ಚಳ್ಳಕೆರೆ
ಸುಧೀರ್ಘ ಕಾಲ ರಾಷ್ಟ್ರವನ್ನಾಳಿದ ಕಾಂಗ್ರೆಸ್ ಪಕ್ಷದ ಸಾಧನೆಯ ಬಗ್ಗೆ ಯಾವ ಮುಖಂಡರೂ ಮಾತನಾಡುವ ಸ್ಥಿತಿಯಲ್ಲಿಲ್ಲ. ಕಾರಣ ಪ್ರಧಾನ ಮಂತ್ರಿಯಾಗಿ ನರೇಂದ್ರಮೋದಿ ತಮ್ಮ ಮೊದಲ ಅವಧಿಯಲ್ಲೇ ನಿರೀಕ್ಷೆಗೂ ಮೀರಿದ ಸಾಧನೆಯನ್ನು ಮಾಡುವ ಮೂಲಕ ಕೋಟಿ, ಕೋಟಿ ಭಾರತೀಯರ ಮನಸನ್ನು ಗೆದಿದ್ದು, ಮತ್ತೊಮ್ಮೆ ಮೋದಿ ಅಭಿಯಾನ ಕಾರ್ಯಕ್ರಮ ಯಶಸ್ಸಿಯಾಗಿ ಸಾಗಿದೆ ಎಂದು ಬಿಜೆಪಿ ಪ್ರಭಾವಿ ಮುಖಂಡ, ನಿವೃತ್ತ ಕೆಎಎಸ್ ಅಧಿಕಾರಿ ಎಂ.ಎಸ್.ಜಯರಾಂ ತಿಳಿಸಿದರು.
ಅವರು, ಶನಿವಾರ ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ವಿವಿಧ ಪಕ್ಷಗಳ ಮುಖಂಡರ ಪಕ್ಷ ಸೇರ್ಪಡೆ ಹಾಗೂ ಮತ್ತೊಮ್ಮೆ ಮೋದಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಧಾನ ಮಂತ್ರಿಯಾಗಿ ನರೇಂದ್ರಮೋದಿಯವರು ರಾಷ್ಟ್ರದ ಆಡಳಿತ ಚುಕ್ಕಾಣಿಯನ್ನು 2014ರಿಂದ ಪಡೆದಿದ್ದು, ಇಲ್ಲಿಯ ತನಕ ಎಲ್ಲಾ ಹಂತದಲ್ಲೂ ರಾಷ್ಟ್ರದ ಗೌರವವನ್ನು ಸಂರಕ್ಷಿಸುವಲ್ಲಿ ಯಶಸ್ಸಿಯಾಗಿದ್ಧಾರೆ. ಕೇವಲ ಭಾರತೀಯರಷ್ಟೇಯಲ್ಲದೆ ವಿಶ್ವದ ಎಲ್ಲಾ ರಾಷ್ಟ್ರಗಳ ನಾಯಕರೂ ಸಹ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಸ್ನೇಹಕ್ಕಾಗಿ ಹಂಬಲಿಸುತ್ತಾರೆ.
ಮತ್ತೊಮ್ಮೆ ಈ ರಾಷ್ಟ್ರದ ಪ್ರಧಾನಿಯಾಗಿ ನರೇಂದ್ರಮೋದಿಯವರೇ ಆಯ್ಕೆಯಾಗಬೇಕಿದೆ. ಈ ಕಾರ್ಯವನ್ನು ಮತದಾರರು ಮಾಡಬೇಕಿದ್ದು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಮತದಾರರನ್ನು ಜಾಗೃತಿಗೊಳಿಸಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುವಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳ ಯುವ ಮುಖಂಡರಾದ ಚಿತ್ರಯ್ಯನಹಟ್ಟಿ ಎಸ್.ನಾಗರಾಜ, ಪಾಲಯ್ಯ, ವೆಂಕಟೇಶ್ವರನಗರ ಬಾಲು, ಆಟೋ ಬಸವರಾಜು, ಅಲ್ಲಾಬಕಾಕ್ಷಿ, ಭರತ್, ಜಯಣ್ಣ, ವೀರಣ್ಣ, ಅಶೋಕ, ಶಿವಣ್ಣ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಯುವಕರು ಬಿಜೆಪಿಗೆ ಸೇರ್ಪಡೆಯಾದರು.
ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ಮಾತನಾಡಿ, ಮತ್ತೊಮ್ಮೆ ಮೋದಿ ಅಭಿಯಾನ ಕಾರ್ಯಕ್ರಮ ಹೆಚ್ಚು ಪ್ರಭಾವವನ್ನು ಬೀರುತ್ತಿದ್ದು, ವಿಶೇಷವಾಗಿ ಯುವ ಮತದಾರರು ಮತ್ತು ಮಹಿಳಾ ಮತದಾರರು ನರೇಂದ್ರಮೋದಿಯವರೇ ಮತ್ತೊಮ್ಮೆ ಈ ರಾಷ್ಟ್ರದ ಪ್ರಧಾನಿಯನ್ನಾಗಿ ಮಾಡಬೇಕಿದೆ. ಚುನಾವಣಾ ಸಂದರ್ಭದಲ್ಲಿ ನಾವು ಮನೆ ಮನೆಗೂ ಭೇಟಿ ನೀಡಿ ಮೋದಿಯವರಿಗೆ ಮತ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದ್ಧಾರೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಮತ್ತೊಮ್ಮೆ ಮೋದಿ ಅಭಿಯಾನ ಕಾರ್ಯಕ್ರಮವನ್ನು ಹಂತ ಹಂತವಾಗಿ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಶಿವಪುತ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಮ್ಮ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಟಿ.ಮಂಜುನಾಥ, ನಗರಸಭಾ ಸದಸ್ಯ ಎಸ್.ಜಯಣ್ಣ, ಬೋರನಾಯಕ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕರೀಕೆರೆ ತಿಪ್ಪೇಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಜಗದಾಂಬ, ಕಾರ್ಯದರ್ಶಿ ಇಂಧುಮತಿ, ಶಿವಅನ್ನಪೂರ್ಣಮ್ಮ, ಮಂಗಳಮ್ಮ, ಪ್ರಮೀಳಮ್ಮ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ವೆಂಕಟೇಶ್, ಮಾಜಿ ನಗರಸಭಾ ಸದಸ್ಯರಾದ ಡಿ.ಕೆ.ಸೋಮಶೇಖರ್, ಶ್ರೀಕಾಂತ್, ರಂಗಣ್ಣ, ಈಶ್ವರನಾಯಕ, ವೀರೇಶ್, ರಂಗಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.