೆ ಬಂದಲ್ಲಿ ತೇವಾಂಶದ ಆಧಾರದ ಮೇಲೆ ಈ ಭಾಗದ ಬತ್ತಿ ಹೋಗಿರುವ ಜಲ ಮರುಜೀವ ಪಡೆಯಲಿದ್ದು, ಬೋರ್‍ವೆಲ್‍ಗಳಲ್ಲೂ ಸಹ ನೀರು ದೊರಕುವ ಸಂಭವಿದೆ. ಆದರೆ, ಜಿಲ್ಲಾಡಳಿತ ಈ ಭಾಗದ ರೈತರ ಬದುಕಿನ ಬಗ್ಗೆ ಗಮನಹರಿಸದೆ ಕೇವಲ ಆಧಾಯದ ದೃಷ್ಠಿಯಿಂದ ಗುತ್ತಿಗೆ ನೀಡಿದ್ಧಾರೆ. ಸರ್ಕಾರ ಕೂಡಲೇ ಗುತ್ತಿಗೆಯನ್ನು ರದ್ದು ಪಡಿಸಲಿ. ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ನದಿಯಿಂದ ಮರಳನ್ನು ತೆಗೆಯಲು ಬಿಡುವುದಿಲ್ಲವೆಂದು ಪಟ್ಟು ಹಿಡಿದರು.

    ಈ ಸಂದರ್ಭದಲ್ಲಿ ತಹಶೀಲ್ದಾರ್ ತುಷಾರ್ ಬಿ.ಹೊಸೂರ್, ಡಿವೈಎಸ್ಪಿ ಎಸ್.ರೋಷನ್ ಜಮೀರ್, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ರೈತರ ಮುಖಂಡರೊದನೆ ಸಾಧಕ ಭಾದಕಗಳ ಬಗ್ಗೆ ಚರ್ಚೆ ನಡೆಸಿ ರೈತರ ಅಭಿಪ್ರಾಯ ಪ್ರಾಮಾಣಿಕವಾಗಿದ್ದು, ಇಲ್ಲಿ ರೈತರಿಗೆ ತೊಂದರೆಯಾಗುವುದು ನಿಜ. ಆದರೆ, ಸರ್ಕಾರದ ಆದೇಶವನ್ನು ಪಾಲಿಸಲೇಬೇಕಿದೆ. ತಾವು ಮರಳು ತೆಗೆಯಲು ಅವಕಾಶ ನೀಡದೇ ಇರುವುದು ಕಾನೂನು ವಿರುದ್ದವಾಗುತ್ತದೆ ಎಂದು ವಿತರಣೆ ನೀಡಿದರು.

      ರೈತ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ, ನಿರ್ಧಾರ ಕೈಗೊಳ್ಳುತ್ತೇವೆ. ಕಡೇ ಪಕ್ಷ ಒಂದು ವಾರ ಸಮಯ ನೀಡಿದರೆ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಇಲ್ಲವಾದಲ್ಲಿ ನ್ಯಾಯಾದಿಂದಾದರೂ ತಡೆಯಾಜ್ಞೆ ತರುತ್ತೇವೆ. ತಡೆಯಾಜ್ಞೆ ತರದೇ ಇದ್ದಲ್ಲಿ ತಾವು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ನಮ್ಮ ಅಭ್ಯಂತರವಿಲ್ಲವೆಂದರು.

       ಗ್ರಾಮಸ್ಥರಾದ ಗೋಪಾಲಸ್ವಾಮಿ, ಮಾರುತೇಶ್, ರಂಗಸ್ವಾಮಿ, ಅನಂತನಾಗ್, ಡಾ.ಶ್ರೀನಿವಾಸ್, ಕೆಂಚಣ್ಣ, ಮನೋಹರ, ಕಮಲಮ್ಮ, ತಿಪ್ಪಮ್ಮ ಮುಂತಾದವರು ಮರಳು ತೆಗೆಯಲು ಯತ್ನಿಸಿದ ಯಂತ್ರವನ್ನು ತಡೆದು ಮಾತನಾಡಿ, ಸರ್ಕಾರ ಟೆಂಡರ್‍ದಾರರಿಗೆ ನದಿ ಪಾತ್ರದ ಒಳಭಾಗದಲ್ಲಿ ಕೇವಲ 1 ರಿಂದ 2 ಅಡಿ ಆಳ ಮಾತ್ರ ತೆಗೆಯಲು ಅನುಮತಿ ನೀಡಿದ್ದು ಈಗಾಗಲೇ ಟೆಂಡರ್ ದಾರರು ನಿಯಮ ನೀರಿ 15 ಅಡಿ ಆಳದಷ್ಟು ಮರಳು ತೆಗೆದು ವಿಲೇವಾರಿ ಮಾಡಿದ್ದು, ಅಂದು ವೇದಾವತಿ ನದಿಯಿಂದ 500 ಕೋಟಿ ಮರಳು ಸಾಗಾಟ ಮಾಡಿದ್ದಾರೆ ಎಂದು ಆರೋಪಿಸಿದರು.

       ಈ ಸಂದರ್ಭದಲ್ಲಿ ಕಂದಾಯಾಧಿಕಾರಿ ಶಾಂತಪ್ಪ, ಮೊಳಕಾಲ್ಮೂರು ವೃತ್ತ ನಿರೀಕ್ಷ ಎಂ.ಮಂಜುನಾಥ, ಪಿಎಸ್‍ಐಗಳಾದ ಕೆ.ಸತೀಶ್‍ನಾಯ್ಕ, ಎನ್.ಗುಡ್ಡಪ್ಪ, ಎನ್.ವೆಂಕಟೇಶ್, ಎಂ.ರವಿಕುಮಾರ್, ರಘುನಾಥ ಮುಂತಾದವರು ಬಂದೋಬಸ್ತ್ ಕಾರ್ಯದಲ್ಲಿ ತೊಡಗಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap