ದಾವಣಗೆರೆ
ಲೋಕಸಭಾ ಚುನಾವಣೆ-2019 ರ ಅಂಗವಾಗಿ ಸ್ವೀಪ್ ವತಿಯಿಂದ ಇಂದು ನಗರದ ಹೈಸ್ಕೂಲ್ ಮೈದಾನದಿಂದ ಏರ್ಪಡಿಸಲಾಗಿದ್ದ ಮಹಿಳಾ ಕಾರ್ ರ್ಯಾಲಿಯನ್ನು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಇವರು ಚುನಾವಣಾ ಸಾಮಾನ್ಯ ವೀಕ್ಷಕರಾದ ಆನಂದ್ ಶರ್ಮಾ, ಜಿ.ಪಂ. ಸಿಇಓ ಹೆಚ್.ಬಸವರಾಜೇಂದ್ರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಚೇತನ್.ಆರ್ ಇವರ ಸಮ್ಮುಖದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು.
ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಮಾತನಾಡಿ, ಸಮಾಜದಲ್ಲಿ ಹೆಣ್ಣಿನ ಪಾತ್ರ ಬಹುಮುಖ್ಯವಾಗಿದ್ದು, ಮತಜಾಗೃತಿ ಕುರಿತು ಮಹಿಳೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬಹುದು. ಈ ಹಿನ್ನೆಲೆಯಲ್ಲಿ ವಿನೂತನವಾಗಿ ಈ ಮಹಿಳಾ ಕಾರ್ ರ್ಯಾಲಿ ಆಯೋಜಿಸಲಾಗಿದೆ. ಯಶಸ್ವಿ ಮತದಾನಕ್ಕೆ ಇಂತಹ ರ್ಯಾಲಿಗಳು ಸಹಕಾರಿಯಾಗಲಿವೆ ಎಂದರು.
ಜಿ.ಪಂ ಸಿಇಓ ಹೆಚ್.ಬಸವರಾಜೇಂದ್ರ ಮಾತನಾಡಿ, ಮಹಿಳೆಯರಿಗೆ ಮಕ್ಕಳು, ಕುಟುಂಬದ ಮನವೊಲಿಸುವ ಗುಣವಿದ್ದು, ಮತದಾನ ಜಾಗೃತಿಯಲ್ಲಿ ಇವರ ಪಾತ್ರ ಮಹತ್ವದ್ದಾಗಿರುತ್ತದೆ. ಈ ನಿಟ್ಟಿನಲ್ಲಿ ಈ ಮಹಿಳಾ ಕಾರ್ ರ್ಯಾಲಿ ಪರಿಣಾಮಕಾರಿಯಾಗಲಿದೆ ಎಂದರು.
ಸಾರಿಗೆ ಪ್ರಾದೇಶಿಕ ಅಧಿಕಾರಿ ಲಕ್ಷ್ಮೀಕಾಂತ್ ಭಿ.ನಾಲವಾರ ಮಾತನಾಡಿ, ರ್ಯಾಲಿಯಲ್ಲಿ ಸುಮಾರು 40 ಕ್ಕೂ ಅಧಿಕ ಪರವಾನಗಿ ಹೊಂದಿದ ಮಹಿಳೆಯರು ಕಾರುಗಳನ್ನು ಚಲಾಯಿಸುವರು. ಈ ರ್ಯಾಲಿಯು ದಾವಣಗೆರೆಯಿಂದ ಚನ್ನಗಿರಿ, ಹರಿಹರ ಮತ್ತು ಹೊನ್ನಾಳಿ ತಾಲ್ಲೂಕುಗಳ ಮಾರ್ಗವಾಗಿ ಸಾಗಿ ಪುನಃ ದಾವಣಗೆರೆ ತಲುಪಲಿದ್ದು ಸುಮಾರು 200 ಕಿ.ಮೀ ಸಾಗಿ ಮತದಾನದ ಕುರಿತು ಜಾಗೃತಿ ಮೂಡಿಸಲಿದೆ ಎಂದರು.
ಕಾರ್ ರ್ಯಾಲಿ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ಡೊಳ್ಳು ಕುಣಿತ, ನಂದಿಕೋಲು ಸಮಾಳ, ಹಗಲುವೇಷ ಮತ್ತು ಗೊಂಬೆ ಧರಿಸಿದ ಕಲಾತಂಡಗಳು ಪಾಲ್ಗೊಂಡಿದ್ದವು.
ಕಲಾತಂಡದ ಮಹಿಳೆಯರು ಪ್ರತಿ ಮತವೂ ಅಮೂಲ್ಯ ತಪ್ಪದೇ ಮತ ಚಲಾಯಿಸಿ, ಮತದಾನ ಕೇಂದ್ರದಲ್ಲಿರುವ ಸೌಲಭ್ಯ ದಿವ್ಯಾಂಗರಿಗೆ ಮತ್ತು ಹಿರಿಯ ನಾಗರಿಕರಿಗೆ ಮೊದಲ ಆದ್ಯತೆ ನೀಡಲಾಗುವುದು. ನಮ್ಮದು ಕೇವಲ ಒಂದು ಮತವಲ್ಲ! ಅದು ಪ್ರಜಾಪ್ರಭುತ್ವದ ಮೌಲ್ಯ. ನಮ್ಮ ನಡೆ ಮತಗಟ್ಟೆಯ ಕಡೆ ಎಂಬ ಇತ್ಯಾದಿ ಮತಜಾಗೃತಿ ಫಲಕಗಳನ್ನು ಪ್ರದರ್ಶಿಸುತ್ತಾ ರ್ಯಾಲಿಯಲ್ಲಿ ಸಾಗಿದರು.
ರ್ಯಾಲಿ ಕಾರ್ಯಕ್ರಮದಲ್ಲಿ ಜಿ.ಪಂ. ಉಪ ಕಾರ್ಯದರ್ಶಿ ಭೀಮಾನಾಯ್ಕ, ಪಾಲಿಕೆ ಆಯುಕ್ತರು ಹಾಗೂ ಸಹಾಯಕ ಚುನಾವಣಾಧಿಕಾರಿ ವೀರೇಂದ್ರ ಕುಂದಗೋಳ, ಡಿಡಿಪಿಯು ಶೇಖರಪ್ಪ, ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ನಗರ ಡಿವೈಎಸ್‍ಪಿ ನಾಗರಾಜ್, ಸಿಪಿಐ ಆನಂದ್, ದಾವಣಗೆರೆ ತಾ.ಪಂ ಇಓ ಎಂ.ವಿ.ಚಳಗೇರಿ, ಸಾರಿಗೆ ನಿರೀಕ್ಷಕರಾದ ಅನಿಲ್ ಮಾಸೂರ್, ಖಾಲಿದ್, ಶಾನಭಾಗ್, ಶಿವಕುಮಾರ್, ಜಿ ಪಂ ಸಿಬ್ಬಂದಿಗಳು, ಶಿಕ್ಷಣ ಇಲಾಖೆ ಅಧಿಕಾರಿ/ಸಿಬ್ಬಂದಿ ವರ್ಗದವರು,
ಕಾರ್ ರ್ಯಾಲಿ ಮಾರ್ಗ : ನಗರದ ಹೈಸ್ಕೂಲ್ ಮೈದಾನದಿಂದ ಬೆಳಿಗ್ಗೆ 8.20 ಕ್ಕೆ ಕಾರ್ ರ್ಯಾಲಿ ಪ್ರಾರಂಭವಾಗಿ ಪಿ.ಬಿ ರಸ್ತೆ, ಗಾಂಧಿ ಸರ್ಕಲ್, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಬಾಡ ಕ್ರಾಸ್ ಮಾರ್ಗವಾಗಿ ಬೆಳಿಗ್ಗೆ 9.56 ಕ್ಕೆ ಸಂತೇಬೆನ್ನೂರು ಸೇರಲಿದೆ. ನಂತರ ಸಂತೇಬೆನ್ನೂರಿನಿಂದ ಹೊರಟು ಬೆಳಿಗ್ಗೆ 10.30 ಕ್ಕೆ ಚನ್ನಗಿರಿ, 11.30 ಕ್ಕೆ ಸೂಳೆಕೆರೆ, ಮಧ್ಯಾಹ್ನ 12.50 ಕ್ಕೆ ಬಸವಾಪಟ್ಟಣ, 1.25 ಕ್ಕೆ ಹೊನ್ನಾಳಿ ತಲುಪಿ ಹೊನ್ನಾಳಿಯ ಎ.ಪಿ.ಎಂಸಿ ವರೆಗೆ ತೆರಳಿ, ಎರಡು ಗಂಟೆಗಳ ಕಾಲ ಹೊನ್ನಾಳಿಯ ಪ್ರವಾಸಿ ಮಂದಿರದಲ್ಲಿ ನಿಲ್ಲಲಿದೆ. ನಂತರ ಮಧ್ಯಾಹ್ನ 3.30 ಕ್ಕೆ ಹೊನ್ನಾಳಿಯಿಂದ ಹೊರಟು ಸಂಜೆ 4 ಗಂಟೆಗೆ ಮಲೇಬೆನ್ನೂರು, 4.40 ಕ್ಕೆ ಹರಿಹರ, 5.05 ನಿಮಿಷಕ್ಕೆ ದಾವಣಗೆರೆಯ ಹೈಸ್ಕೂಲ್ ಮೈದಾನವನ್ನು ತಲುಪಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
