ಚುನಾವಣಾ ಮತದಾನಕ್ಕೆ ವ್ಯಾಪಕ ಸಿದ್ಧತೆ

ತುಮಕೂರು

         ಏಪ್ರಿಲ್ 18ರಂದು ನಡೆಯುವ ತುಮಕೂರು ಲೋಕಸಭಾ ಚುನಾವಣೆ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮುಕ್ತ ಮತ್ತು ಶಾಂತಿಯುತ ಮತದಾನಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ.

       ಮತಗಟ್ಟೆ ಸಿಬ್ಬಂದಿಗಳು ಮತಯಂತ್ರ ಹಾಗೂ ವಿವಿಪ್ಯಾಟ್‍ಗಳೊಂದಿಗೆ ತಮಗೆ ನಿಯೋಜಿಸಿದದ ಮತಗಟ್ಟೆಗಳಿಗೆ ತಲುಪಿಸಿದ್ದಾರೆ. ಚುನಾವಣಾ ಮತದಾನವು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ.

       ಇಂದು ನಡೆಯುವ ಚುನಾವಣಾ ಮತದಾನದಲ್ಲಿ ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 803006 ಪುರುಷ, 804874 ಮಹಿಳೆಯರು, ಇತರೆ 120 ಒಟ್ಟು 1608000 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ತಿಳಿಸಿದ್ದಾರೆ.

        ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಜಿಲ್ಲೆಯ ಶಿರಾ ಹಾಗೂ ಪಾವಗಡ ವಿಧಾನ ಸಭಾ ವ್ಯಾಪ್ತಿಯಲ್ಲಿ 210651 ಪುರುಷರು, 200199 ಮಹಿಳೆಯರು, 17 ಇತರೆ ಮತದಾರರು ಸೇರಿದಂತೆ ಒಟ್ಟು 410867 ಮತದಾರರಿದ್ದಾರೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ 96670 ಪುರುಷರು, 94228 ಮಹಿಳೆಯರು, ಇತರೆ 15 ಮಂದಿ ಸೇರಿದಂತೆ ಒಟ್ಟು 190913 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

       ತುಮಕೂರು ಲೋಕಸಭಾ ವ್ಯಾಪ್ತಿಯಲ್ಲಿ 1907 ಮತಗಟ್ಟೆಗಳು, ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯಲ್ಲಿ 513 ಮತಗಟ್ಟೆಗಳು, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 264 ಮತಗಟ್ಟೆಗಳು ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ2684 ಮತಗಟ್ಟೆಗಳಲ್ಲಿ ಚುನಾವಣಾ ಮತದಾನ ನಡೆಯಲಿದೆ.

      ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ 4100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಸುರಕ್ಷತೆಗಾಗಿ ಬಳಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಚುನಾವಣಾ ಸಿಬ್ಬಂದಿಯನ್ನು ಮತಗಟ್ಟೆಗೆ ಕರೆದುಕೊಂಡು ಹೋಗಲು 93 ಮಿನಿಬಸ್‍ಗಳು, 425 ಬಸ್ಸು, 124 ಜೀಪು/ಬುಲೇರೋ/ಟವೆರಾ ಸೇರಿದಂತೆ 642 ವಾಹನಗಳನ್ನು ಬಳಸಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ 22 ಸಖಿ ಮತಗಟ್ಟೆಗಳು:-

      ಮತಗಟ್ಟೆಯಲ್ಲಿ ಎಲ್ಲಾ ಮಹಿಳಾ ಸಿಬ್ಬಂದಿಗಳನ್ನು ಒಳಗೊಂಡಿರುವ ಮಹಿಳಾ ಸ್ನೇಹಿ “ಸಖಿ ಮತಗಟ್ಟೆ”ಗಳನ್ನು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಲಾ 2ರಂತೆ ಸ್ಥಾಪಿಸಲಾಗಿದೆ.

      ಸಾಮಾನ್ಯ ಮತಗಟ್ಟೆಗಿಂತ ವಿಶೇಷವಾಗಿ, ವಿನ್ಯಾಸಗೊಂಡಿರುವ ಈ ಸಖಿ ಮತಗಟ್ಟೆಗಳನ್ನು ಜಿಲ್ಲೆಯ ಪ್ರತಿ ವಿಧಾನಸಬಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 2ರಂತೆ 22 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

       ಚುನಾವಣಾ ಮತದಾನದಲ್ಲಿ ನಿರತವಾಗಿರುವ ಸಿಬ್ಬಂದಿಗಳ ಯೋಗಕ್ಷೇಮಕ್ಕೂ ಒತ್ತು ನೀಡಿದ್ದು, ಎಲ್ಲಾ ಮತಗಟ್ಟೆಗಳಲ್ಲಿ ಸಿಬ್ಬಂದಿಗೆ ಕುಡಿಯುವ ನೀರು, ಉತ್ತಮ ಆಹಾರ, ಶೌಚಾಲಯ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ, ಹಾಗೂ ಪ್ರಥಮ ಚಿಕಿತ್ಸೆ ಕಿಟ್ ಅನ್ನು ಪ್ರತಿ ಮತಗಟ್ಟೆಗೆ ನೀಡಿದ್ದು, ಪ್ಯಾರಾಸಿಟಾಮಲ್, ರ್ಯಾಂಟಕ್, ಬ್ಯಾಂಡೆಜ್, ಕಾಟನ್, ಆ್ಯಂಟಿ ಸೆಪ್ಟಿಕ್ ಕ್ರೀಮ್, ಪ್ಲಾಸ್ಟರ್ ಸೇರಿದಂತೆ ತುರ್ತು ಔಷಧಿಗಳನ್ನು ಒದಗಿಸಲಾಗಿದೆ.

ಶಾಂತಿಯುತ ಮತದಾನಕ್ಕೆ ವ್ಯಾಪಕ ಭದ್ರತೆ:-

       ಗೋವಾ ರಾಜ್ಯದ 03 ಪೊಲೀಸ್ ಸುರಕ್ಷತಾ ಪಡೆ(ಎಸ್‍ಎಎಫ್) 33(ಡಿಎಆರ್) ತುಕಡಿಗಳು, 13(ಕೆಎಸ್‍ಆರ್‍ಪಿ) ತುಕಡಿ ಸೇರಿದಂತೆ 4100ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಜಿಲ್ಲೆಯಲ್ಲಿ ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ವಂಶಿಕೃಷ್ಣ ಅವರು ತಿಳಿಸಿದ್ದಾರೆ.

      ಜಿಲ್ಲೆಯಲ್ಲಿ 536 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿದ್ದು, ಈ ಮತಗಟ್ಟೆಗಳಿಗೆ ವಿಶೇಷ ಭದ್ರತೆಯನ್ನು ಒದಗಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕಾಗಿ 4 ರಾಜ್ಯ ಆರ್ಮ್‍ಡ್ ಪೊಲೀಸ್, 33 ಡಿಎಆರ್, 13 ಕೆಎಸ್‍ಆರ್‍ಪಿ ತುಕಡಿ, 26 ಅರಣ್ಯ ರಕ್ಷಕರು, 2433 ಪೊಲೀಸ್ ಪೇದೆಗಳು, 1314 ಹೋಮ್‍ಗಾಡ್ರ್ಸ್, 11(ಡಿವೈಎಸ್‍ಪಿ), 40 ಪೊಲೀಸ್ ಇನ್ಸ್‍ಪೆಕ್ಟರ್ 71 ಪಿಎಸ್‍ಐ, 175 ಎಎಸ್‍ಐ ಸೇರಿದಂತೆ 4100 ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

      ಒಟ್ಟಾರೆ ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ಮುಕ್ತ ಮತದಾನ ನಡೆಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯಲ್ಲಿರುವ ಮತದಾರರು ಮತಗಟ್ಟೆಗೆ ಬಂದು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ|| ಕೆ. ರಾಕೇಶ್ ಕುಮಾರ್ ಮತದಾರರಲ್ಲಿ ಮನವಿ ಮಾಡಿದ್ದಾರೆ.

ವಿವಿಎಂ ವೀಕ್ಷಕರ ಭೇಟಿ:-

      ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ತುಮಕೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಕೇಂದ್ರ ಚುನಾವಣಾ ಆಯೋಗದ ಇವಿಎಂ ಹಾಗೂ ವಿವಿಪ್ಯಾಟ್ ವೀಕ್ಷಕರಾಗಿ ಸೋನಿಯಾ ಶರ್ಮ ಅವರು ಆಗಮಿಸಿ ಪರಿಶೀಲಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap