ಶೇ.100ರ ಮತದಾನ ಗುರಿ ದಾಖಲೆಗೆ ಸಹಕರಿಸಿ : ಚಂದ್ರಶೇಖರ್

ಚಳ್ಳಕೆರೆ

        ಪ್ರಸ್ತುತ ಈ ತಿಂಗಳ 18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.100ರ ಮತದಾನದ ಗುರಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದ್ದು, ಈ ನಿಟ್ಟಿನಲ್ಲಿ ಅಧಿಕಾರಿ ವರ್ಗ ಹಾಗೂ ನೌಕರರ ವರ್ಗ ಸಹಕಾರ ನೀಡಬೇಕೆಂದು ತಾಲ್ಲೂಕು ಸ್ವೀಫ್ ಸಮಿತಿ ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಯಾದ ಎಚ್.ಎಸ್. ಚಂದ್ರಶೇಖರ್ ತಿಳಿಸಿದರು.

         ಅವರು, ಗುರುವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ತಮ್ಮ ಕಚೇರಿಯ ಸಿಬ್ಬಂದಿ ವರ್ಗ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮೋಟಾರ್ ಬೈಕ್ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.

         ಮತದಾನ ಜಾಗೃತಿ ಅಭಿಯಾನ ನಿರಂತರವಾಗಿ ನಡೆಯುತ್ತಿದ್ದು, ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ಮೂಲಕ ಮತದಾನ ಜಾಗೃತಿಯನ್ನು ಮೂಡಿಸಲಾಗುತ್ತಿದೆ.

          ಪ್ರತಿಯೊಬ್ಬ ಮತದಾರರನು ಸ್ವ ಇಚ್ಚೆಯಿಂದ ಮತ ಚಲಾಯಿಸಲೇಬೇಕೆಂದು ಅವರು ಮನವಿ ಮಾಡಿದರು. ಈಗಾಗಲೇ ಹಂತ ಹಂತವಾಗಿ ವಿವಿಧ ಇಲಾಖೆಗಳು ಸಹ ಮತದಾನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಈ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಂತಸ ವಿಷಯವೆಂದರು.

         ತಾಲ್ಲೂಕು ಪಂಚಾಯಿತಿ ಪ್ರಭಾರ ವ್ಯವಸ್ಥಾಪಕ ತಿಪ್ಪೇಸ್ವಾಮಿ ಮಾತನಾಡಿ, ಮೋಟಾರ್ ಬೈಕ್ ಜಾಗೃತಿ ಜಾಥ ನಡೆಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಕಚೇರಿಯ ಎಲ್ಲಾ ಸಿಬ್ಬಂದಿಗಳು ಪಿಡಿಒಗಳು ಹಾಗೂ ಗಣಕಯಂತ್ರ ನಿರ್ವಾಹಕರು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಿದ್ದು, ಅವರಿಗೆ ಸ್ವೀಪ್ ಸಮಿತಿ ಪರವಾಗಿ ಕೃತಜ್ಞತೆಗಳನ್ನು ತಿಳಿಸುವುದಾಗಿ ತಿಳಿಸಿದರು.

          ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳ ಜೊತೆಯಲ್ಲಿ ಗಣಕಯಂತ್ರ ನಿರ್ವಾಹಕರು, ಕಚೇರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಪ್ರಮಾಣ ವಚನವನ್ನು ಸಹ ಬೋಧಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap