ಕಾಂಗ್ರೆಸ್ ನಲ್ಲಿ ಮತ್ತೆ ದಲಿತ ಮುಖ್ಯಮಂತ್ರಿ ಕೂಗು…!!!

ಬೆಂಗಳೂರು

       ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯ ಕಾಂಗ್ರೆಸ್ನಲಲ್ಲಿ ಮತ್ತೆ ದಲಿತ ಮುಖ್ಯಮಂತ್ರಿ ವಿಚಾರ ಸದ್ದು ಮಾಡಲಾರಂಭಿಸಿದೆ. ಮುಖ್ಯಮಂತ್ರಿ ಪದವಿ ತಪ್ಪುವುದಕ್ಕೆ ಪಕ್ಷದೊಳಗಿನ ನಾಯಕರು ಕಾರಣ ಎನ್ನುವ ಮೂಲಕ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ವಪಕ್ಷ ಕಾಂಗ್ರೆಸ್ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ತಮಗೆ ಮೂರು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿದ್ದು, ಒಲ್ಲದ ಮನಸಿನಿಂದ ಉಪಮುಖ್ಯಮಂತ್ರಿ ಹುದ್ದೆಗೆ ಒಪ್ಪಿಕೊಳ್ಳಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

        ದಾವಣಗೆರೆಯ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಶಿವಯೋಗಿ ಮಂದಿರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ದಲಿತ ನಾಯಕರಲ್ಲಿರುವ ಒಡಕಿನಿಂದಾಗಿ ಪಕ್ಷದ ಹಿರಿಯ ನಾಯಕರಿಗೂ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿ ಹೋಗಿದೆ. ಸರ್ಕಾರದಲ್ಲಿ ಛಲವಾದಿ ಸಮಾಜಕ್ಕೆಅನ್ಯಾಯವಾಗುತ್ತಿದ್ದು, ಕಾನೂನಾತ್ಮಕ ಮೀಸಲಾತಿ ಕೊಟ್ಟರೂ ಬಡ್ತಿಯಲ್ಲಿ ಅನ್ಯಾಯವಾಗಿದೆ. ತಮ್ಮ ಸಮಾಜಕ್ಕೆ ಆಗುತ್ತಿರುವ ಅನ್ಯಾಯವನ್ನು ಹೊರಹಾಕಲೆಂದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದಾಗಿ ಹೇಳುವ ಮೂಲಕ ಛಲವಾದಿ ಸಮುದಾಯದಿಂದ ತಾವು ಮುಖ್ಯಮಂತ್ರಿ ಆಕಾಂಕ್ಷಿ ಎಂಬುದನ್ನು ಅವರು ಒತ್ತಿ ಹೇಳಿದರು.

        ದಲಿತ ನಾಯಕರಾಗಿದ್ದ ಬಿ.ಬಸವಲಿಂಗಪ್ಪ, ಕೆ.ಹೆಚ್.ರಂಗನಾಥ್ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕಿತ್ತು. ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಪ್ರಯತ್ನದಲ್ಲಿ ಒಂದು ಕಾಲು ಇಟ್ಟು ಹೊರಗೆ ನಡೆದಿದ್ದಾರೆ. ಅವರು ರಾಷ್ಟ್ರರಾಜಕಾರಣದಲ್ಲಿ ಇನ್ನಷ್ಟು ಉತ್ತಮ ಹುದ್ದೆಗಳನ್ನು ಪಡೆಯಲಿ ಎನ್ನುವುದನ್ನು ಉಲ್ಲೇಖಿಸಿದ ಪರಮೇಶ್ವರ್, ಮಲ್ಲಿಕಾರ್ಜುನ್ ಖರ್ಗೆ ಬಳಿಕ ತಾವೇ ದಲಿತ ಮುಖ್ಯಮಂತ್ರಿಗೆ ಅರ್ಹ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದರು.

ಪರಮೇಶ್ವರ್, ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಿಯಾಗಲಿ ಎಂದು ಹೇಳಿದ್ದು ಏಕೆ .?

        ಈ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಕೇಳಿ ಬಂದಾಗಲೆಲ್ಲ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹೆಸರು ಮೊದಲು ಪ್ರಸ್ತಾಪವಾಗುತ್ತದೆ. ಆ ನಂತರ ಪರಮೇಶ್ವರ್ ಅವರಿಗೆ ಮನ್ನಣೆ ಲಭಿಸುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಪರಮೇಶ್ವರ್ ಇಬ್ಬರೂ ಛಲವಾದಿ ಸಮುದಾಯದ ದಲಿತ ಬಲಗೈ ಸಮುದಾಯಕ್ಕೆ ಸೇರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸಂಸದರಾಗುವ ಮೂಲಕ ಈಗಾಗಲೇ ರಾಷ್ಟ್ರರಾಜಕಾರಣಕ್ಕೆ ಕಾಲಿಟ್ಟಿದ್ದು, ರಾಜ್ಯ ರಾಜಕಾರಣದಲ್ಲಿ ಪುತ್ರ ಪ್ರಿಯಾಂಕ ಖರ್ಗೆ ಅವರನ್ನು ಬೆಳೆಸಲಾರಂಭಿಸಿದ್ದಾರೆ. ಹೀಗಾಗಿ ಮಲ್ಲಿಕಾರ್ಜುನ್ ಖರ್ಗೆ ಅವರು ರಾಷ್ಟ್ರರಾಜಕಾರಣದಲ್ಲಿ ಮುಂದುವರೆದರೆ ರಾಜ್ಯ ಕಾಂಗ್ರೆಸ್ನಮಲ್ಲಿ ದಲಿತ ನಾಯಕ, ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವುದನ್ನು ಪರಮೇಶ್ವರ್ ಪರೋಕ್ಷ ಸಂದೇಶ ಸಾರಿದರು.

        ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರರಾಜಕಾರಣದಲ್ಲಿಯೇ ಮುಂದುವರೆಯಲಿ ಎನ್ನುವ ಪರೋಕ್ಷ ಸಂದೇಶವನ್ನು ಕಾಂಗ್ರೆಸ್ ಹಿರಿಯ ನಾಯಕ ಶಾಸಕ ಶಾಮನೂರು ಶಿವಶಂಕರಪ್ಪ ಸಹ ಸಾರಿದ್ದಾರೆ. ನರೇಂದ್ರ ಮೋದಿ ಅವರನ್ನು ಎದುರಿಸುವ ತಾಕತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗಿದೆ. ರಾಹುಲ್ ಗಾಂಧಿ ಅವರಿಂದ ಮೋದಿ ಅವರನ್ನು ಎದುರಿಸಲು ಸಾಧ್ಯವಿಲ್ಲ. ಖರ್ಗೆ ಅವರಿಗೆ ಮುಖ್ಯಮಂತ್ರಿಯಾಗುವುದಕ್ಕೆ ದೇಶದ ಪ್ರಧಾನಿಯಾಗುವ ಅರ್ಹತೆ ಇದೆ ಎಂದು ಹೇಳುವ ಮೂಲಕ ಪರಮೇಶ್ವರ್ ಪರ ಮಾತನಾಡಿದ್ದಾರೆ.

ಅಲ್ಲದೇ ಹರಿಹರ ಶಾಸಕ ಎಸ್.ರಾಮಪ್ಪ ಸಹ ಪರಮೇಶ್ವರ್ ಪರ ಧ್ವನಿಗೂಡಿಸಿದ್ದಾರೆ. ತಮ್ಮ ರಾಜಕೀಯ ಗುರುಗಳಾಗಿರುವ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಆಗುವುದು ಶತಸಿದ್ಧ ಎಂದು ಭವಿಷ್ಯ ನುಡಿದರು. ಪರಮೇಶ್ವರ್ ಅವರು 2014ರಲ್ಲಿ ಪಕ್ಷದಿಂದ ಫಾರಂ ಕೊಟ್ಟು ರಾಜಕೀಯಕ್ಕೆ ಅವಕಾಶ ಮಾಡಿ ಕೊಟ್ಟಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪರಮೇಶ್ವರ್ ಕೊಡುಗೆ ಅಪಾರ ಎಂದರು.

ಅದೇನೇ ಇರಲಿ ದಲಿತ ಮುಖ್ಯಮಂತ್ರಿ ವಿಚಾರ ಮತ್ತೆ ಸುದ್ದು ಮಾಡಿದ್ದು, ನಾಯಕರುಗಳು ದಲಿತ ಪರ ನೀಡಿದ ಹೇಳಿಕೆಗಳು ಕಾಂಗ್ರೆಸ್ ಪಕ್ಷದೊಳಗೆ ಸಂಚಲನ ಮೂಡಿಸಿದ್ದು ಸುಳ್ಳುಲ್ಲ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ