ಚಿಕ್ಕನಾಯಕನಹಳ್ಳಿ
ತಾಲ್ಲೂಕು ಕಛೇರಿಗೆ ಸಾರ್ವಜನಿಕರು ತಿದ್ದುಪಡಿ ಮುಂತಾದ ಕಂದಾಯ ಇಲಾಖೆಗೆ ಸೇರಿದ ಅರ್ಜಿಗಳನ್ನು ನೀಡಿದರೆ 3ತಿಂಗಳಲ್ಲಿ ಪರಿಹರಿಸಬೇಕು ಇಲ್ಲದೇ ಇದ್ದರೆ ಹಿಂಬರಹ ನೀಡುವಂತೆ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತಾಲ್ಲೂಕಿನ ಮತಿಘಟ್ಟದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನಸ್ಪಂದನ ಕಾರ್ಯಕ್ರಮ ಮಾಡುವುದು ಸಾರ್ವಜನಿಕರು ಬಂದು ಸುಮ್ಮನೆ ಕುಳಿತುಕೊಂಡು ಹೋಗುವಂತೆ ಮಾಡುವುದಕ್ಕಲ್ಲ, ಕಛೇರಿಗೆ ಎಷ್ಟು ಅರ್ಜಿ ಬಂದಿದೆ, ಎಷ್ಟಕ್ಕೆ ಪರಿಹಾರ ನೀಡಿದ್ದೇವೆ, ಉಳಿದ ಅರ್ಜಿಗಳೆಷ್ಟು ಎಂಬ ಮಾಹಿತಿಯನ್ನು ನೀಡಬೇಕು ಎಂದ ಅವರು, ಜನರು ತಮ್ಮ ಊರಿನ ಸಮಸ್ಯೆಗಳ ಬಗ್ಗೆ ಜನಸ್ಪಂದನ ಕಾರ್ಯಕ್ರಮದಲ್ಲಿ ನನ್ನ ಗಮನಕ್ಕೆ ತಂದರೆ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು.
ಸಭೆಗಳನ್ನು ಪ್ರತಿಷ್ಠೆಗೆ ಹಾಗೂ ಮೆಚ್ಚಿಸುವದಕ್ಕಾಗಿ ಕರೆಯುವುದಿಲ್ಲ, ಜನರ ಸಮಸ್ಯೆಗಳ ಬಗ್ಗೆ ಪರಿಹರಿಸಲು ಕರೆದಿದ್ದೇವೆ, ಎಲ್ಲೆಲ್ಲಿ ಸಭೆಗಳನ್ನು ಮಾಡುತ್ತೇವೆ ಅಲ್ಲಲ್ಲೇ ಜನರ ಸಮಸ್ಯೆಗಳನ್ನು ಪರಿಹರಿಸಬೇಕು, ಇದರಿಂದ ಮುಂದಿನ ಸಭೆಗೆ ಜನರು ಬರುತ್ತಾರೆ ಎಂದರಲ್ಲದೆ ಹಂದನಕೆರಯ ನಾಡಕಛೇರಿಯ ಬಗ್ಗೆ ಸಾಕಷ್ಟು ದೂರುಗಳಿದ್ದು ಇದರ ಬಗ್ಗೆ ತಹಶೀಲ್ದಾರ್‍ರವರ ಹತ್ತಿರ ಮಾತನಾಡಿದ್ದೇನೆ, ಜನರನ್ನು ಕಾಯಿಸಬೇಡಿ, ಜನರ ಕೆಲಸವನ್ನು ಸರಿಯಾಗಿ ಮಾಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ರಾಮಚಂದ್ರಯ್ಯ, ತಹಶೀಲ್ದಾರ್ ತೇಜಸ್ವಿನಿ, ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ, ಬಿಇಓ ಕಾತ್ಯಾಯಿನಿ.ಹೆಚ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
