ತುಮಕೂರು
ಯುವ ಸಮುದಾಯದ ಪ್ರಚಂಢ ಶಕ್ತಿಯ ಉಪಯೋಗ ರಾಷ್ಟ್ರ ನಿರ್ಮಾಣಕ್ಕಾಗಿ ವಿನಿಯೋಗವಾಗಬೇಕಿದೆ. ಭ್ರಷ್ಟಚಾರದ ಗುರುತ್ವಾಕರ್ಷಣೆಯನ್ನು ಮೀರಿ ಯುವ ಸಮುದಾಯ ಸಶಕ್ತವಾಗಿ ಬೆಳೆಯಬೇಕಿದೆ ಎಂದು ರಾಜ್ಯ ಉಚ್ಛನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜ್ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಮಾತೃಭುಮಿ ಯುವ ಸಂಘದ 24ನೇ ವರ್ಷದ ಸಂಭ್ರಮದಲ್ಲಿ 24 ಮಂದಿ ಸಾಧಕರಿಗೆ ಮಾತೃಭೂಮಿ ರಾಜ್ಯ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಅವರು, ಯುವ ಪೀಳಿಗೆಯಲ್ಲಿ ಸಂಘಟನೆ ಮಾಡುವವರು ಸಾಕಷ್ಟು ಮಂದಿ ಇದ್ದಾರೆ. ಅಂತಹವರು ಒಟ್ಟಾಗಿ ಸೇರಿಕೊಂಡು ಭ್ರಷ್ಟಾಚಾರದ ವಿರೋಧಿ ಸಂಘಟನೆಯನ್ನು ಸ್ಥಾಪಿಸುವವರಿಗೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ಅದಕ್ಕಾಗಿ ಎಲ್ಲಿಯವರೆಗೂ ಆದರೂ ಬರಲು ನಾನು ಸಿದ್ಧನಿದ್ದೇನೆ ಎಂದರು.
ನಮ್ಮ ದೇಶಕ್ಕೆ ಅಂಟಿರುವ ಬಹುದೊಡ್ಡ ರೋಗ ಎಂದರೆ ಅದು ಭ್ರಷ್ಟಾಚಾರ. ಇಂದು ಜಾತಿಯತೆ, ಅಪರಾದ, ಅನೈತಿಕತೆಗಳು ಭ್ರಷ್ಟಾಚಾರದ ಕುಡಿಗಳಾಗಿವೆ. ಭಷ್ಟಾಚಾರವು ಸುಮಾರು 60 -70 ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದೆ. ಭ್ರಷ್ಟಾಚಾರದ ಶಕ್ತಿ ಗುರುತ್ವಾಕರ್ಷಣೆಗಿಂತ ಹೆಚ್ಚಿದೆ. ಅದನ್ನು ಮೀರಿ ಭ್ರಷ್ಟಾಚಾರ ವಿರೋಧಿ ಸಂಘಟನೆ ಬೆಳೆಯಬೇಕು. ಆ ಸಂಘಟನೆಗೆ ನನ್ನಂತವರನ್ನು ಸೇರಿಸಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕು ಎಂದರು.
ಮಾತೃಭೂಮಿ ಎಂಬುದನ್ನು ಕಳೆದ 24 ವರ್ಷಗಳಿಂದ ಬೆಳೆಸಿಕೊಂಡು ಬಂದಿರುವುದಲ್ಲದೆ, ರಾಜ್ಯದ ಇತರೆ ಮೂಲೆಗಳಿಂದ ಸಾಹಿತಿಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹ ನೀಡುತ್ತಿರುವುದು ಉತ್ತಮವಾದ ಕೆಲಸವಾಗಿದೆ. ಒಂದು ರೀತಿಯಲ್ಲಿ ರಾಜಕೀಯ ಪಕ್ಷಗಳನ್ನು ಬೆಳೆಸಬಹುದು ಆದರೆ ಸಂಘಟನೆಗಳನ್ನು ಬೆಳೆಸುವುದು ಕಷ್ಟ ಎಂದರಲ್ಲದೆ ಮಾತೃಭೂಮಿ ಸಂಘಕ್ಕೆ ಇಂತಿಷ್ಟು ಹಣ ನೀಡಿ ಸಹಾಯ ಮಾಡಿರುವುದರ ಬಗ್ಗೆ ತಿಳಿಸಿದರು.
ಒಮ್ಮೆ ರಾಜ್ಯದಿಂದ ಪ್ರಶಸ್ತಿ ದೊರೆತಾಗ 1 ಲಕ್ಷ ರೂ.ಗಳನ್ನು ಗೌರವಧನವಾಗಿ ನೀಡಿದ್ದರು. ಆದರೆ ನಾನು ಸರ್ಕಾರಿ ನೌಕರರನಾಗಿ ದುಡಿದಿದ್ದು ನಾನು ಸಾಯುವವರಗೆ ಸರ್ಕಾರದಿಂದ ಪಿಂಚಣಿ ಬರುತ್ತದೆ. ಹಾಗಾಗ ಈ ಹಣವನ್ನು ನನ್ನ ಸ್ವಂತಿಕೆಗೆ ಬಳಸಬಾರದು ಎಂದು ತೀರ್ಮಾನಿಸಿ 25ಸಾವಿರ ರೂಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ, 25 ಸಾವಿರ ರೂಗಳನ್ನು ಕನ್ನಡ ಮಾಧ್ಯಮದ ಶಾಲೆಯ ಬಡಮಕ್ಕಳಿಗೆ ಎಂದು ನೀಡಲಾಗಿದೆ. 25 ಸಾವಿರ ರೂಗಳನ್ನು ಅಂಧರ ಸಂಸ್ಥೆಗೆ ನೀಡಿದ್ದೇನೆ. ಉಳಿದ 25 ಸಾವಿರ ರೂಗಳನ್ನು ಯಾವ ಮಠಾಧೀಶರು ಭ್ರಷ್ಟಾಚಾರ ವಿರುದ್ಧ ಅಭಿಯಾನ ಪ್ರಾರಂಭ ಮಾಡುತ್ತಾರೋ ಅವರಿಗೆ ನೀಡಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಪುಸ್ತಕ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷರಾದ ಡಾ. ಬಂಜಗೆರೆ ಜಯಪ್ರಕಾಶ್‍ರವರು ಯುವಕರಿಗೆ ಪ್ರೇರಣದಾಯಕವಾಗಿ ಸರ್ವಜನಹಿತಕ್ಕಾಗಿ, ಸರ್ವತೋಮುಖ ಬೆಳವಣಿಗೆಗೆ ತಮ್ಮ ಸಾಂಸ್ಕøತಿಕ ಸೇವೆಯನ್ನು ಸಲ್ಲಿಸುತ್ತಿರುವ ಇಂತಹ ಸಂಸ್ಥೆಗಳೊಂದಿಗೆ ಯುವ ಸಮುದಾಯ ಇರಬೇಕಿದೆ. ದ್ವೇಷಾಸೂಯೆಗಳ ಜಾತಿಮೇಲಾಟಗಳ ಬಲಿಷ್ಠರ ನಡುವೆ ದಟ್ಟದರಿದ್ರರು ಕಷ್ಟಪಡುವುದು ತಪ್ಪಿಲ್ಲ, ಇಂತಹವರ ಸರ್ವತೋಮುಖ ಬೆಳವಣಿಗೆಗೆ ಅವರೊಡನೆ ಇದ್ದೇವೆ ಎಂಬ ಧೈರ್ಯತುಂಬುವ ಸ್ಥೈರ್ಯವನ್ನು ಯುವ ಸಮುದಾಯ ರೂಡಿಸಿಕೊಳ್ಳಲು ಕರೆ ನೀಡಿದರು.
ದೇಶದ ಅಭಿವೃದ್ಧಿಯೆಂದರೆ ಶ್ರೀಮಂತಿಕೆಯೆಂದುಕೊಳ್ಳುವುದಾದರೆ ಅಮೇರಿಕಾದಂತಹ ದೇಶ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದ್ದು, ಅತಿ ಕಡಿಮೆ ನೆಮ್ಮದಿಯನ್ನು ಹೊಂದಿದ ದೇಶವಾಗಿದೆ. ಕೇವಲ ಗಡಿ ರೇಖೆಗಳನ್ನೇ ಇಂದು ದೇಶ ಎಂದು ಕರೆಯುತ್ತೇವೆ. ಅಲ್ಲಿರುವ ಜನರಿಂದ ದೇಶವಾಗಿದೆ. ಅವರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ನುಡಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡರು ಮಾತನಾಡಿ, ಸಾಮಾಜಿಕ ಬದ್ದತೆಯನ್ನು ರೂಡಿಸಿಕೊಂಡಾಗ ಕ್ಲಿಷ್ಟಕರವಾದ ಸನ್ನಿವೇಶವನ್ನೂ ಬದಲಾಯಿಸುವ ಶಕ್ತಿ ಯುವಕರಿಗೆ ಬರುತ್ತದೆ. ನೆರೆಹೊರೆಯವರೊಂದಿಗೆ ಕುಟುಂಬದವರೊಂದಿಗೆ ಉತ್ತಮವಾದ ಗಟ್ಟಿಯಾದ ಸಂಬಂದಗಳನ್ನು ನಿರ್ಮಿಸಿಕೊಳ್ಳುವ ಅನಿವಾರ್ಯತೆಯಿದೆ. ಭಾರತ ಸಂಪನ್ಮೂಲಭರಿತ ದೇಶವಾಗಿದ್ದು, ಯುವ, ಸಾಂಸ್ಕತಿಕ, ಸಜ್ಜನಿಕೆ ಹಲವು ನಿಟ್ಟಿನಲ್ಲಿ ನಮ್ಮತ್ತ ವಿಶ್ವದ ಚಿತ್ತವನ್ನು ಸೆಳೆದಿದ್ದೇವೆ. ತಮ್ಮ ಆದಾಯದಲ್ಲಿ ಸ್ವಲ್ಪ ಹಣವನ್ನು ಕೊಡುಗೆಯಾಗಿ ನೀಡುವ ಜನಗಳ ನಡುವೆ, ಪಾಲ್ಗೊಳ್ಳುವಿಕೆಯಿಂದಾಗಿ ಮಾತೃಭೂಮಿ ಸಂಸ್ಥೆಯಂತಹ ಚಲನಾತ್ಮಕ ಧೋರಣೆ ಹೊಂದಿದ ಸಂಸ್ಥೆಗಳು ಅನುಕರಣೀಯವಾಗಿವೆ ಎಂದರು.
ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾನಿಲಯದ ಜಾನಪದ ವಿದ್ವಾಂಸರಾದ ಡಾ ಬಸವರಾಜ್ ನೆಲ್ಲಿಸರ ಅವರು ಜನರ ಮನಸ್ಸನ್ನು ಉತ್ತಮ ಹಾದಿಗೆ ತರುವಕಡೆ ಸಂಘಟನೆಗಳು ಕಾರ್ಯನಿರ್ವಹಿಸಬೇಕಿದೆ. ತಿಂದು ಬದುಕುವುದಕ್ಕಿಂತ ತಿಳಿದು ಬದುಕುವುದು ಮುಖ್ಯವಾಗಿದೆ. ಅವಗುಣಗಳನ್ನು ಕಳೆದು ಶಿವಗುಣಗಳನ್ನು ಬೆಳೆಸಬೇಕಿದೆ. ಲೋಕಾನುಭವಕ್ಕಿಂತ ದೊಡ್ಡ ಅನುಭವವಿಲ್ಲ. ಇಂತಹ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಅತ್ಯಂತ ದೊಡ್ಡ ವಿಷಯವೆಂದರು. ಆತ್ಮಾವಲೋಕನದಿಂದ ಉತ್ತಮ ದೇಶ ಕಟ್ಟುವ ಕಡೆಗೆ ಯುವ ಪಡೆ ಸಾಗಬೇಕಿದೆ ಎಂದು ತಿಳಿಸಿದರು.
ಮಾತೃಭೂಮಿ ಯುವಕ ಸಂಘದ ಸಂಸ್ಥಾಪನ ಅಧ್ಯಕ್ಷರಾದ ಡಾ.ಎಸ್ ಬಾಲಾಜಿ, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷರಾದ ಪ್ರೊ.ಶ್ರೀನಿವಾಸಮೂರ್ತಿ ಎಲ್, ಕಸಾಪ ಅಧ್ಯಕ್ಷೆ ಬಾಹ ರಮಾಕುಮಾರಿ, ಅಂತಾರಾಷ್ಟ್ರೀಯ ಚಿತ್ರಕಲಾವಿದರಾದ ಎಂ. ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು,