ಹರಿಹರ:
ನಗರದ ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ಮತದಾರರ ಪಟ್ಟಿ ನೀಡುವಲ್ಲಿ ವಿಳಂಬ ಮಾಡಿರುವ ಹಿನ್ನೆಲೆ ಮಾಜಿ ಶಾಸಕ ಬಿ.ಪಿ. ಹರೀಶ್ ಹಾಗೂ ಅನೇಕ ಆಕಾಂಕ್ಷಿಗಳು ಶುಕ್ರವಾರ, ಚುನವಣಾ ಆಯೋಗ ಕ್ರಮವನ್ನು ಖಂಡಿಸಿ, ಪ್ರತಿಭಟಿಸಿ ನಂತರ ಮತದಾರರ ಪಟ್ಟಿ ಪಡೆದರು.
ಆಕಾಂಕ್ಷಿ ಎಚ್. ಮೋಹನ್ ಮಾತನಾಡಿ, ಕಳೆದ ನಾಲ್ಕೈದು ದಿನದಿಂದಲೂ ಮತದಾರರ ಪಟ್ಟಿಗೆ ತಾಲ್ಲೂಕು ಕಚೇರಿಗೆ ಅಲೆದಾಡುತ್ತಿದ್ದು, ಪರಿಷ್ಕರಣೆ ನಡೆಯುತ್ತಿದ್ದು, ಇನ್ನೇನು ಅಂತಿಮಗೊಳಿಸಿ ನೀಡುತ್ತೇವೆ ಎನ್ನುತ್ತಲೆ ಸಾಗಿದ್ದಾರೆ. ತಮ್ಮ ವಾರ್ಡ್ಗಳಲ್ಲಿ ಎಷ್ಟು ಮತಗಳಿವೆ, ಪರುಷರೆಷ್ಟು, ಮಹಿಳೆಯರೆಷ್ಟು ಎಂಬುದು ಹೋಗಲಿ ಕನಿಷ್ಟ ಸೂಚಕರ ಭಾಗಸಂಖ್ಯೆ, ಕ್ರಮ ಸಂಖ್ಯೆಯೂ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಬಿ.ಪಿ. ಹರೀಷ್ ಮಾತನಾಡಿ, ಪೂರ್ವ ಸಿದ್ಧತೆಗಳಿಲ್ಲದೇ, ಚುನಾವಣೆಗಳನ್ನು ಘೋಷಣೆ ಮಾಡಿರುವ ರಾಜ್ಯ ಚುನಾವಣೆ ಆಯೋಗದ ಕ್ರಮ ಖಂಡನಾರ್ಹ. ನಾಮಪತ್ರ ಸಲ್ಲಿಕೆಗೆ ನಿಗದಿಯಾದ ದಿನಾಂಕದ ಮುನ್ನ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರಿಗೆ ಹಾಗೂ ಆಕಾಂಕ್ಷಿಗಳಿಗೆ ಮತದಾರರ ಪಟ್ಟಿ ನೀಡಬೇಕಾಗಿರುವುದು ಆಯೋಗದ ಕರ್ತವ್ಯ. ಆದರೆ, ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಆಯೋಗ ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾಮಪತ್ರ ಸಲ್ಲಿಕೆಗೆ ನಿಗದಿಯಾದ ಮೊದಲ ದಿನ ನಾಮಪತ್ರ ಸಲ್ಲಿಸ ಬಯಸುವ ಅಭ್ಯರ್ಥಿಗಳಿಗೆ ಆಯೋಗದ ವಿಳಂಬ ನೀತಿಯಿಂದ ಅಡ್ಡಿಯಾಗಿದೆ. ಬಿಜೆಪಿ ನಗರ ಘಟಕದಿಂದ ಆಯೋಗದ ಕ್ರಮವನ್ನು ಖಂಡಿಸಿ ಮತದಾರರ ಪಟ್ಟಿಯನ್ನು ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ತಹಶೀಲ್ದಾರ್ ಯು. ನಾಗರಾಜ್ ಮಾತನಾಡಿ, ಪೂರಕ ಪಟ್ಟಿಯಲ್ಲಿ ಸೇರ್ಪಡೆ ಹಾಗೂ ಬಿಡತಕ್ಕುವುಗಳ ಪಟ್ಟಿಯ ಪರಿಷ್ಕರಣೆಯಲ್ಲಿ ತಯಾರಿಕೆಯಲ್ಲಿ ಹೆಚ್ಚುವರಿ ಸಮಯ ವ್ಯಯಗೊಂಡ ಕಾರಣ ಮತದಾರರ ಪಟ್ಟಿ ನೀಡುವಲ್ಲಿ ತಡವಾಗಿದೆ ಎಂದು ಸ್ಪಷ್ಟನೆ ನೀಡಿದರು.ಅಂತಿಮ ಮತದಾರರ ಪಟ್ಟಿಯನ್ನು ವಾರ್ಡ್ವಾರು ವಿಂಗಡಿಸಿ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರಿಗೆ ತಲುಪಿಸಲಾಗಿದೆ. ನಿಗದಿ ಪಡಿಸಿದ ಸಮಯಕ್ಕೆ ಮತದಾರ ಪಟ್ಟಿ ತಯಾರಿಕೆ ಪೂರ್ಣಗೊಳಿಸದ ಸಿಬ್ಬಂದಿಗೆ ನೋಟಿಸ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ