ಹುಳಿಯಾರು:
ಹಂದನಕೆರೆ ಹೋಬಳಿಯ ಮತ್ತಿಘಟ್ಟದಲ್ಲಿ ರೈತರ ರಾಸುಗಳಿಗೆ ವಿತರಿಸಲು ತಂದಿದ್ದ ಮೇವು ಮಳೆಗೆ ಸಂಪೂರ್ಣ ನೆನೆದು ಹೋಗಿದ್ದ ಕಾರಣ ವಿತರಣೆಯಲ್ಲಿ ಗೊಂದಲ ಉಂಟಾಗಿತ್ತು.
ತಾಲೂಕು ಆಡಳಿತದಿಂದ ನಡೆಯುತ್ತಿರುವ ಮೇವು ಬ್ಯಾಂಕ್‍ನಲ್ಲಿ ವಿತರಣೆ ಮಾಡುವ ಒಣ ಮೇವು ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ನೆನೆದು ಹೋಗಿತ್ತು. ಅದೇ ಮೇವನ್ನು ರೈತರಿಗೆ ವಿತರಣೆ ಮಾಡಲು ಮುಂದಾದ ವೇಳ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಮೇವು ತುಂಬಿದ್ದ ಲಾರಿಗೆ ಟಾರ್ಪಲ್ ಹೊದಿಸಿದ್ದರೆ ಮೇವು ನೆನೆಯುತ್ತಿರಲಿಲ್ಲ. ಮೇವು ಪೂರೈಕೆ ಮಾಡುವವರು ಮೇವು ತೂಕ ಹೆಚ್ಚು ಬರುತ್ತದೆಂದು ನೆನೆಸಿದ್ದಾರೆ ಎಂದು ರೈತರು ದೂರಿದರು.
ಇತ್ತೀಚಿನ ದಿನಗಳಲ್ಲಿ ಪ್ರತಿ ದಿನ ಮಳೆ ಬರುತ್ತಿರುವುದರಿಂದ ಮೇವು ನೆನೆಯದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ನಿರ್ವಹಣೆ ಮಾಡಬೇಕು ಎಂದು ರೈತರು ಒತ್ತಾಯಿಸಿದರು.