ಚಳ್ಳಕೆರೆ
ಲೋಕಸಭಾ ಚುನಾವಣೆ ಮತದಾನ ಮಾಡಲು ಇನ್ನು ಕೇವಲ 5 ದಿನಗಳು ಮಾತ್ರ ಬಾಕಿದ್ದು, ಈ ಬಾರಿ ಪ್ರತಿಯೊಬ್ಬ ಮತದಾರನು ಮತ ಚಾಲಾಯಿಸುವ ಮೂಲಕ ಶೇ.100ರ ಮತದಾನ ಗುರಿಸಾಧನೆಗೆ ನೆರವಾಗಬೇಕು ಎಂದು ತಾಲ್ಲೂಕು ಸ್ಪೀಫ್ ಸಮಿತಿ ಅಧ್ಯಕ್ಷ, ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಚಂದ್ರಶೇಖರ್ ತಿಳಿಸಿದರು.
ಅವರು, ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ತಾಲ್ಲೂಕು ಸ್ವೀಫ್ ಸಮಿತಿ ಸಹಯೋಗದಲ್ಲಿ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈಗಾಗಲೇ ಮತದಾನ ಕುರಿತು ಹಂತ ಹಂತಗಳಲ್ಲಿ ಮತದಾರರಿಗೆ ಜಾಗೃತಿಯನ್ನು ಮೂಡಿಸಲಾಗಿದೆ. ನಗರ ಹಾಗೂ ಗ್ರಾಮೀಣ ಮಟ್ಟದಲ್ಲೂ ಸಹ ಪ್ರತಿಯೊಬ್ಬ ಮತದಾರನು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ. ತಾಲ್ಲೂಕು ಸ್ಪೀಫ್ ಸಮಿತಿ ವತಿಯಿಂದ ವಿಶೇಷ ಮನವಿಯನ್ನು ಮಾಡಲಾಗಿದೆ. ಏ.18ರ ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ಸಿಗೊಳಿಸುವಂತೆ ಮನವಿ ಮಾಡಿದರು.
ತಾಲ್ಲೂಕು ಸ್ಪೀಫ್ ಸಮಿತಿ ನಿರ್ದೇಶಕ, ಪೌರಾಯುಕ್ತ ಪರಮೇಶ್ವರಪ್ಪ ಮಾತನಾಡಿ, ಕೇವಲ ಸರ್ಕಾರದ ವತಿಯಿಂದ ಮಾತ್ರ ಇಂತಹ ಜಾಗೃತಿ ಕಾರ್ಯಕ್ರಮ ನಡೆಯುತ್ತಿಲ್ಲ. ಬದಲಾಗಿ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವಿಟ್ಟು ಹಲವಾರು ಸಂಘ ಸಂಸ್ಥೆಗಳು ಈ ಜಾಗೃತಿ ಕಾರ್ಯಕ್ರಮದಲ್ಲಿ ಕೈಜೋಡಿಸಿವೆ. ಪ್ರತಿಯೊಬ್ಬ ಮತದಾರನು ಮತದಾನದ ಮೂಲಕ ಯೋಗ್ಯ ವ್ಯಕ್ತಿಯನ್ನು ಆರಿಸಿ ಸಂಸತ್ ಭವನಕ್ಕೆ ಕಳುಹಿಸಬೇಕಿದೆ.
ನಮಗೆ ಇದು ಸಂವಿಧಾನ ಬದ್ದವಾಗಿ ಬಂದ ಹಕ್ಕಾಗಿದ್ದು, ನಮ್ಮ ಹಕ್ಕನ್ನು ಚಲಾಯಿಸಲು ನಾವು ಎಂದೂ ಹಿಂದೇಟು ಹಾಕಬಾರದು. ಮತದಾನದಲ್ಲಿ ಹೆಚ್ಚು ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿಶೇಷ ಮೆರಗನ್ನು ತರೋಣವೆಂದರು.
ಶುಕ್ರವಾರ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಆಶಾ, ಅಂಗನವಾಡಿ, ಬೆಸ್ಕಾಂ, ಸ ಹಾಗೂ ಸ್ತ್ರೀಶಕ್ತಿ ಸಂಘಗಳ ಕಾರ್ಯಕರ್ತರು ಭಾಗವಹಿಸಿದ್ದರು. ಪ್ರವಾಸಿಮಂದಿರದಿಂದ ಹೊರಟ ಮೆರವಣಿಗೆ ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ನೆಹರೂ ಸರ್ಕಲ್ ತಲುಪಿತು. ಅಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ವ ಮತದಾರರು ಮತದಾನದಲ್ಲಿ ಪಾಲ್ಗೊಂಡು ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ‘ನಮ್ಮೆಲ್ಲರ ನಡೆ ಮತದಾನದ ಕಡೆ’ ಎಂಬ ಘೋಷಣೆಗಳನ್ನು ಕೂಗಲಾಯಿತು.
ಜಾಗೃತಿ ಕಾರ್ಯಕ್ರಮದಲ್ಲಿ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಹನುಮಪ್ಪ, ಆರೋಗ್ಯ ಇಲಾಖೆಯ ಎಸ್.ಬಿ.ತಿಪ್ಪೇಸ್ವಾಮಿ, ಬೆಸ್ಕಾಂ ಇಲಾಖೆ ಇಂಜಿನಿಯರ್ ಪೂಜಾ, ಸಿ.ನಾಗರಾಜು, ತಾಲ್ಲೂಕು ಪಂಚಾಯಿತಿ ಅಧಿಕಾರಿ ತಿಪ್ಪೇಸ್ವಾಮಿ ಮುಂತಾದವರು ಜಾಥದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








