ತುಮಕೂರು
ವಿವಿಧ ಸ್ವರೂಪದ ಅಭಿವೃದ್ಧಿ ಕಾಮಗಾರಿಗಳ ಕಾರಣದಿಂದ ತುಮಕೂರು ನಗರದ ರಸ್ತೆಗಳಲ್ಲಿ ವಿಪರೀತ ಧೂಳು ಆವರಿಸುತ್ತಿದ್ದು, ಇದರಿಂದ ನಾಗರಿಕರು ರೋಗರುಜಿನಗಳಿಗೆ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಮಾನವಹಕ್ಕುಗಳ ಸೇವಾ ಕೇಂದ್ರದ ಸದಸ್ಯರುಗಳು ಸೋಮವಾರ ಬೆಳಗ್ಗೆ ತುಮಕೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಎಲ್ಲ ಅಧಿಕಾರಿ-ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಕರಪತ್ರದೊಡನೆ ಮಾಸ್ಕ್ ವಿತರಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಧೂಳಿನಿಂದ ಆಸ್ತಮ, ಅಲರ್ಜಿ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುವ ಸಂಭವ ಇರುವುದರಿಂದ ಎಲ್ಲರೂ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆಂದು ಕರಪತ್ರದಲ್ಲಿ ಎಚ್ಚರಿಸಲಾಗಿದೆ. ಧೂಳಿನ ಸಮಸ್ಯೆ ನಿವಾರಿಸುವಂತೆ ಕೋರಿ ನವೆಂಬರ್ ತಿಂಗಳಲ್ಲೇ ಜಿಲ್ಲಾಧಿಕಾರಿಗಳ ಸಹಿತ ಎಲ್ಲ ಅಧಿಕಾರಿಗಳಿಗೆ ನಾವು ಮನವಿ ಪತ್ರ ಸಲ್ಲಿಸಿದ್ದೆವು. ಆದರೆ ಅಧಿಕಾರಿಗಳಿಂದ ಭರವಸೆ ಸಿಕ್ಕಿದೆಯೇ ವಿನಃ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಮಾಸ್ಕ್ ವಿತರಿಸಿ ಗಮನ ಸೆಳೆಯುತ್ತಿದ್ದೇವೆಂದು ಕಾರ್ಯಕರ್ತರೊಬ್ಬರು ಪಾಲಿಕೆ ಕಚೇರಿಯಲ್ಲಿ ಮಾಸ್ಕ್ ವಿತರಿಸುವಾಗ ಹೇಳಿದರು.
ಮಾಸ್ಕ್ ಸ್ವೀಕರಿಸಿದ ಅನೇಕ ಜನರು ತಕ್ಷಣವೇ ಮಾಸ್ಕ್ ಧರಿಸಿಕೊಂಡು ಪಾಲಿಕೆ ಕಚೇರಿಯ ಒಳಗೆ ಮತ್ತು ಹೊರಗೆ ಸಂಚರಿಸುತ್ತಿದ್ದುದು ಮಿಕ್ಕವರ ಗಮನ ಸೆಳೆಯಿತು.