ಚಳ್ಳಕೆರೆ
ಪ್ರತಿನಿತ್ಯ ನಗರವನ್ನು ಸ್ವಚ್ಚಗೊಳಿಸುವ ಮೂಲಕ ಉತ್ತಮ ವಾತಾವರಣವನ್ನು ನಿರ್ಮಿಸುವ ಪೌರ ಕಾರ್ಮಿಕರು ಮತದಾನ ಜಾಗೃತಿ ರ್ಯಾಲಿ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಏ.18ರಂದು ನಡೆಯುವ ಮತದಾನದಲ್ಲಿ ಪೂರ್ವ ಪ್ರಮಾಣದಲ್ಲಿ ಪಾಲ್ಗೊಳ್ಳುವಂತೆ ಬಿತ್ತಿ ಪತ್ರಗಳ ಮೂಲಕ ಮನವಿ ಮಾಡಿದರು.
ಮತದಾನ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ತಾಲ್ಲೂಕು ಸ್ವೀಫ್ ಸಮಿತಿ ನಿರ್ದೇಶಕ, ಪೌರಾಯುಕ್ತ ಜೆ.ಟಿ.ಹನುಮಂತರಾಜು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ನಿರ್ದೇಶನದಂತೆ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ, ಜಿಲ್ಲಾ ಯೋಜನಾಧಿಕಾರಿ ಎಸ್.ರಾಜಶೇಖರ್ ಮಾರ್ಗದರ್ಶನದಲ್ಲಿ ನಗರಸಭೆಯ ಕಾರ್ಯಾಲಯದ ಅಧಿಕಾರಿಗಳು, ಇಂಜಿನಿಯರ್‍ಗಳು, ಸಿಬ್ಬಂದಿ ವರ್ಗ ಹಾಗೂ ಪೌರ ಕಾರ್ಮಿಕರು ನಗರದ ಎಲ್ಲಾ ವಾರ್ಡ್‍ಗಳಲ್ಲಿ ಸಂಚರಿಸಿ ಪ್ರತಿಯೊಬ್ಬ ಮತದಾರರನ್ನು ಮತ ಚಲಾಯಿಸುವಂತೆ ಮನವಿ ಮಾಡಲಿದ್ಧಾರೆ. ಈ ಹಿನ್ನೆಲೆಯಲ್ಲಿ ನಗರಸಭೆಯ ಎಲ್ಲಾ ನೌಕರರು ವಾಹನಗಳ ಮೂಲಕ ಜಾಗೃತಿ ಜಾಥದಲ್ಲಿ ಪಾಲ್ಗೊಂಡಿದ್ಧಾರೆ. ಪ್ರತಿಯೊಬ್ಬ ನಾಗರೀಕನಿಗೂ ಮತದಾನದ ಮೌಲ್ಯವನ್ನು ತಿಳಿಸಿ ಮತ ಚಲಾಯಿಸುವಂತೆ ಮನವಿ ಮಾಡಲಾಗುವುದು. ಜಾಗೃತಿ ಜಾಥದಲ್ಲಿ ನಗರಸಭೆಯ ಎಲ್ಲಾ ಸಿಬ್ಬಂದಿ ವರ್ಗ ಭಾಗವಹಿಸಿದೆ ಎಂದರು.
ಕಂದಾಯಾಧಿಕಾರಿ ವಿ.ಈರಮ್ಮ ಮಾತನಾಡಿ, ಜಾಗೃತಿ ಜಾಥ ನಗರದ ಚಿತ್ರದುರ್ಗ ರಸ್ತೆ, ಅಂಬೇಡ್ಕರ್ ವೃತ್ತ, ನೆಹರೂ ಸರ್ಕಲ್, ಪಾದಗಟ್ಟೆ, ಹಳೇಟೌನ್, ಪಾವಗಡ ರಸ್ತೆ, ಮಹದೇವಿ ರಸ್ತೆ, ಮದಕರಿನಗರ, ಬೆಂಗಳೂರು ರಸ್ತೆ, ಬಸವೇಶ್ವರ ವೃತ್ತ, ಗಾಂಧಿನಗರ, ಅಂಬೇಡ್ಕರ್ ನಗರ, ಜನತಾ ಕಾಲೋನಿ ಮೂಲಕ ಪ್ರವಾಸಿ ಮಂದಿರದ ಬಳಿ ಆಗಮಿಸಿ ಜಾಥವನ್ನು ಮುಕ್ತಾಯಗೊಳಿಸಲಾಗಿದೆ. ನಗರದ ಎಲ್ಲಾ ರಸ್ತೆಗಳಲ್ಲಿ ಸಾರ್ವಜನಿಕರು ನಿಂತು ಮತದಾನ ಜಾಗೃತಿ ಜಾಥವನ್ನು ವೀಕ್ಷಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯ ಮತಗಳು ಚಲಾವಣೆಯಾಗಬೇಕೆಂಬ ದೃಷ್ಠಿಯಿಂದ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಜಾಗೃತಿ ಜಾಥದಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ಯಾಮಲ, ವಿನಯ್, ಲೋಕೇಶ್, ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬು, ಸಮನ್ವಯಾಧಿಕಾರಿ ಪಿ.ಪಾಲಯ್ಯ, ತಿಪ್ಪೇಸ್ವಾಮಿ, ಮಂಜುನಾಥ, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ನಿರ್ಮಲ, ಕಿರಿಯ ಆರೋಗ್ಯ ನಿರೀಕ್ಷಕ ಗಣೇಶ್, ವಿಶ್ವನಾಥ, ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
