ಚಿಕ್ಕನಾಯಕನಹಳ್ಳಿ
ಮತದಾನ ಒಂದು ಶ್ರೇಷ್ಠ ಹಕ್ಕು, ಯಾವುದೇ ಕಾರಣಕ್ಕೂ ಆ ಹಕ್ಕನ್ನು ಕಳೆದುಕೊಳ್ಳಬೇಡಿ, ಮತದಾನದಿಂದ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಶ್ರೇಷ್ಠ ಆಡಳಿತ ವ್ಯವಸ್ಥೆ ಜಾರಿಗೆ ಬರಲು ಸಹಕರಿಸಿ ಎಂದು ಬಿಇಓ ಕಾತ್ಯಾಯಿನಿ ಹೇಳಿದರು.
ತಾಲ್ಲೂಕಿನ ಹಂದನಕೆರೆ ಹೋಬಳಿ ಬೆಳಗುಲಿ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಮತದಾನ ಜಾಗೃತಿ ಹಕ್ಕು, ವಿ.ವಿ.ಪ್ಯಾಟ್ ಬಳಕೆಯ ಕುರಿತು ನಡೆದ ಜಾಗೃತಿ ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಮಾತನಾಡಿದ ಅವರು, ಉತ್ತಮ ನಾಯಕರನ್ನು ಆಯ್ಕೆ ಮಾಡುವ ಜವಬ್ದಾರಿ ಎಲ್ಲಾ ಪ್ರಜೆಗಳ ಮೇಲಿದೆ, ಮತದಾನವನ್ನು ಸ್ವೇಚ್ಛೆಯಿಂದ ಚಲಾಯಿಸದೆ ಜವಾಬ್ದಾರಿಯುತವಾಗಿ ಚಲಾಯಿಸಿ. 18 ವರ್ಷ ತುಂಬಿದ ಪ್ರತಿ ಪ್ರಜೆಯು ಮತಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಳ್ಳಿ ಆ ಮೂಲಕ ಶೇ100% ಮತದಾನ ಆಗುವಂತೆ ನೋಡಿಕೊಳ್ಳಿ ಎಂದರು.
ವಿ.ವಿ.ಪ್ಯಾಟ್ ವಿದ್ಯುನ್ಮಾನ ಮತಯಂತ್ರದ ಮಾಸ್ಟರ್ ಟ್ರೈನರ್ ಆಗಿ ಆಗಮಿಸಿದ್ದ ಶಿವಪ್ರಸಾದ್ ಮಾತನಾಡಿ, ವಿದ್ಯುನ್ಮಾನ ಮತಯಂತ್ರ ಬಳಕೆಯಿಂದ ಪಾರದರ್ಶಕ ಮತದಾನಕ್ಕೆ ಅನುಕೂಲವಾಗುತ್ತಿದೆ. ಯಾವುದೇ ಊಹಾಪೋಹಕ್ಕೆ ಕಿವಿಗೊಡದೆ ವಿದ್ಯುನ್ಮಾನ ಮತಯಂತ್ರವನ್ನು ಬಳಸಿ ನೀವು ಹಾಕಿದ ಓಟು, ಅಪೇಕ್ಷಿತ ಅಭ್ಯರ್ಥಿಗೆ ಬಿದ್ದಿದೆ ಎಂಬುದನ್ನು ನೀವೇ ನೋಡಿಕೊಳ್ಳಬಹುದು ಎಂದರು.
ಮತದಾನ ಎಂಬುದು ತಮ್ಮ ರಾಜಕೀಯ ನಿಲುವನ್ನು ವ್ಯಕ್ತಪಡಿಸುವ ಕ್ರಮ ಆಗಿದೆ, ತಪ್ಪದೇ ಮತದಾನವನ್ನು ಮಾಡಿ, ಬೇರೆಯವರಿಗೂ ಮತದಾನ ಮಾಡುವಂತೆ ಪ್ರೇರೇಪಿಸಿ, ಈ ಮತದಾನದ ಬಗ್ಗೆ ಅರಿವು ಮೂಡಿಸಿ ಎಂದರು.
ವಿದ್ಯುನ್ಮಾನ ಮತಯಂತ್ರದ ಬಳಕೆಯಿಂದ ತ್ವರಿತ ಹಾಗೂ ನಿಖರ ಪಲಿತಾಂಶ ದೊರೆಯುತ್ತದೆ, ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನವನ್ನು ಸುಲಲಿತಗೊಳಿಸಲು ವಿದ್ಯುನ್ಮಾನ ಮತಯಂತ್ರವನ್ನು ಹಲವಾರು ಪರೀಕ್ಷೆಗಳಿಗೆ ಒಳಪಡಿಸಿ ನಿಖರತೆಯನ್ನು ಖಾತ್ರಿ ಪಡಿಸಿಕೊಂಡು ನಂತರ ಮತದಾನ ಪ್ರಕ್ರಿಯೆಗೆ ಬಳಸಿಕೊಳ್ಳಲಾಗುವುದು ಆದ್ದರಿಂದ ವಿದ್ಯುನ್ಮಾನ ಮತಯಂತ್ರದ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.ಕಾರ್ಯಕ್ರಮದಲ್ಲಿ ಬೆಳಗುಲಿ ಗ್ರಾ.ಪಂ.ಅಧ್ಯಕ್ಷ ಕ್ಯಾತಪ್ಪ, ಸದಸ್ಯ ಈಶ್ವರಮೂರ್ತಿ, ಬಿ.ಆರ್.ಸಿ ಸಂಗಮೇಶ್, ಮುಖ್ಯೋಪಾಧ್ಯಾಯರುಗಳಾದ ನಾಗರಾಜು, ಶಶಿಧರ್, ಶಿವಣ್ಣ, ಬಿ.ಸಿ.ಕೃಷ್ಣಮೂರ್ತಿ ಹಾಗೂ ಜಿ.ಧನಂಜಯ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








