ಮಠಾಧೀಶರಿಗೆ ಗೋಪಾಲನೆಯ ಖರ್ಚು ವೆಚ್ಚದ ಅರಿವಿಲ್ಲ

ಹುಳಿಯಾರು:

        ಮಠಾಧೀಶರಿಗೆ ಗೋಪಾಲನೆಯ ಖರ್ಚು ವೆಚ್ಚದ ಅರಿವಿಲ್ಲ. ಇದಿದ್ದರೆ ಅವರು ಗೋ ಮಾರಾಟದ ಬಗ್ಗೆ ಚಕಾರ ಎತ್ತುತ್ತಿರಲಿಲ್ಲ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

       ಹುಳಿಯಾರು ಸಮೀಪದ ಕಂದಿಕೆರೆ ಹಾಲಿನ ಡೇರಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

      ತಾನು ಕೆಎಂಎಫ್ ಅಧ್ಯಕ್ಷರಾಗಿದ್ದಾಗ ಪೇಜಾವರಶ್ರೀಗಳು ಗೋಹತ್ಯೆ ನಿಲ್ಲಿಸಲು, ಹಾಲು ಮಾರಾಟ ತಡೆಯಲು ಹೋರಾಟ ಮಾಡೋಣ ಬನ್ನಿ ಎಂದಿದ್ದರು. ಆಗ ನಾನು ವಯಸ್ಸಾದ ರಾಸುಗಳನ್ನು ನಿಮ್ಮ ಮಠಕ್ಕೆ ಬಿಡುತ್ತೇವೆ ನೀವೇ ಸಾಕಿ. ಹಾಲು ಮಾರುವುದಿಲ್ಲ ಹಸು ಸಾಕಿರುವ ರೈತರಿಗೆ ಜೀವನ ನಿರ್ವಹಣೆಗೆ ಹಣ ಕೊಡಿ ಎಂದು ಕೇಳಿದ್ದೆ ಆಗ ಅವರು ನೀನು ಕೃಷ್ಣ ಎಂದು ಬಂದರೆ ಕಂಸನ ರೀತಿ ಮಾತನಾಡುತ್ತಿದೆಯಲ್ಲಾ ಎಂದಿದ್ದರು.

        ಅದಕ್ಕೆ ಪ್ರತಿಯಾಗಿ ನಾನು ಹಾಲು ಉತ್ಪಾದಕರ ಅಧ್ಯಕ್ಷನಾಗಿದ್ದು ಅನತ ಹಿತ ಕಾಯುವುದು ನನ್ನ ಕರ್ತವ್ಯ ಎಂದು ಹೇಳಿ ಕಳುಹಿಸಿದ್ದೆ. ಅಂದಿನಿಂದ ಇಂದಿನವರೆವಿಗೂ ಅವರು ನನ್ನೊಂದಿಗೆ ಮಾತನಾಡಿಲ್ಲ ಎಂದು ಹಳೆಯ ಘಟನೆ ನೆನಪು ಮಾಡಿಕೊಂಡ ಅವರು ದೇವರು ದಿಂಡರು ಎಂದು ಭಾವನಾತ್ಮಕವಾಗಿ ರೈತರನ್ನು ಕಟ್ಟಿಹಾಕುವ ಬದಲು ಆತ ಇನ್ನೊಬ್ಬರ ಆಸರೆ ಇಲ್ಲದೆ ತನ್ನ ಕಾಲ ಮೇಲೆ ತಾನು ನಿಲ್ಲುವಂತೆ ಮಾಡಬೇಕು ಎಂದರು.

        ರಾಜ್ಯದಲ್ಲಿ ನಾಟಿ ಹಸುಗಳನ್ನು ಉಳಿಸಬೇಕೆಂದು ಭಾರತದಲ್ಲಿ ಮೊದಲು ನಾಟಿ ತಳಿಯನ್ನು ಮಿಶ್ರ ತಳಿಯಾಗಿ ಬದಲಾಯಿಸುವ ಕೃತಕ ಗರ್ಭಧಾರಣೆಯನ್ನು ಕರ್ನಾಟಕದಲ್ಲಿ ಚಾಲನೆ ನೀಡಿದ್ದೆವು. ಆದರೆ ರೈತರು ಇದಕ್ಕೆ ಕಾಯದೆ ಸೀಮೆ ಹಸು ತಂದು ಹೈನುಗಾರಿಕೆ ಆರಂಭಿಸಿದರು. ಹೇಗೋ ರೈತರು ಆರ್ಥಿಕವಾಗಿ ಸದೃಢರಾದರೆ ಸಾಕೆಂದು ನಾವು ಸುಮ್ಮನಾದೆವು. ಈಗಲೂ ನಾಟಿ ಹಸುವಿಗೆ ಕೃತಕ ಗರ್ಭಧಾರಣೆಯ ಮೂಲಕ ಮಿಶ್ರ ತಳಿ ಮಾಡುವ ಅವಕಾಶವಿದ್ದು ಇದರಿಂದ ಹಂತ ಹಂತವಾಗಿ ಹಾಲು ಹೆಚ್ಚು ಕೊಡುವ ಹಸುಗಳಾಗುತ್ತವೆ. ರೈತರು ಮನಸ್ಸು ಮಾಡಬೇಕಷ್ಟೆ ಎಂದರು.

      ತಾಲ್ಲೂಕಿನಲ್ಲಿ ಬರಗಾಲ ಆವರಿಸುತ್ತಿದ್ದು ಇನ್ನೊಂದು ತಿಂಗಳಿಗಷ್ಟೇ ಇರುವ ಮೇವು ಸಿಗುತ್ತದೆ ಹಾಗಾಗಿ ರೈತರು ಮೇವು ಬೆಳೆಯಲು ಈಗಲೇ ಸಜ್ಜಾಗಬೇಕಿದೆ. ಇದಕ್ಕಾಗಿ ಹಾಲಿನ ಡೇರಿ, ಪಶು ಇಲಾಖೆ, ಕೃಷಿ ಇಲಾಖೆಗಳಲ್ಲಿ ಮೇವಿನ ಬೀಜಗಳನ್ನು ವಿತರಿಸುತ್ತಿದ್ದೇವೆ. ನೀರಿನ ಸೌಲಭ್ಯವಿರುವವರು ಅಗತ್ಯಕ್ಕಿಂತ ಹೆಚ್ಚು ಮೇವು ಬೆಳೆದರೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮೇವು ಖರೀದಿ ಮಾಡಿ ಹಣ ಕೊಡಿಸಲು ನಾನು ಬದ್ಧನಾಗಿದ್ದೇನೆ. ಈ ನಿಟ್ಟಿನಲ್ಲಿ ಸರ್ಕಾರದ ಗೋಶಾಲೆಗೆ ಕಾಯದೆ ನಿಮ್ಮ ಸಂಸಾರ ನಿರ್ವಹಣೆಗೆ ನೆರವಾಗಿರುವ ಹಸುಗಳ ಮೇಲೆ ಪ್ರೀತಿಯಿದ್ದರೆ ತಕ್ಷಣ ಮೇವು ಬೆಳೆದು ಬರಗಾಲ ಎದುರಿಸಲು ಸಜ್ಜಾಗಬೇಕು ಎಂದು ಸಲಹೆ ನೀಡಿದರು.

       ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಹಳೆಮನೆ ಶಿವನಂಜಪ್ಪ, ತುಮುಲು ವ್ಯವಸ್ಥಾಪಕ ಡಾ.ನರಸಿಂಹನ್, ಕಂದಿಕೆರೆ ಡೇರಿ ಅಧ್ಯಕ್ಷ ಎಸ್.ಧನಂಜಯ್, ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರಶಾಂತ್, ತುಮುಲು ನಸಹಾಯಕ ವ್ಯವಸ್ಥಾಪಕ ಎ.ಪಿ.ಯರಗುಂಟಪ್ಪ, ವಿಸ್ತರಣಾಧಿಕಾರಿ ಎಂ.ಎನ್.ಮಹೇಶ್, ಸಿ.ಎಸ್.ರಾಜು, ಆರ್,ವೈ.ಸುನಿಲ್ ಮತ್ತಿತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link