ದಾವಣಗೆರೆ:
ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮೂರು ಗ್ರಾಮಗಳಲ್ಲಿ ಮತದಾರರು ತಮ್ಮ ವಿವಿಧ ಸೌಲಭ್ಯಗಳ ಈಡೇರಿಕೆಗಾಗಿ ಒತ್ತಾಯಿಸಿ, ಮತದಾನ ಬಹಿಷ್ಕರಿಸುವ ತಂತ್ರ ನಡೆಸಿದರು. ಆದರೆ, ಬಳಿಕ ಅಧಿಕಾರಿಗಳ ಮನವೊಲಿಕೆಯಿಂದ ಬಂದು ಮತ ಚಲಾಯಿಸಿದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೊರಗೊಂಡನಹಳ್ಳಿ ಗ್ರಾಮಸ್ಥರು ಕೆರೆಗೆ ನೀರು ತುಂಬಿಸುದಿರುವುದು, ರಸ್ತೆ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸದಿರುವುದನ್ನು ಖಂಡಿಸಿ, ಮತದಾನ ಬಹಿಷ್ಕಾರ ನಡೆಸಿದ್ದರು.
ಆದರೆ, ಈ ವಿಷಯ ತಿಳಿಯುತ್ತಿದ್ದಂತೆ, ಗ್ರಾಮಕ್ಕೆ ದೌಡಾಯಿಸಿದ ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನಿಮ್ಮ ಸಮಸ್ಯೆಯ ಬಗ್ಗೆ ಜಿಲ್ಲಾಧಿಕಾರಿಗಳ ಜನಸ್ಪಂದನ ಸಭೆಯಲ್ಲಿ ಚರ್ಚಿಸಿ ಬಗೆಹರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ, ಮತದಾನ ಬಹಿಷ್ಕಾರವನ್ನು ಹಿಂಪಡೆದು ಬೆಳಿಗ್ಗೆ 10.30ರ ನಂತರ ಮತಚಲಾಯಿಸಿದರು.
ಇನ್ನೂ ಚನ್ನಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎನ್.ಬಸವನಹಳ್ಳಿ ಹಾಗೂ ಹರಪನಹಳ್ಳಿ ತಾಲೂಕಿನ ಕರೆಕಾನಹಳ್ಳಿ ಗ್ರಾಮಸ್ಥರು ಸಹ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮತದಾನ ಬಹಿಷ್ಕರಿಸಿ, ಪ್ರತಿಭಟಿಸುತ್ತಿದ್ದ ವಿಷಯ ತಿಳಿದ ಅಧಿಕಾರಿಗಳು ತಕ್ಷಣವೇ ಆ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಚರ್ಚಿಸಿ, ಚುನಾವಣೆಯ ಬಳಿಕ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಈ ಗ್ರಾಮಗಳ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.