ತುಮಕೂರು
“ಗುರುವಾರ ಮತದಾನದ ಶೇಕಡಾವಾರು ಪ್ರಮಾಣ (ಪೊಲೀಂಗ್ ಪರ್ಸೆಂಟೇಜ್) ಎಷ್ಟಾಗಬಹುದು? ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾದರೆ ಯಾರಿಗೆ ಲಾಭ ಯಾರಿಗೆ ನಷ್ಟ? ಕಡಿಮೆಯಾದರೆ ಯಾರಿಗೆ ಲಾಭ-ಯಾರಿಗೆ ನಷ್ಟ?”- ಇದು ಲೋಕಸಭಾ ಚುನಾವಣೆಯ ಮುನ್ನಾದಿನವಾದ ಬುಧವಾರ ತುಮಕೂರು ನಗರದ ರಾಜಕೀಯ ವಲಯಗಳಲ್ಲಿ ಮತ್ತು ರಾಜಕೀಯಾಸಕ್ತರ ವಲಯದಲ್ಲಿ ಚರ್ಚೆಗೊಳ್ಳುತ್ತಿರುವ ಸಂಗತಿ.
“ಒಂದೆಡೆ ಬಿರುಬಿಸಿಲು… ಮತ್ತೊಂದೆಡೆ ಸಾಲು-ಸಾಲು ರಜೆಗಳು (ಏಪ್ರಿಲ್ 17 ಮಹಾವೀರ ಜಯಂತಿ ರಜೆ, ಏಪ್ರಿಲ್ 18 ಚುನಾವಣೆಗಾಗಿ ರಜೆ, ಏಪ್ರಿಲ್ 19 ಗುಡ್ ಫ್ರೈ ಡೇ ರಜೆ, ಬಳಿಕ ಶನಿವಾರ ಮತ್ತು ಭಾನುವಾರ) ಇದ್ದು, ಇದು ಮತದಾರರ ಮೇಲೆ ಪರಿಣಾಮ ಬೀರುವುದೇ?” ಎಂಬ ಆತಂಕ ರಾಜಕೀಯ ವಲಯವನ್ನು ಕಾಡುತ್ತಿದೆ.
“2014 ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟಾರೆ ಶೇ. 72.49 ರಷ್ಟು ಮತದಾನ ಆಗಿತ್ತು. ಪ್ರಸ್ತುತ 2019ರ ಲೋಕಸಭಾ ಚುನಾವಣೆಯಲ್ಲಿ ಏನಾದೀತು? ಎಷ್ಟು ಪ್ರಮಾಣದ ಮತದಾನವಾದೀತು?” ಎಂಬ ಲೆಕ್ಕಾಚಾರ ರಾಜಕೀಯ ವಲಯವನ್ನು ತುದಿಗಾಲಿನಲ್ಲಿ ನಿಲ್ಲಿಸಿದೆ.
“ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಯಾವ ಕ್ಷೇತ್ರವು ಯಾರಿಗೆ ಅತಿಹೆಚ್ಚು ಮತಗಳನ್ನು (ಲೀಡ್) ಕೊಡಬಹುದು?” ಎಂಬುದೂ ಬರಿ ಚರ್ಚೆಯಾಗುತ್ತಿರುವ ವಿಷಯವಾಗಿದೆ.
“ಜಿಲ್ಲೆಯಾದ್ಯಂತ ಬಿಸಿಲಿನ ತಾಪ ಅತ್ಯಧಿಕವಾಗಿದೆ. ಜನರು ಸಕಾಲಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಬೇಕು . ಆದರೆ ಎಲ್ಲರೂ ಸಕಾಲಕ್ಕೆ ಮತಗಟ್ಟೆಗೆ ಬರುವರೇ? ಬಿಸಿಲು ಅಧಿಕವಾಗಿದೆಯೆಂದು ಮನೆಯಲ್ಲೇ ಉಳಿಯುವರೇ? ಅಥವಾ ರಜೆಯಿದೆ ಎಂದು ಪ್ರವಾಸ ಹೋಗಿಬಿಡುವರೇ?” ಎಂಬ ಪ್ರಶ್ನೆಗಳು ಚರ್ಚೆಯಲ್ಲಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ